ADVERTISEMENT

ಪಿ.ಎಂ ಆವಾಸ್‌ ಯೋಜನೆ: ರಾಜ್ಯದಲ್ಲಿ ಶೇ 12 ಸಾಧನೆ

ಕೇಂದ್ರ ಸರ್ಕಾರದ ವಿರುದ್ಧ ಜಿ.ಸಿ.ಚಂದ್ರಶೇಖರ್ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 15:40 IST
Last Updated 16 ಡಿಸೆಂಬರ್ 2025, 15:40 IST
ಜಿ.ಸಿ.ಚಂದ್ರಶೇಖರ್‌ 
ಜಿ.ಸಿ.ಚಂದ್ರಶೇಖರ್‌    

ನವದೆಹಲಿ: ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಕರ್ನಾಟಕದಲ್ಲಿ ಕೇವಲ ಶೇ 12ರಷ್ಟು ಸಾಧನೆ ಆಗಿದೆ ಎಂದು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಕಿಡಿಕಾರಿದರು. 

ರಾಜ್ಯಸಭೆಯಲ್ಲಿ ಮಂಗಳವಾರ ನಡೆದ ಪೂರಕ ಅಂದಾಜಿನ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಇದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ. 2024–25ರಲ್ಲಿ ರಾಜ್ಯದಲ್ಲಿ 2.74 ಲಕ್ಷ ಮನೆ ನಿರ್ಮಾಣದ ಗುರಿ ಹೊಂದಲಾಗಿತ್ತು. ಇಲ್ಲಿಯವರೆಗೆ 4,443 ಮನೆಗಳು ಮಾತ್ರ ನಿರ್ಮಾಣ ಆಗಿವೆ. 29 ಸಾವಿರ ಮನೆಗಳು ನಿರ್ಮಾಣ ಹಂತದಲ್ಲಿವೆ. 2.39 ಲಕ್ಷ ಮನೆಗಳ ನಿರ್ಮಾಣ ಆರಂಭ ಆಗಿಲ್ಲ‘ ಎಂದು ದೂರಿದರು. 

ಆಯುಷ್ಮಾನ್‌ ಭಾರತ ಯೋಜನೆಯಡಿ ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರ ತನ್ನ ಪಾಲನ್ನು ಸಮರ್ಪಕವಾಗಿ ಕೊಡುತ್ತಿಲ್ಲ. ರಾಜ್ಯ ಸರ್ಕಾರ ಹಲವು ಸಲ ಮನವಿ ಮಾಡಿದರೂ ಕೇಂದ್ರ ಸ್ಪಂದಿಸಿಲ್ಲ ಎಂದು ಅವರು ಆರೋಪಿಸಿದರು. 

ADVERTISEMENT

ರಾಜ್ಯದಲ್ಲಿ ಆಯುಷ್ಮಾನ್ ಭಾರತ್‌ ಯೋಜನೆಗೆ ಐದು ವರ್ಷಗಳಲ್ಲಿ ₹7,239 ಕೋಟಿ ಖರ್ಚು ಮಾಡಲಾಗಿದೆ. ಕೇಂದ್ರ ಕೊಟ್ಟಿರುವುದು ₹2,056 ಕೋಟಿ ಮಾತ್ರ. 2020ರಲ್ಲಿ ರೋಗಿಗಳ ಸಂಖ್ಯೆ 8 ಲಕ್ಷ ಇದ್ದರೆ ಈಗ 35 ಲಕ್ಷಕ್ಕೆ ಏರಿದೆ. ಕೇಂದ್ರದ ಪಾಲು ಗಣನೀಯವಾಗಿ ಕುಸಿದಿದೆ‘ ಎಂದರು. 

15ನೇ ಹಣಕಾಸು ಆಯೋಗವು ಕಳೆದ ಎರಡು ವರ್ಗಗಳಿಂದ ರಾಜ್ಯ ಆರೋಗ್ಯ ಇಲಾಖೆಗೆ ಅನುದಾನವನ್ನೇ ಕೊಟ್ಟಿಲ್ಲ. ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲೂ ₹22 ಸಾವಿರ ಕೋಟಿ ಬಿಡುಗಡೆಗೆ ಬಾಕಿ ಇದೆ. ರಾಜ್ಯದಲ್ಲಿ ವೃದ್ಧಾಪ್ಯ ವೇತನಕ್ಕೆ ₹271 ಕೋಟಿ ನೀಡಬೇಕಿತ್ತು. ಇಲ್ಲಿಯವರೆಗೆ ಕೇಂದ್ರ ಸರ್ಕಾರ ಚಿಕ್ಕಾಸು ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಇದೇ ವೇಳೆ ಸದನದಲ್ಲಿದ್ದ ಕೇಂದ್ರ ಆರೋಗ್ಯ ಸಚಿವ ಪ್ರಲ್ಹಾದ ಜೋಶಿ ಸದನದಿಂದ ಹೊರಡಲು ಸಿದ್ಧರಾದರು. ಆಗ ಜಿ.ಸಿ.ಚಂದ್ರಶೇಖರ್, ’ಜೋಶಿ ಅವರೇ, ಇದು ರಾಜ್ಯದ ಸಮಸ್ಯೆ. ಸದನದಿಂದ ಓಡಿ ಹೋಗಬೇಡಿ‘ ಎಂದು ವ್ಯಂಗ್ಯವಾಗಿ ಹೇಳಿದರು. 

ಸಂಸದರ ನಿಧಿಯಿಂದ ರೋಗಿಗಳ ಚಿಕಿತ್ಸೆಗೆ ಕನಿಷ್ಠ ₹1 ಕೋಟಿ ಒದಗಿಸಬೇಕು. ಈ ಮೂಲಕ ರೋಗಿಗಳಿಗೆ ನೆರವಾಗಬೇಕು. ಇದಕ್ಕಾಗಿ ಕಾನೂನು ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.