ADVERTISEMENT

Bengaluru Tech Summit | ಆವಿಷ್ಕಾರದಲ್ಲಿ ಬೆಂಗಳೂರಿಗೆ ಅಗ್ರಸ್ಥಾನ: ಪಿಎಂ ಮೋದಿ‌

'ತಂತ್ರಜ್ಞಾನದಿಂದ ಸಮಾನತೆ, ಸಬಲೀಕರಣ'

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2022, 18:50 IST
Last Updated 16 ನವೆಂಬರ್ 2022, 18:50 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ಬೆಂಗಳೂರು: ದೇಶದಲ್ಲಿ ಸಮಾನತೆ ಮತ್ತು ಸಬಲೀಕರಣ ತರಲು ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನಗರದ ಬೆಂಗಳೂರು ಅರಮನೆ ಆವರಣದಲ್ಲಿ ಬುಧವಾರ ಆರಂಭವಾದ ‘ಬೆಂಗಳೂರು ಟೆಕ್‌ ಸಮ್ಮಿಟ್’ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿಯವರ ಭಾಷಣದ ವಿಡಿಯೊ ಪ್ರದರ್ಶಿಸಲಾಯಿತು. ದೇಶದಲ್ಲಿ ತಂತ್ರಜ್ಞಾನದ ಬಳಕೆ, ಹೊಸ ಆವಿಷ್ಕಾರಗಳಿಗೆ ಉತ್ತೇಜನ ನೀಡುತ್ತಿರುವ ಕುರಿತು ಮಾತನಾಡಿದ ಅವರು, ‘ಆಡಳಿತದಲ್ಲಿ ತಂತ್ರಜ್ಞಾನದ ಬಳಕೆಯು ಭ್ರಷ್ಟಾಚಾರದ ನಿಯಂತ್ರಣಕ್ಕೂ ನಾಂದಿ ಹಾಡಿದೆ’ ಎಂದರು.

‘ಭಾರತ ಈಗ ಮಾಹಿತಿ ತಂತ್ರಜ್ಞಾನದ ದೊಡ್ಡ ಹೆದ್ದಾರಿಯಾಗಿದೆ. ನೇರ ನಗದು ವರ್ಗಾವಣೆ ಯೋಜನೆ ಮೂಲಕ ಕೋಟ್ಯಂತರ ಜನರಿಗೆ ನೇರವಾಗಿ ಸರ್ಕಾರದ ನೆರವು ತಲುಪಿಸಲಾಗುತ್ತಿದೆ. ಶಿಕ್ಷಣ, ಜನಧನ್‌ ಯೋಜನೆ, ಆಧಾರ್‌, ಇ– ಮಾರುಕಟ್ಟೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಕೋವಿಡ್‌ ಸಂದರ್ಭದಲ್ಲಿ ಜಗತ್ತಿನ ಅತಿದೊಡ್ಡ ಲಸಿಕಾ ಅಭಿಯಾನ ಯಶಸ್ವಿಯಾಗಲು ತಂತ್ರಜ್ಞಾನದ ಬಲವೇ ಕಾರಣ ಎಂದು ಹೇಳಿದರು.

ADVERTISEMENT

2015ರಲ್ಲಿ ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ ಭಾರತವು 81ನೇ ಸ್ಥಾನದಲ್ಲಿತ್ತು. ಈಗ 40ನೇ ಸ್ಥಾನಕ್ಕೇರಿದೆ. ದೇಶದಲ್ಲಿ 81,000 ನವೋದ್ಯಮಗಳಿದ್ದು, ಈ ಕ್ಷೇತ್ರದಲ್ಲಿ ಜಗತ್ತಿನ ಮೂರನೇ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದೆ ಎಂದರು.

ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಐ.ಟಿ ಮತ್ತು ಬಿ.ಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ್‌, ಬಿ.ಟಿ ವಿಷನ್‌ ಗ್ರೂಪ್‌ ಅಧ್ಯಕ್ಷೆ ಕಿರಣ್‌ ಮಜುಂದಾರ್‌ ಶಾ, ಐ.ಟಿ ವಿಷನ್‌ ಗ್ರೂಪ್‌ ಅಧ್ಯಕ್ಷ ಕ್ರಿಸ್‌ ಗೋಪಾಲಕೃಷ್ಣನ್‌, ನವೋದ್ಯಮಗಳಿಗೆ ಸಂಬಂಧಿಸಿದ ವಿಷನ್‌ ಗ್ರೂಪ್‌ ಅಧ್ಯಕ್ಷ ಪ್ರಶಾಂತ್‌ ಪ್ರಕಾಶ್‌, ರಾಜ್ಯ ಡಿಜಿಟಲ್‌ ಎಕಾನಮಿ ಮಿಷನ್‌ ಅಧ್ಯಕ್ಷ ಬಿ.ವಿ. ನಾಯ್ಡು, ಅಮೆರಿಕದ ಕಿಂಡ್ರಿಲ್‌ ಕಂಪನಿ ಅಧ್ಯಕ್ಷ ಮಾರ್ಟಿನ್‌ ಶ್ರೋಟರ್‌, ಬೆಂಗಳೂರು ಸಾಫ್ಟ್‌ವೇರ್‌ ಪಾರ್ಕ್‌ ಆಫ್‌ ಇಂಡಿಯಾ ನಿರ್ದೇಶಕ ಶೈಲೇಂದ್ರ ತ್ಯಾಗಿ ಇದ್ದರು.

