ADVERTISEMENT

ಲೈಂಗಿಕ ಕಿರುಕುಳ: ಸಂಧಾನ ಯತ್ನ ವಿಫಲ? ಶರಣರ ಪರ –ವಿರೋಧ ಪ್ರತಿಭಟನೆ

ಬಿರುಸಿನ ಚಟುವಟಿಕೆಗಳಿಗೆ ಸಾಕ್ಷಿಯಾದ ಮಠದ ಆವರಣ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2022, 19:41 IST
Last Updated 28 ಆಗಸ್ಟ್ 2022, 19:41 IST
ಪ್ರಕರಣದ ಉನ್ನತ ತನಿಖೆಗೆ ಆಗ್ರಹಿಸಿ ದಲಿತ ಸಂಘಟನೆಗಳ ಪ್ರಮುಖರು ಚಿತ್ರದುರ್ಗದ ಬಾಲಕಿಯರ ಬಾಲಭವನದ ಎದುರು ಭಾನುವಾರ ಪ್ರತಿಭಟಿಸಿದರು
ಪ್ರಕರಣದ ಉನ್ನತ ತನಿಖೆಗೆ ಆಗ್ರಹಿಸಿ ದಲಿತ ಸಂಘಟನೆಗಳ ಪ್ರಮುಖರು ಚಿತ್ರದುರ್ಗದ ಬಾಲಕಿಯರ ಬಾಲಭವನದ ಎದುರು ಭಾನುವಾರ ಪ್ರತಿಭಟಿಸಿದರು   

ಚಿತ್ರದುರ್ಗ: ಇಲ್ಲಿನ ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣದ ಹಿನ್ನೆಲೆಯಲ್ಲಿ ಮಠದ ಭಾನುವಾರ ಬಿರುಸಿನ ಚಟುವಟಿಕೆಗಳಿಗೆ ಸಾಕ್ಷಿಯಾಯಿತು.

ಇನ್ನೊಂದು ಬೆಳವಣಿಗೆಯಲ್ಲಿ ಮಠದ ಭಕ್ತರು ಹಾಘೂ, ಸಲಹಾ ಸಮಿತಿ ಸದಸ್ಯರು ಮಧ್ಯಪ್ರವೇಶಿಸಿ ಪ್ರಕರಣದ ಸುಖಾಂತ್ಯಕ್ಕೆ ಪ್ರಯತ್ನಿಸಿದ್ದಾರೆ ಎಂದು ಹೇಳಲಾಗಿದೆ.

ಮುರುಘಾ ಶರಣರು ಹಾಗೂ ಆಡಳಿತಾಧಿಕಾರಿ ಎಸ್‌.ಕೆ.ಬಸವರಾಜನ್‌ ಅವರನ್ನು ಮುಖಾಮುಖಿ ಮಾಡಿಸಿ ಚರ್ಚೆಗೆ ಅವಕಾಶ ಕಲ್ಪಿಸಲಾಗಿತ್ತು ಎಂದು ಮೂಲಗಳು ಮಾಹಿತಿ ನೀಡಿವೆ.

ADVERTISEMENT

ತಾಲ್ಲೂಕಿನ ಸಿದ್ದಾಪುರ ಗ್ರಾಮದ ಮನೆಯೊಂದರಲ್ಲಿ ಎಲ್ಲರೂ ಸೇರಿದ್ದರು ಎನ್ನಲಾದ ಚಿತ್ರ ಜಾಲತಾಣದಲ್ಲಿ ಹರಿದಾಡುತ್ತಿದೆ. ವೀರಶೈವ ಲಿಂಗಾಯತ ಸಮುದಾಯದ ಮುಖಂಡರು, ವಿವಿಧ ಸಮುದಾಯದ ಮಠಾಧೀಶರ ಸಮ್ಮುಖದಲ್ಲಿ ಈ ಪ್ರಯತ್ನ ನಡೆದಿದೆ. ಸಾಕ್ಷ್ಯಾಧಾರಗಳನ್ನು ಪರಸ್ಪರ ಹಸ್ತಾಂತರ ಮಾಡಿಕೊಂಡು ಸುಖಾಂತ್ಯಗೊಳಿಸಿಕೊಳ್ಳುವ ಉದ್ದೇಶ ಈಡೇರಲಿಲ್ಲ ಎಂಬ ಮಾತೂ ಕೇಳಿಬಂದಿದೆ.

