ಬೆಂಗಳೂರು: ‘ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ಯಮ (ಪಿಎಂಎಫ್‌ಎಂಇ) ಯೋಜನೆಯನ್ನು ಒಂದು ವರ್ಷದ ಅವಧಿಗೆ ವಿಸ್ತರಿಸಿದ್ದು, ರಾಜ್ಯದಲ್ಲಿ 5 ಸಾವಿರ ಫಲಾನುಭವಿಗಳಿಗೆ ಸಹಾಯಧನ ಕಲ್ಪಿಸುವ ಗುರಿ ನೀಡಿದೆ’ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಕೃಷಿಕರನ್ನು ಉದ್ಯಮಿಗಳನ್ನಾಗಿ ಪರಿವರ್ತಿಸುವ ಗುರಿ ಹೊಂದಿರುವ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮವು (ಕೆಪೆಕ್) ಈ ಯೋಜನೆಯನ್ನು ಜಾರಿಗೊಳಿಸುತ್ತಿದೆ. ವೈಯಕ್ತಿಕ ಆಹಾರ ಸಂಸ್ಕರಣ ಉದ್ಯಮಿಗಳು, ರೈತರ ಗುಂಪುಗಳು, ಕೃಷಿ ಉತ್ಪಾದಕರ ಸಂಸ್ಥೆಗಳಿಗೆ (ಎಫ್‌ಪಿಒ) ಯೋಜನೆಯಡಿ ಶೇ 50ರಷ್ಟು ಇಲ್ಲವೇ ಗರಿಷ್ಠ ₹ 15 ಲಕ್ಷವರೆಗೆ ಸಹಾಯಧನ ಸಿಗಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ರಮವಾಗಿ 60:40ರ ಅನುಪಾತದಲ್ಲಿ ಸಹಾಯಧನ ಭರಿಸಲಿದೆ’ ಎಂದರು.
‘ಕೇಂದ್ರ ಸರ್ಕಾರ 2021– 2025ರವರೆಗೆ ಪಿಎಂಎಫ್‌ಎಂಎ ಯೋಜನೆಯಡಿ ಐದು ವರ್ಷ ಅವಧಿಗೆ ಇಡೀ ದೇಶಕ್ಕೆ ₹10 ಸಾವಿರ ಕೋಟಿ (ಕೇಂದ್ರ ಶೇ 60- ರಾಜ್ಯ ಶೇ 40) ಸಹಾಯಧನ ನೀಡುವ ಸೌಲಭ್ಯ ಜಾರಿಗೊಳಿಸಿತ್ತು. ಐದು ವರ್ಷದಲ್ಲಿ ರಾಜ್ಯದಲ್ಲಿ 20,051 ಅರ್ಜಿ ಸಲ್ಲಿಕೆಯಾಗಿದ್ದು, 6,698 ಅರ್ಜಿಗಳಿಗೆ ಸಾಲ ಮಂಜೂರಾಗಿದೆ. ಕಿರು ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಸಬ್ಸಿಡಿ ಸೇರಿ ಒಟ್ಟು ₹ 723 ಕೋಟಿ ಬಂಡವಾಳ ಹೂಡಿಕೆಯಾಗಿದೆ. 4,489 ಫಲಾನುಭವಿಗಳಿಗೆ ₹ 162 ಕೋಟಿ ಸಹಾಯಧನ ಬಿಡುಗಡೆ ಆಗಿದೆ’ ಎಂದರು.
‘ಯೋಜನೆಯಡಿ ಸಿರಿಧಾನ್ಯ ಸಂಸ್ಕರಣೆ, ಬೆಲ್ಲ, ನಿಂಬೆ ಉತ್ಪನ್ನಗಳು, ಬೇಕರಿ ಉತ್ಪನ್ನಗಳು, ಗಾಣದ ಎಣ್ಣೆ, ಮೆಣಸಿನಪುಡಿ, ಶುಂಠಿ ಸಂಸ್ಕರಣಾ ಘಟಕ, ಅನಾನಸ್ ಘಟಕ, ಮಸಾಲ ಉತ್ಪನ್ನಗಳ ಘಟಕ, ತೆಂಗಿನ ಉತ್ಪನ್ನ, ಕೋಳಿ, ಸಮುದ್ರ ಉತ್ಪನ್ನಗಳ ಸಂಸ್ಕರಣಾ ಘಟಕ, ರೊಟ್ಟಿ, ಉಪ್ಪಿನಕಾಯಿ, ಹಪ್ಪಳ ಇತರೆ ಘಟಕ ಸ್ಥಾಪನೆಗೆ ಅನುದಾನ ನೀಡಲಾಗಿದೆ’ ಎಂದರು.
