ADVERTISEMENT

ಬಿಎಸ್‌ವೈ ವಿರುದ್ಧದ ಪೋಕ್ಸೊ ವಿಚಾರಣೆಗೆ ಅರ್ಹ: ಹೈಕೋರ್ಟ್‌ ಮೌಖಿಕ ಅಭಿಮತ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 23:30 IST
Last Updated 17 ಸೆಪ್ಟೆಂಬರ್ 2025, 23:30 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣ ಮೇಲ್ನೋಟಕ್ಕೆ ವಿಚಾರಣೆಗೆ ಅರ್ಹವಾಗಿದೆ’ ಎಂದು ಹೈಕೋರ್ಟ್‌ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.

‘ನನ್ನ ವಿರುದ್ಧ ವಿಚಾರಣಾ ನ್ಯಾಯಾಲಯ ಪ್ರಕರಣವನ್ನು ಪರಿಗಣಿಸಿರುವುದನ್ನು ರದ್ದುಗೊಳಿಸಬೇಕು’ ಎಂದು ಕೋರಿ ಬಿ.ಎಸ್‌.ಯಡಿಯೂರಪ್ಪ ಸಲ್ಲಿಸಿರುವ ರಿಟ್‌ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಎಂ.ಐ.ಅರುಣ್‌ ಬುಧವಾರ ವಿಚಾರಣೆ ನಡೆಸಿದರು.

ಯಡಿಯೂರಪ್ಪ ಪರ ಹೈಕೋರ್ಟ್‌ ವಕೀಲ ಸಂದೀಪ್‌ ಪಾಟೀಲ್ ಅವರ ವಾದ ಆಲಿಸಿದ ನ್ಯಾಯಪೀಠ, ‘ಪ್ರಾಯೋಗಿಕವಾಗಿ ಮಾತನಾಡುವುದರಾದರೆ ನಿಮ್ಮ ಆತಂಕಗಳೇನು, ನಿಮಗೆ ಕಿರುಕುಳ ಎ‌ಲ್ಲಿ ನೀಡಬಹುದು ಎಂಬುದನ್ನು ಮಾತ್ರವೇ ಗಮನಿಸಿ ಒಂದು ತೀರ್ಮಾನಕ್ಕೆ ಬರಬಹುದು. ಆದರೆ, ನೀವು ಹೀಗೆಯೇ ವಾದ ಮಂಡನೆ ಮಾಡುತ್ತಿದ್ದರೆ ಹೇಗೆ’ ಎಂದು ಪ್ರಶ್ನಿಸಿತು.

ADVERTISEMENT

‘ಯಡಿಯೂರಪ್ಪಗೆ ಇಷ್ಟು ವಯಸ್ಸಾಗಿದೆ. ಅನಗತ್ಯವಾಗಿ ಸಮನ್‌ ಮಾಡಬಾರದು ಎಂದು ಕೇಳಿದರೆ ಏನಾದರೂ ಮಾಡಬಹುದು. ಆದರೆ, ಇದು ಮೇಲ್ನೋಟಕ್ಕೆ ವಿಚಾರಣೆಗೆ ಅರ್ಹವಾದ ಪ್ರಕರಣ. ನಿಮ್ಮ ವಾದ ಆಲಿಸಲಾಗದು. ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012) ಪ್ರಕರಣದಲ್ಲಿ ಸಂತ್ರಸ್ತೆಯ ಹೇಳಿಕೆಯೊಂದೇ ಆರೋಪಿಗೆ ಶಿಕ್ಷೆ ವಿಧಿಸಲು ಕೆಲವೊಮ್ಮ ಸಾಕಾಗುತ್ತದೆ. ಸಂತ್ರಸ್ತೆಯ ಹೇಳಿಕೆಯನ್ನು ಪರಿಶೀಲನೆಗೆ ಒಳಪಡಿಸಬೇಕಿದೆ’ ಎಂದು ಮೌಖಿಕವಾಗಿ ನುಡಿಯಿತು.

