ADVERTISEMENT

ಕಿಸಾನ್‌ ಸಮ್ಮಾನ್‌: 1.53 ಲಕ್ಷ ರೈತರ ಅರ್ಜಿಗೆ ತಡೆ

ತಹಶೀಲ್ದಾರ್‌ ಲಾಗಿನ್‌ ಐಡಿಯಲ್ಲಿ ಬಾಕಿ, ತೆರೆದು ನೋಡದ ಅಧಿಕಾರಿಗಳು: ಆರೋಪ

ಎಂ.ಎನ್.ಯೋಗೇಶ್‌
Published 25 ಫೆಬ್ರುವರಿ 2020, 19:37 IST
Last Updated 25 ಫೆಬ್ರುವರಿ 2020, 19:37 IST
ರೈತರು (ಸಾಂದರ್ಭಿಕ ಚಿತ್ರ)
ರೈತರು (ಸಾಂದರ್ಭಿಕ ಚಿತ್ರ)   

ಮಂಡ್ಯ: ‘ಪೌತಿ ಖಾತೆ’ ಸಮಸ್ಯೆಯಿಂದಾಗಿ, ರಾಜ್ಯದ 1.53 ಲಕ್ಷ ರೈತರು ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ, ಕೇಂದ್ರ ಸರ್ಕಾರದ ತಲಾ ₹ 6 ಸಾವಿರ ಸಹಾಯಧನ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

ರೈತರ ಆದಾಯ ವೃದ್ಧಿಸುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ 2019ರ ಬಜೆಟ್‌ನಲ್ಲಿ ಪಿಎಂ–ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ ಜಾರಿಗೊಳಿಸಿತು. ರಾಜ್ಯದ ರೈತರು ತಮ್ಮ ಜಮೀನಿನ ದಾಖಲಾತಿ ಸಲ್ಲಿಸಿ, ಆನ್‌ಲೈನಲ್ಲಿ ನೋಂದಣಿ ಮಾಡಿಕೊಂಡರು. ಈ ಯೋಜನೆಯಡಿ, ಈಗಾಗಲೇ ರೈತರ ಬ್ಯಾಂಕ್‌ ಖಾತೆಗಳಿಗೆ ಮೂರು ಕಂತುಗಳಲ್ಲಿ ತಲಾ ₹ 6 ಸಾವಿರ ಹಣ ಬಂದಿದೆ. ಆದರೆ, ಸಾಗುವಳಿ ಮಾಡುತ್ತಿರುವ ರೈತರ ಹೆಸರಿಗೆ ಭೂಮಿಯ ಹಕ್ಕು ವರ್ಗಾವಣೆಯಾಗದ (ಪೌತಿ ಖಾತೆ) ಅರ್ಜಿಗಳನ್ನು ತಡೆ ಹಿಡಿಯಲಾಗಿದೆ.

ಮಂಡ್ಯ ಜಿಲ್ಲೆಯಲ್ಲಿ ಅತೀ ಹೆಚ್ಚು ಎಂದರೆ 25,870 ಪೌತಿ ಖಾತೆ ಅರ್ಜಿಗಳನ್ನು ತಡೆ ಹಿಡಿದಿದ್ದರೆ, ಕೊಡಗು ಜಿಲ್ಲೆಯಲ್ಲಿ ಅತೀ ಕಡಿಮೆ ಎಂದರೆ 19 ಅರ್ಜಿಗಳನ್ನು ತಡೆಹಿಡಿಯಲಾಗಿದೆ.

ADVERTISEMENT

ಅನುಮೋದನೆ ನೀಡದ ತಹಶೀಲ್ದಾರ್‌: ಪೌತಿ ಖಾತೆ ಸಮಸ್ಯೆ ಎದುರಿಸುತ್ತಿರುವ ಅರ್ಜಿಗಳನ್ನು ಪರಿಶೀಲಿಸಿ ಸರಿ ಇದ್ದರೆ ಅನುಮೋದನೆ ನೀಡುವ, ತಪ್ಪಿದ್ದರೆ ತಿರಸ್ಕರಿಸುವ ಜವಾಬ್ದಾರಿಯನ್ನು ಆಯಾ ತಾಲ್ಲೂಕುಗಳ ತಹಶೀಲ್ದಾರ್‌ಗೆ ನೀಡಲಾಗಿದೆ. ತಡೆಹಿಡಿಯಲಾಗಿರುವ 1.53 ಲಕ್ಷ ಅರ್ಜಿಗಳು ಈಗ ತಹಶೀಲ್ದಾರ್‌ ಲಾಗಿನ್‌ ಐಡಿಯಲ್ಲಿ ಬಾಕಿ ಉಳಿದಿವೆ. ಆದರೆ ತಹಶೀಲ್ದಾರ್‌ಗಳು ಅದನ್ನು ತೆರೆದು ನೋಡದ ಕಾರಣ, ಪೌತಿ ಖಾತೆ ಅರ್ಜಿಗಳಿಗೆ ಅನುಮೋದನೆ ನೀಡಿಲ್ಲ ಎಂದು ರೈತರು ಆರೋಪಿಸುತ್ತಾರೆ.