‘ಕೃಷಿ, ತೋಟಗಾರಿಕೆ ವಿಶ್ವವಿದ್ಯಾಲಯಗಳು ಹಾಗೂ ಸರ್ಕಾರಿ ಸಂಸ್ಥೆಗಳಿಗೆ ಒಟ್ಟು 14 ಕಡೆ ಇನ್‌ಕ್ಯುಬೇಷನ್ ಕೇಂದ್ರಗಳನ್ನು ಮಂಜೂರು ಮಾಡಲಾಗಿದೆ. ವಿಜಯಪುರದಲ್ಲಿ ರೈತರು ಸಂಸ್ಕರಿಸಿದ ಒಣದ್ರಾಕ್ಷಿ, ಇತರೆ ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳ ಶೇಖರಣೆಗೆ 4 ಸಾವಿರ ಟನ್ ಸಾಮರ್ಥ್ಯದ ಶೀತಲಗೃಹ ನಿರ್ಮಿಸಲಾಗಿದೆ. ಹುಬ್ಬಳ್ಳಿಯ ಎಪಿಎಂಸಿ ಆವರಣದಲ್ಲಿ 6 ಸಾವಿರ ಟನ್ ಸಾಮರ್ಥ್ಯದ ಗೋದಾಮು ಕಾರ್ಯಾಚರಣೆಗೆ ಸಿದ್ಧವಾಗಿದೆ’ ಎಂದು ವಿವರಿಸಿದರು.
‘ಚಿಕ್ಕಮಗಳೂರು, ಬಾಗಲಕೋಟೆ, ಕೊಪ್ಪಳ, ಚಿಕ್ಕಬಳ್ಳಾಪುರ, ಧಾರವಾಡ, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ ಒಂದು ಹಾಗೂ ದಾವಣಗೆರೆ, ಹಾವೇರಿಯಲ್ಲಿ ತಲಾ ಎರಡು ಸೇರಿದಂತೆ ಹೆಚ್ಚುವರಿಯಾಗಿ 13 ಶೀತಲಗೃಹ ನಿರ್ಮಾಣವಾಗಲಿದೆ. ಇದಕ್ಕೆ ಹೆಚ್ಚುವರಿ ₹ 47 ಕೋಟಿ ಅಗತ್ಯವಿದ್ದು, ಸಚಿವ ಸಂಪುಟ ಸಭೆಗೆ ಪ್ರಸ್ತಾವ ಮಂಡಿಸಲಾಗುವುದು’ ಎಂದರು.
ಕೃಷಿ ಆಯುಕ್ತ ವೈ.ಎಸ್. ಪಾಟೀಲ, ಕೆಪೆಕ್ ಅಧ್ಯಕ್ಷ ಬಿ.ಎಚ್. ಹರೀಶ ಇದ್ದರು.
ಪಿಎಂಎಫ್‌ಎಂಇ ಯೋಜನೆಗೆ ಕರ್ನಾಟಕ ಸರ್ಕಾರ ಶೇ 15ರಷ್ಟು ಟಾಪ್‌ಅಪ್ ಸೌಲಭ್ಯ ಕಲ್ಪಿಸಿದೆ. ಅಲ್ಲದೆ ಬಜೆಟ್‌ನಲ್ಲಿ ₹ 206 ಕೋಟಿ ಕಾಯ್ದಿರಿಸಲಾಗಿದೆಎನ್. ಚಲುವರಾಯಸ್ವಾಮಿ ಕೃಷಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.