‘ಬಾಲಕಿಯ ತಾಯಿಗೆ (ಈಗ ಬದುಕಿಲ್ಲ) ದೂರು ನೀಡುವುದೇ ಹವ್ಯಾಸವಾಗಿತ್ತು, ಸಂತ್ರಸ್ತೆಯೇ ಎರಡು ಪೋಕ್ಸೊ ಪ್ರಕರಣ ದಾಖಲಿಸಿದ್ದಾರೆ. ಆಕೆ ಯಾರೆಲ್ಲರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ, ಆಕೆಯ ಮೇಲೆ ಎಷ್ಟೆಲ್ಲಾ ಕ್ರಿಮಿನಲ್‌ ಪ್ರಕರಣಗಳಿವೆ, ಅಂದು‌ ತಾಯಿ–ಮಗಳು ಯಡಿಯೂರಪ್ಪ ಮನೆಗೆ ಏತಕ್ಕೆ ಬಂದಿದ್ದರು, ಯಡಿಯೂರಪ್ಪ ಸಂತ್ರಸ್ತೆಗೆ ಏಕೆ ಹಣ ನೀಡಲು ಮುಂದಾಗಿದ್ದರು, ಆ ದುಡ್ಡು ಎಲ್ಲಿಂದ ಬಂದಿದೆ? ಅಥವಾ ಇದನ್ನು ನೀವು ಹನಿ ಟ್ರ್ಯಾಪ್‌ ಎಂದೂ ಹೇಳಬಹುದು… ಆದರೆ, ಇವೆಲ್ಲವೂ ವಿಚಾರಣೆಗೆ ಅರ್ಹವಾದ ಪ್ರಕರಣವನ್ನಾಗಿ ಮಾಡಿವೆ’ ಎಂದು ನ್ಯಾಯಪೀಠ ಹೇಳಿತು.

ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್‌ ಆದ ಪದಾಂಕಿತ ಹಿರಿಯ ವಕೀಲ ರವಿವರ್ಮ ಕುಮಾರ್ ಮತ್ತು ಅಶೋಕ್ ಎನ್‌.ನಾಯಕ್‌ ಅವರು, ‘ಈಗಾಗಲೇ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳು ಸಂತ್ರಸ್ತೆ ಮತ್ತು ಆಕೆಯ ತಾಯಿಯ ಧ್ವನಿಯನ್ನು ದೃಢಪಡಿಸಿವೆ. ಅರ್ಜಿದಾರರು ತಮ್ಮ ಪರವಾದ ಸಾಕ್ಷಿಗಳನ್ನೇ ಉದಾಹರಿಸಿ ಪರಿಹಾರ ಕೇಳುವುದು ಸಲ್ಲ’ ಎಂದರು. ವಿಚಾರಣೆಯನ್ನು ಇದೇ 19ಕ್ಕೆ ಮುಂದೂಡಲಾಗಿದೆ.

ಪ್ರಕರಣವೇನು?: ‘ನನ್ನ ಮಗಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಹಾಯ ಮಾಡಬೇಕು’ ಎಂದು ಬೇಡಿ ಬಂದಿದ್ದ ಸಂತ್ರಸ್ತ ಬಾಲಕಿಯ ತಾಯಿ (ಈಗ ಬದುಕಿಲ್ಲ) ನೀಡಿದ್ದ ದೂರಿನ ಅನುಸಾರ ಸದಾಶಿವನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಆರ್‌ಎಂವಿ ಎರಡನೇ ಹಂತದಲ್ಲಿನ ಡಾಲರ್ಸ್‌ ಕಾಲೋನಿಯಲ್ಲಿರುವ ಯಡಿಯೂರಪ್ಪ ಅವರ ‘ಧವಳಗಿರಿ’ ನಿವಾಸದಲ್ಲಿ 2024ರ ಫೆಬ್ರುವರಿ 2ರಂದು ಬೆಳಗ್ಗೆ 11ರಿಂದ 11.30ರ ನಡುವೆ ‘ಬಾಲಕಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ’ ಎಂಬುದು ಆರೋಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.