ADVERTISEMENT

ಕ್ರಿಕೆಟ್‌ ಬೆಟ್ಟಿಂಗ್‌ಗೆ ಕಡಿವಾಣ: ಶಾಸಕರ ಆಗ್ರಹ

ಮಂಡ್ಯದಲ್ಲಿ ಬುಕ್ಕಿ ಬಿಡಿಸಿದ್ದ ಮಾಜಿ ಸಿಎಂ: ಗಣಿಗ ರವಿಕುಮಾರ್

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2024, 15:29 IST
Last Updated 13 ಫೆಬ್ರುವರಿ 2024, 15:29 IST
   

ಬೆಂಗಳೂರು: ಕ್ರಿಕೆಟ್‌ ಬೆಟ್ಟಿಂಗ್‌ನಿಂದಾಗಿ ಸಣ್ಣ ಸಣ್ಣ ಊರುಗಳಲ್ಲೂ ಜನ ಹಣ ಕಳೆದುಕೊಂಡು ಬೀದಿಗೆ ಬರುತ್ತಿದ್ದಾರೆ. ಯುವಕರ ಬದುಕು ಹಾಳಾಗುತ್ತಿದೆ ಎಂದು ಪಕ್ಷ ಭೇದ ಮರೆತು ವಿಧಾನಸಭೆಯಲ್ಲಿ ಶಾಸಕರು ಆತಂಕ ವ್ಯಕ್ತಪಡಿಸಿದ್ದೂ ಅಲ್ಲದೇ, ಇದನ್ನು ತಡೆಯಲು ಕಟ್ಟುನಿಟ್ಟಿನ ಕಾನೂನು ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‌ನ ಗಣಿಗ ರವಿಕುಮಾರ್ ಅವರು ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಎಲ್ಲ ಪಕ್ಷಗಳ ಸದಸ್ಯರೂ ಧ್ವನಿಗೂಡಿಸಿದರು.

ವಿಷಯ ಪ್ರಸ್ತಾಪಿಸಿದ ಗಣಿಗ ರವಿ, ಕ್ರಿಕೆಟ್‌ ಬೆಟ್ಟಿಂಗ್‌ ಹೆಚ್ಚಾಗುತ್ತಿದ್ದಂತೆ ಎಲ್ಲೆಡೆ ರೌಡಿಸಂ ಕೂಡಾ ಹೆಚ್ಚಾಗುತ್ತಿದೆ. ಐಪಿಎಲ್‌ನಲ್ಲಿ ಯುವಕನೊಬ್ಬ ಬೆಟ್ಟಿಂಗ್‌ ಕಟ್ಟಿದ್ದ ₹11 ಸಾವಿರ ಕೊಟ್ಟಿಲ್ಲ ಎಂಬ ಕಾರಣಕ್ಕೆ ಆತನನ್ನು ಕೊಲೆ ಮಾಡಲಾಯಿತು. ಮನೆ ಮನೆಯಲ್ಲೂ ಬೆಟ್ಟಿಂಗ್‌ ಕಟ್ಟುವ ಗೀಳು ಹಬ್ಬಿದೆ ಎಂದು ಹೇಳಿದರು.

ADVERTISEMENT

ಬುಕ್ಕಿಗಳು ಎಲ್ಲ ಪಕ್ಷಗಳ ನಾಯಕರ ಜತೆಗೂ ಗುರುತಿಸಿಕೊಂಡಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಒಬ್ಬ ಬುಕ್ಕಿಯನ್ನು ಬಂಧಿಸಿದಾಗ, ಆತ ಪಕ್ಷದ ಕಾರ್ಯಕರ್ತ ಎಂದು ಮಾಜಿ ಮುಖ್ಯಮಂತ್ರಿಯೊಬ್ಬರು ಎಸ್‌ಪಿಗೆ ದೂರವಾಣಿ ಕರೆ ಮಾಡಿ ಬಿಡಿಸಿದರು. ರಾಜಕಾರಣಿಗಳು ಬುಕ್ಕಿಗಳನ್ನು ಪೋಷಿಸುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು.