ಶರಣರ ಪರ–ವಿರುದ್ಧ ಪ್ರತಿಭಟನೆ: ಆರೋಪಿ ಸ್ಥಾನದಲ್ಲಿರುವ ಶಿವಮೂರ್ತಿ ಮುರುಘಾ ಶರಣರ ಪರ ಹಾಗೂ ವಿರುದ್ಧ ಪ್ರತಿಭಟನೆಗಳು ಭಾನುವಾರ ನಡೆದವು. ಶರಣರನ್ನು ಬಂಧಿಸದಂತೆ ಭಕ್ತರು ಹಾಗೂ ಪ್ರಕರಣವನ್ನು ಉನ್ನತ ತನಿಖೆಗೆ ಒಳಪಡಿಸುವಂತೆ ಸಂಘಟನೆಗಳ ಮುಖಂಡರು ಪ್ರತ್ಯೇಕವಾಗಿ ಪ್ರತಿಭಟಿಸಿದರು.

ಶಿವಮೂರ್ತಿ ಮುರುಘಾ ಶರಣರನ್ನು ಭೇಟಿಯಾಗಿದ್ದ ಭಕ್ತರ ಗುಂಪು ಮೌನ ಪ್ರತಿಭಟನೆ ಆರಂಭಿಸಿತು. ಎಚ್ಚರಿಕೆಯ ಹೆಜ್ಜೆ ಇಡಬೇಕು, ಶರಣರನ್ನು ಬಂಧಿಸಬಾರದು ಎಂಬ ಒತ್ತಾಯ ಕೇಳಿಬಂತು. ಕಾನೂನು ಕ್ರಮ ಕೈಗೊಂಡರೆ ಪರಿಸ್ಥಿತಿ ಬಿಗಡಾಯಿಸುತ್ತದೆ ಎಂಬ ಮಾತುಗಳು ಕೇಳಿಬಂದವು

ಬಾಲಕಿಯರ ಬಾಲಮಂದಿರದ ಎದುರು ಸೇರಿದ್ದ ಮತ್ತೊಂದು ಗುಂಪು, ಆರೋಪಕ್ಕೆ ಗುರಿಯಾಗಿರುವ ಶರಣರ ವಿರುದ್ಧ ಆಕ್ರೋಶ ಹೊರಹಾಕಿತು. ಸಂತ್ರಸ್ತ ಬಾಲಕಿಯರಿಗೆ ಧೈರ್ಯ ತುಂಬುವ ಘೋಷಣೆ ಕೂಗಿತು. ನಿಷ್ಪಕ್ಷಪಾತ ತನಿಖೆ ನಡೆಸುವ ಕುರಿತು ಅನುಮಾನಗಳಿವೆ ಎಂದು ಗುಂಪು ಆರೋಪಿಸಿತು.

*

ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಆಘಾತಕಾರಿ ಆಪಾದನೆ ಕೇಳಿಬಂದಿದೆ. ಮಠಕ್ಕೆ ಉತ್ತಮ ಹೆಸರಿದೆ. ಅದನ್ನು ಮತ್ತೆ ಎತ್ತಿಹಿಡಿಯುವ ವಿಶ್ವಾಸವಿದೆ.
-ಮಹಿಮ ಪಟೇಲ್‌, ಜೆಡಿಯು ರಾಜ್ಯ ಘಟಕದ ಅಧ್ಯಕ್ಷ

*

ಪೀಠಾಧ್ಯಕ್ಷರ ಮೇಲಿನ ಆರೋಪ ಸತ್ಯಕ್ಕೆ ದೂರ ಗುರುಗಳ ಧರ್ಮ ಸಂಸ್ಕಾರ ಮತ್ತು ಹೆಜ್ಜೆಗುರುತು ಗಮನಿಸಿದರೆ ಅಹಿತಕರ ಘಟನೆ ನಡೆದಿರಲು ಸಾಧ್ಯವಿಲ್ಲ.
-ಎಚ್‌.ಎಸ್‌. ಶಿವಶಂಕರ್‌, ಮಾಜಿ ಶಾಸಕ, ಹರಿಹರ

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.