ಬೆಂಗಳೂರಿನ ಸಾಧನೆಗೆ ಶ್ಲಾಘನೆ
‘ಸಂಶೋಧನೆ ಮತ್ತು ಆವಿಷ್ಕಾರಗಳ ಕಾರಣಕ್ಕಾಗಿ ಜಗತ್ತಿನ ಜನರು ಬೆಂಗಳೂರಿನತ್ತ ನೋಡುತ್ತಾರೆ. ಆವಿಷ್ಕಾರ ಸೂಚ್ಯಂಕದಲ್ಲಿ ಬೆಂಗಳೂರು ನಗರವು ದೇಶದಲ್ಲೇ ಅಗ್ರ ಸ್ಥಾನದಲ್ಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು.

‘ಹಲವು ಕ್ಷೇತ್ರಗಳಲ್ಲಿ ಅತ್ಯುತ್ತಮವಾದ ಸಂಶೋಧನೆ, ಆವಿಷ್ಕಾರ ಬೆಂಗಳೂರಿನಲ್ಲಿ ನಡೆಯುತ್ತಿವೆ’ ಎಂದರು.

*

ಭಾರತವು ಡಿಜಿಟಲೀಕರಣ ಕ್ಷೇತ್ರದಲ್ಲಿ ವೇಗವಾಗಿ ಮುನ್ನಡೆಯುತ್ತಿದೆ. ನಾವೀನ್ಯತೆಗೆ ಸಂಬಂಧಿಸಿದಂತೆ ಹೊಸ ಆವಿಷ್ಕಾರಗಳು ನಡೆಯುತ್ತಿರುವ ಜಗತ್ತಿನ ಅಗ್ರ 10 ನಗರಗಳಲ್ಲಿ ಬೆಂಗಳೂರು ಕೂಡ ಸೇರಿದೆ.
– ಪೆಟ್ರಿ ಹೊಂಕೊನೆನ್‌,ಫಿನ್ಲೆಂಡ್‌ನ ವಿಜ್ಞಾನ ಮತ್ತು ಸಂಸ್ಕೃತಿ ಸಚಿವ

*

ಭವಿಷ್ಯದಲ್ಲಿ ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ ಬಳಸುವ ತಂತ್ರಜ್ಞಾನಗಳಲ್ಲೂ ಭಾರತೀಯರ ಬೆರಳಚ್ಚುಗಳು ಇರಲಿವೆ. ತಂತ್ರಜ್ಞಾನ ಮಾತ್ರವಲ್ಲ ಶಿಕ್ಷಣ, ಹಣಕಾಸು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತ ಮುಂಚೂಣಿಯಲ್ಲಿ ಇರಲಿದೆ.
– ಒಮರ್‌ ಬಿನ್‌ ಸುಲ್ತಾನ್‌ ಅಲ್‌ ಒಲಾಮ,ಅರಬ್‌ ಸಂಯುಕ್ತ ಸಂಸ್ಥಾನದ ಕೃತಕ ಬುದ್ಧಿಮತ್ತೆ, ಡಿಜಿಟಲ್‌ ಆರ್ಥಿಕತೆ ಹಾಗೂ ರಿಮೋಟ್ ತಂತ್ರಾಂಶಗಳ ಖಾತೆ ರಾಜ್ಯ ಸಚಿವ

*

ಬೆಂಗಳೂರು ನನ್ನ ಕರ್ಮಭೂಮಿ. 15 ವರ್ಷಗಳ ಹಿಂದೆ ಒಂದಷ್ಟು ಮಂದಿ ಕನಸನ್ನು ಇರಿಸಿಕೊಂಡು ಬಂದೆವು. ಅವೆಲ್ಲವೂ ಇಲ್ಲಿ ನನಸಾದವು. ಇಲ್ಲಿನ ದಿಗ್ಗಜರು ಅನೇಕ ದಶಕಗಳ ಹಿಂದೆಯೇ ಹಾಕಿದ ಭದ್ರ ಬುನಾದಿಯೇ ಇದಕ್ಕೆ ಕಾರಣ. ಅಂಥವರ ಶ್ರಮದಿಂದಾಗಿ ಬೆಂಗಳೂರು ಜಾಗತಿಕ ನಕಾಶೆಯಲ್ಲಿ ಬೆಳಗುತ್ತಿದೆ.
– ನವೀನ್‌ ತಿವಾರಿ, ಇನ್‌ಮೊಬಿ ಯೂನಿಕಾರ್ನ್ ಸಂಸ್ಥಾಪಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.