ಆಗ ಮಧ್ಯ ಪ್ರವೇಶಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಅವರು, ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ಮಂಡ್ಯ ಅಥವಾ ಒಂದೆರಡು ಊರುಗಳಲ್ಲಿ ಅಲ್ಲ, ಇಡೀ ದೇಶದಲ್ಲೇ ಹಬ್ಬಿದೆ. ಒಂದು ಸಾವಿರ ಕೋಟಿ ರೂಪಾಯಿಯಷ್ಟು ಬೆಟ್ಟಿಂಗ್ ದಂಧೆ ನಡೆಯುತ್ತಿದೆ. ಬೆಂಗಳೂರಿನಲ್ಲಿ ಒಬ್ಬರು ಕ್ರಿಕೆಟ್‌ ಬೆಟ್ಟಿಂಗ್‌ನಿಂದ ₹120 ಕೋಟಿಯಷ್ಟು ಕಳೆದುಕೊಂಡು ಬೀದಿಗೆ ಬಿದ್ದರು. ಆದ್ದರಿಂದ ಬೆಟ್ಟಿಂಗ್‌ ತಡೆಗಟ್ಟಲು ವಿಶೇಷ ತಂಡ ರಚಿಸಬೇಕು ಎಂದರು.

ಬಿಜೆಪಿಯ ಶರಣು ಸಲಗರ ಮಾತನಾಡಿ, ಪ್ರತಿ ತಾಲ್ಲೂಕಿನಲ್ಲಿ ಬೆಟ್ಟಿಂಗ್‌ ನಡೆಯುತ್ತಿದೆ. ಬುಕ್ಕಿಗಳನ್ನು ಪತ್ತೆ ಹಚ್ಚುವುದು ಕಷ್ಟವಿಲ್ಲ ಆದರೆ, ಆ ಕೆಲಸ ಆಗುತ್ತಿಲ್ಲ. ಹೀಗೆ ಬುಕ್ಕಿಗಳನ್ನು ಬೆಳೆಯಲು ಬಿಟ್ಟರೆ ಇವರು ಶಾಸಕರಾಗಿ ವಿಧಾನಸಭೆಗೆ ಬರುವ ದಿನಗಳು ದೂರವಿಲ್ಲ. ಮೊದಲಿಗೆ ಇವರನ್ನು ಗಡೀಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ನ ಪ್ರದೀಪ್‌ ಈಶ್ವರ್, ಎಚ್‌.ಡಿ.ರಂಗನಾಥ್‌, ಬಿಜೆಪಿಯ ಆರಗ ಜ್ಞಾನೇಂದ್ರ, ಸುರೇಶ್‌ಗೌಡ, ರವಿಸುಬ್ರಹ್ಮಣ್ಯ ಅವರು ಮಾತನಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ‘ಬೆಟ್ಟಿಂಗ್‌ ತಡೆಗಟ್ಟುವ ದಿಸೆಯಲ್ಲಿ ಕೇಂದ್ರದ ಜತೆ ಮಾತುಕತೆ ಮಾಡಬೇಕು. ಗೇಮಿಂಗ್‌ ವ್ಯಾಖ್ಯಾನ ಬದಲಾಗಬೇಕು. ರಿಯಲ್‌ ಟೈಮ್‌ ಮನಿ ಗೇಮಿಂಗ್‌ಗಳಿಂದ ಕೇಂದ್ರ ಸರ್ಕಾರಕ್ಕೆ ಜಿಎಸ್‌ಟಿ ಮೂಲಕ ನಾಲ್ಕು ವರ್ಷಗಳಿಗೆ ₹74 ಸಾವಿರ ಕೋಟಿ ಆದಾಯ ಬರುತ್ತದೆ. ಇಷ್ಟು ಹಣ ಕಳೆದು ಕೊಳ್ಳಲು ಯಾವುದೇ ಸರ್ಕಾರವೂ ತಯಾರಿಲ್ಲ. ಆದರೆ ಸಾಮಾನ್ಯ ಜನ ಬೆಟ್ಟಿಂಗ್‌ ಕಟ್ಟಿ ಬೀದಿ ಪಾಲಾಗುವುದನ್ನು ತಡೆಯಲು ಕೇಂದ್ರ ಮತ್ತು ರಾಜ್ಯಗಳು ಚರ್ಚಿಸಿ ಕಾನೂನು ಜಾರಿ ಮಾಡಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.