ADVERTISEMENT

ಬೆಂಗಳೂರಿನ ಮಲ್ಲೇಶ್ವರದ ಬಾಲಕನಿಗೆ ಪತ್ರ ಬರೆದ ಪ್ರಧಾನಿ ನರೇಂದ್ರ ಮೋದಿ...!

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2023, 13:23 IST
Last Updated 13 ಫೆಬ್ರುವರಿ 2023, 13:23 IST
   

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾ ಬೆನ್‌ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಬೆಂಗಳೂರಿನ ಶಾಲೆಯೊಂದರ ಎರಡನೇ ತರಗತಿ ವಿದ್ಯಾರ್ಥಿ ಬರೆದಿದ್ದ ಪತ್ರಕ್ಕೆ ಮೋದಿ ಪ್ರತಿಕ್ರಿಯಿಸಿದ್ದಾರೆ.

‘ನನಗಾದ ನಷ್ಟವನ್ನು ಸಹಿಸಿಕೊಳ್ಳಲು ಇಂಥ ಘಟನೆಗಳು ಧೈರ್ಯ ಮತ್ತು ಬಲ ನೀಡುತ್ತವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಾಲಕನಿಗೆ ತಾವು ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಜತೆಗೆ ಧನ್ಯವಾದ ಅರ್ಪಿಸಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರದ ‘ಎಂಇಎಸ್‌ ಕಿಶೋರ್‌ ಕೇಂದ್ರ’ ಶಾಲೆಯ ಎರಡನೇ ತರಗತಿಯ ವಿದ್ಯಾರ್ಥಿ ಆರುಷ್‌ ಶ್ರೀವತ್ಸ ಡಿ. 30ರಂದು ಮೋದಿ ಅವರಿಗೆ ಪತ್ರ ಬರೆದು, ಹೀರಾ ಬೆನ್‌ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದರು.

ADVERTISEMENT

ಜನವರಿ 25ರಂದು ಬಾಲಕನಿಗೆ ಮೋದಿ ಅವರು ಪ್ರತಿಕ್ರಿಯೆ ರೂಪದಲ್ಲಿ ಪತ್ರ ಬರೆದಿದ್ದು, ಸದ್ಯ ಪತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಬಿಜೆಪಿಯ ನಾಯಕರೂ ತಮ್ಮ ಸಾಮಾಜಿಕ ತಾಣ ಖಾತೆಗಳಲ್ಲಿ ಪತ್ರವನ್ನು ಹಂಚಿಕೊಳ್ಳುತ್ತಿದ್ದಾರೆ.

ಬಾಲಕನ ಪತ್ರದಲ್ಲೇನಿತ್ತು?

‘ನಿಮ್ಮ ತಾಯಿ ಹೀರಾ ಬೆನ್‌ ಅವರು ನಿಧನರಾದ ಸುದ್ದಿಯನ್ನು ಟಿ.ವಿಯಲ್ಲಿ ನೋಡಿ ನನಗೆ ಬೇಸರವಾಯಿತು. ನನ್ನ ಸಂತಾಪವನ್ನು ತಾವು ದಯವಿಟ್ಟು ಸ್ವೀಕರಿಸಬೇಕು. ಅವರ ಆತ್ಮ ದೇವರ ಚರಣಗಳಲ್ಲಿ ಚಿರಶಾಂತಿ ಪಡೆಯಲಿ ಎಂದು ನಾನು ಪ್ರಾರ್ಥಿಸುತ್ತೇನೆ’ ಎಂದು ಆರುಷ್‌ ತಮ್ಮ ಪತ್ರದಲ್ಲಿ ಬರೆದಿದ್ದರು.

ಮೋದಿ ಪ್ರತಿಕ್ರಿಯೆ ಹೀಗಿತ್ತು...

ಪತ್ರಕ್ಕೆ ಪ್ರತಿಕ್ರಿಯಿಸಿರುವ ನರೇಂದ್ರ ಮೋದಿ, ‘ನನ್ನ ತಾಯಿಯ ನಿಧನಕ್ಕೆ ಸಂತಾಪ ಸೂಚಿಸಿದ ತಮಗೆ ಕೃತಜ್ಞತೆಗಳು. ತಾಯಿಯ ಅಗಲಿಕೆ ತುಂಬಲಾರದ ನಷ್ಟ. ಅದರ ನೋವು ಹೇಳತೀರದು. ನಿಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳಲ್ಲಿ ನನ್ನನ್ನು ಸೇರಿಸಿಕೊಂಡಿದ್ದಕಾಗಿ ನಾನು ನಿಮಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

ಜತೆಗೆ, ‘ಇಂಥ ಘಟನೆಗಳು ನನಗೆ ನಷ್ಟವನ್ನು ಸಹಿಸಿಕೊಳ್ಳುವ ಶಕ್ತಿ ಮತ್ತು ಧೈರ್ಯವನ್ನು ನೀಡುತ್ತವೆ’ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ, ಶತಾಯುಷಿ ಹೀರಾಬೆನ್‌ (100) ಅವರು ಡಿ.30ರ ಶುಕ್ರವಾರ ರಾತ್ರಿ ನಿಧನರಾಗಿದ್ದರು. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಹೀರಾಬೆನ್‌ ಬಳಲುತ್ತಿದ್ದರು. ‌‌

‘ಅಮ್ಮನಲ್ಲಿ ತ್ರಿಮೂರ್ತಿ ಕಂಡಿದ್ದೆ’ ಎಂದು ಟ್ವೀಟ್‌ ಮಾಡಿದ್ದ ಮೋದಿ

‘ಅದ್ಭುತ ಶತಾಯುಷಿ ದೇವರ ಪದತಳದಲ್ಲಿ ವಿಶ್ರಾಂತಿ ಪಡೆದಿದ್ದಾರೆ. ಅವರ ಜೀವನವು ತಪಸ್ವಿಯ ಪಯಣವಾಗಿತ್ತು. ನಿಷ್ಕಾಮ ಕರ್ಮಯೋಗಿಯ ಜೀವನ ಮತ್ತು ಮೌಲ್ಯಗಳಿಗೆ ಬದ್ಧವಾದ ಬದುಕಿನ ಸಂಕೇತವಾಗಿದ್ದರು. ಅಮ್ಮನಲ್ಲಿ ನಾನು ತ್ರಿಮೂರ್ತಿಗಳನ್ನು ಕಂಡಿದ್ದೇನೆ’ ಎಂದು ಮೋದಿ ಟ್ವೀಟ್‌ನಲ್ಲಿ ತಾಯಿಗೆ ಅಂತಿಮ ನಮನ ಸಲ್ಲಿಸಿದ್ದರು.

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.