‘ನಮ್ಮ ಊರಿನ ಎಲ್ಲಾ ರೈತರ ಖಾತೆಗಳಿಗೆ ಹಣ ಬಂದಿದೆ. ಆದರೆ ನನಗೆ ಮಾತ್ರ ಇನ್ನೂ ಬಂದಿಲ್ಲ. ಸಾಮಾನ್ಯ ಸೇವಾ ಕೇಂದ್ರದಲ್ಲಿ ನನ್ನ ಅರ್ಜಿ ಯಾವ ಹಂತದಲ್ಲಿದೆ ಎಂದು ಪರಿಶೀಲಿಸಿದರೆ, ತಹಶೀಲ್ದಾರ್‌ ಐಡಿಯಲ್ಲಿ ಬಾಕಿ ಉಳಿದಿದೆ ಎಂದು ತೋರಿಸುತ್ತದೆ. ತಹಶೀಲ್ದಾರ್‌ ಅವರನ್ನು ಕೇಳಿದರೆ, ತಮಗೆ ಐಡಿಯನ್ನೇ ಕೊಟ್ಟಿಲ್ಲ, ಕೃಷಿ ಇಲಾಖೆ ಅಧಿಕಾರಿಗಳು ಸರಿಪಡಿಸಬೇಕು ಎಂದು ಹೇಳುತ್ತಿದ್ದಾರೆ. ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಸಹಾಯಧನ ಬಂದಿಲ್ಲ’ ಎಂದು ರೈತ ನಾಗರಾಜ್‌ ಹೇಳಿದರು.

‘ಪ್ರತಿಯೊಬ್ಬ ತಹಶೀಲ್ದಾರ್‌ಗೆ ಲಾಗಿನ್‌ ಐಡಿ ನೀಡಿದ್ದು ಅವರೇ ಪಾಸ್‌ವರ್ಡ್‌ ರೂಪಿಸಿಕೊಳ್ಳಬಹುದು. ಕಚೇರಿಯಲ್ಲಿರುವ ಕಂಪ್ಯೂಟರ್‌ ಆಪರೇಟರ್‌ ಕೇಳಿದರೂ ಪಾಸ್‌ವರ್ಡ್‌ ಮಾಡಿಕೊಡುತ್ತಾರೆ. ಕಂಪ್ಯೂಟರ್‌ ಅಜ್ಞಾನದಿಂದ ರೈತರ ಅರ್ಜಿಗಳನ್ನು ತಡೆಹಿಡಿದಿದ್ದಾರೆ’
ಎಂದು ಸಾಮಾನ್ಯ ಸೇವಾ ಕೇಂದ್ರದ ಮುಖ್ಯಸ್ಥರೊಬ್ಬರು ಆರೋಪಿಸಿದರು.

ಪೌತಿ ಖಾತೆ ಎಂದರೇನು?: ವ್ಯಕ್ತಿ ಬದುಕಿರುವ ವೇಳೆ ತನ್ನ ಮಕ್ಕಳಿಗೆ ಆಸ್ತಿಯ ಹಕ್ಕು ವರ್ಗಾವಣೆ
ಮಾಡಿದರೆ ಅದು ಸಾಮಾನ್ಯ ಖಾತೆಯಾಗುತ್ತದೆ. ಆದರೆ, ಆತನ ಮರಣಾನಂತರ ಮರಣಪತ್ರ, ವಂಶವೃಕ್ಷ ಹಾಗೂ ಇತರ ದಾಖಲೆ ಸಲ್ಲಿಸಿ ಆಸ್ತಿಯ ಹಕ್ಕನ್ನು ಪತ್ನಿ ಹಾಗೂ ಮಕ್ಕಳು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡರೆ ಅದು ಪೌತಿ ಖಾತೆಯಾಗುತ್ತದೆ.

ಸ್ಥಳೀಯವಾಗಿ ವಾಸವಾಗಿರುವ ರೈತರ ಖಾತೆ ಸಮಸ್ಯೆ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಬಹುತೇಕ ರೈತರು ಬೇರೆಡೆ ವಾಸವಿರುವ ಕಾರಣ ಸಮಸ್ಯೆ ಹೆಚ್ಚಿದೆ
-ಡಾ.ಎಂ.ವಿ.ವೆಂಕಟೇಶ್‌, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.