ADVERTISEMENT

ಸ್ಥಳಗಳ ಹೆಸರು ಬದಲಾವಣೆ: ಕಾಸರಗೋಡು ಕನ್ನಡಿಗರ ಆತಂಕ

ಯಾವುದೇ ನಿರ್ಧಾರ ಕೈಗೊಂಡಿಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ

ಪಿಟಿಐ
Published 28 ಜೂನ್ 2021, 20:38 IST
Last Updated 28 ಜೂನ್ 2021, 20:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುವನಂತಪುರ: ಕೇರಳದಲ್ಲಿ ಕನ್ನಡ ಹೆಸರು ಇರುವ ಸ್ಥಳಗಳ ಹೆಸರುಗಳನ್ನು ಮಲಯಾಳಂ ಭಾಷೆಗೆ ಬದಲಾಯಿಸುವ ಪ್ರಯತ್ನ ಹಲವು ವರ್ಷಗಳಿಂದಲೇ ನಡೆಯುತ್ತಿದೆ ಎಂದು ಕನ್ನಡಿಗರು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಕೆಲವು ಉದಾಹರಣೆಗಳನ್ನು ಸಹ ನೀಡಿದ್ದಾರೆ.ಕಾಸರಗೋಡಿನ ಎನ್ಮಾಕಜೆ ಪಂಚಾಯಿತಿ ವ್ಯಾಪ್ತಿಯಲ್ಲಿನ ‘ಮೈರೆ’ ಗ್ರಾಮದ ಹೆಸರನ್ನು ಬದಲಾಯಿಸಿ ‘ಶೇಣಿ’ ಎಂದು ಹಲವು ವರ್ಷಗಳ ಹಿಂದೆ ಬದಲಾಯಿಸಲಾಯಿಸಲಾಗಿತ್ತು.

2013ರಲ್ಲಿ ‘ಮೈರೆ’ ಹೆಸರು ಬದಲಾಯಿಸುವ ಎನ್ಮಾಕಜೆ ಪಂಚಾಯಿತಿ ಪ್ರಸ್ತಾವಕ್ಕೆ ಕೇರಳ ಸರ್ಕಾರ ಒಪ್ಪಿಗೆ ನೀಡಿತು. ಮಲಯಾಳಿಯಲ್ಲಿ ‘ಮೈರೆ’ಗೆ ನಿಂದನೆಯ ಅರ್ಥ ಬರುತ್ತದೆ ಎಂದು ವಾದಿಸಲಾಗಿತ್ತು. ಜತೆಗೆ, ಈ ಸ್ಥಳದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಮುಜುಗರವಾಗುತ್ತಿತ್ತು. ಹೀಗಾಗಿ, ಒತ್ತಡ ಹಾಕಿ ಹೆಸರು ಬದಲಾಯಿಸಲಾಯಿತು ಎಂದು ಹೇಳಲಾಗಿದೆ.

ADVERTISEMENT

ಆದರೆ, ಇದು ಕನ್ನಡದ ಹೆಸರು ’ಮಯೂರು ಪಾರ’ ಮೂಲದಿಂದ ಬಂದಿದ್ದು, ನವಿಲುಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಸ್ಥಳವಾಗಿದೆ ಎಂದು ಕನ್ನಡಿಗರು ವಿವರಿಸಿದ್ದಾರೆ.

ಇದೇ ರೀತಿಯಲ್ಲಿ ಸದ್ಯ ಗಡಿ ಪ್ರದೇಶದಲ್ಲಿನ ಗ್ರಾಮಗಳ ಕನ್ನಡದ ಹೆಸರುಗಳನ್ನು ಬದಲಾಯಿಸುವ ಪ್ರಯತ್ನ ನಡೆದಿದೆ ಎನ್ನುವ ಆತಂಕವನ್ನು ಕಾಸರಗೋಡಿನ ಕನ್ನಡಿಗರು ವ್ಯಕ್ತಪಡಿಸಿದ್ದಾರೆ.

ಕೇರಳ ಸರ್ಕಾರದ ಕಂದಾಯ ಇಲಾಖೆಯ ಆನ್‌ಲೈನ್‌ ಪೋರ್ಟಲ್‌ನಲ್ಲಿ ‘ಮಂಜೇಶ್ವರ’ ಹೆಸರನ್ನು ‘ಮಂಜೇಶ್ವರಂ’ ಎಂದು ಮಾಡಲಾಗಿದೆ. ಆದರೆ, ಹೆಸರುಗಳನ್ನು ಬದಲಾಯಿಸುವ ನಿರ್ಧಾರವನ್ನು ಈಗಾಗಲೇ ಕೈಗೊಳ್ಳಲಾಗಿದೆ ಎನ್ನುವ ವರದಿಗಳನ್ನು ಕೇರಳ ಸರ್ಕಾರ ನಿರಾಕರಿಸಿದೆ.

‘ಸಿಬ್ಬಂದಿ ತಪ್ಪಿನಿಂದ ಮಂಜೇಶ್ವರ ಹೆಸರಿನಲ್ಲಿ ಬದಲಾವಣೆಯಾಗಿದೆ. ಇದನ್ನು ಸರಿಪಡಿಸಲು ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ’ ಎಂದು ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್‌ ಎಂ. ಸಾಲಿಯಾನ್‌ ತಿಳಿಸಿದ್ದಾರೆ.

ಮಂಜೇಶ್ವರ ಮತ್ತು ಕಾಸರಗೋಡು ತಾಲ್ಲೂಕುಗಳಲ್ಲಿನ 15 ಗ್ರಾಮಗಳು ಇದೇ ರೀತಿಯ ಸಮಸ್ಯೆ ಎದುರಿಸುತ್ತಿವೆ. ಮಲಯಾಳಿ ಉಚ್ಚಾರಣೆಯಿಂದ ಗ್ರಾಮಗಳ ಹೆಸರುಗಳನ್ನು ತಪ್ಪಾಗಿ ಹೇಳಲಾಗುತ್ತದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯವಾಗಿದೆ.

‘ಹೆಸರು ಬದಲಾಯಿಸುವ ಯಾವುದೇ ನಿರ್ಧಾರ ಕೈಗೊಂಡಿಲ್ಲ’ ಎಂದು ಕಾಸರಗೋಡಿನ ಜಿಲ್ಲಾಧಿಕಾರಿ ಸಜೀತ್‌ ಬಾಬು ಸ್ಪಷ್ಟಪಡಿಸಿದ್ದಾರೆ.

ಕೇರಳದ ಮಾಜಿ ಕಂದಾಯ ಸಚಿವ ಮತ್ತು ಶಾಸಕ ಇ. ಚಂದ್ರಶೇಖರನ್‌ ಹಾಗೂ ಕಾಸರಗೋಡು ಸಂಸದ ರಾಜಮೋಹನ್‌ ಉನ್ನಿಥನ್‌ ಅವರು ಸಹ ಹೆಸರು ಬದಲಾಯಿಸುವ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.

‘ಎಲ್ಲ ದಾಖಲೆಗಳಲ್ಲಿ ಮೂಲ ಹೆಸರುಗಳನ್ನೇ ಬಳಸಬೇಕು’ ಎಂದು ಕೇರಳ ಸರ್ಕಾರದ ಆಡಳಿತ ಇಲಾಖೆಯು ಜಿಲ್ಲಾಧಿಕಾರಿಗಳಿಗೆ 2016ರಲ್ಲಿ ನಿರ್ದೇಶನ ನೀಡಿತ್ತು. ಕನ್ನಡ ಸಮನ್ವಯ ಸಮಿತಿ ಮನವಿ ಸಲ್ಲಿಸಿದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿತ್ತು.

ಆದರೂ, ಅನಧಿಕೃತವಾಗಿ ಮಲಯಾಳಿ ಹೆಸರುಗಳನ್ನು ಬಳಸುವ ಮೂಲಕ ಕನ್ನಡದ ಹೆಸರುಗಳು ನಾಶವಾಗುತ್ತಿವೆ ಎಂದು ಕಾಸರಗೋಡಿನ ಕನ್ನಡಿಗ ಸಮಿತಿಯ ಮರುಳೀಧರ್‌ ಅಭಿಪ್ರಾಯಪಟ್ಟಿದ್ದಾರೆ.

‘ಕನ್ನಡದ ಹೆಸರು ಬದಲಿಸಿದರೆ ಹೋರಾಟ’
ಬೆಂಗಳೂರು: ‘ಕಾಸರಗೋಡು ಜಿಲ್ಲೆಯ ಕೆಲವು ಗ್ರಾಮಗಳಿಗೆ ಇಡಲಾಗಿರುವ ಕನ್ನಡದ ಹೆಸರುಗಳನ್ನು ಮಲಯಾಳಂ ಭಾಷೆಗೆ ಬದಲಾಯಿಸಲು ಹೊರಟಿರುವ ಕೇರಳ ಸರ್ಕಾರದ ನಡೆ ಖಂಡನಾರ್ಹವಾದುದು’ ಎಂದು ಕರ್ನಾಟಕ ವಿಕಾಸ ರಂಗ ತಿಳಿಸಿದೆ.

‘ಕಾಸರಗೋಡು ಕರ್ನಾಟಕದ ಆಸ್ತಿ ಎಂಬುದನ್ನು ಮಹಾಜನ್‌ ವರದಿಯಲ್ಲಿ ಹೇಳಲಾಗಿದೆ. ಈ ವರದಿಯ ಜಾರಿ ಬಗ್ಗೆ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸಿದೆ. ಈ ಸಮಯದಲ್ಲೇ ಕೇರಳ ಸರ್ಕಾರ ಹೆಸರು ಬದಲಾವಣೆಗೆ ಮುಂದಾಗಿರುವುದು ಸಮಂಜಸವಲ್ಲ. ಕಾಸರಗೋಡಿನ ನೂತನ ಶಾಸಕರು ಕೇರಳ ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕಾಸರಗೋಡು ಕರ್ನಾಟಕದ ಪ್ರದೇಶ ಎಂಬುದಕ್ಕೆ ಇದು ಸಾಕ್ಷಿ. ಇದನ್ನು ಅಲ್ಲಿನ ಸರ್ಕಾರ ಅರ್ಥಮಾಡಿಕೊಳ್ಳಲಿ’ ಎಂದು ಅಧ್ಯಕ್ಷ ವ.ಚ.ಚನ್ನೇಗೌಡ ಪ್ರಕಟಣೆಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.