
ಸುವರ್ಣ ವಿಧಾನಸೌಧ (ಬೆಳಗಾವಿ): ‘ರಾಜ್ಯದಲ್ಲಿ ಪೊಲೀಸರೇ ಕಳ್ಳರಾಗಿದ್ದಾರೆ. ಸುಲಿಗೆಗೆ ಇಳಿದಿದ್ದಾರೆ. ಜೈಲುಗಳು ರೆಸಾರ್ಟ್‌ಗಳಾಗಿವೆ. ಕೈದಿಗಳ ಕೈಯಲ್ಲಿ ಮೊಬೈಲ್ ಬಂದಿದೆ. ಡ್ರಗ್ಸ್ ಮಾಫಿಯಾ ವ್ಯಾಪಕವಾಗಿ ಬೆಳೆದಿದೆ’ ಎಂದು ಆರೋಪಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ, ‘ಈ ಎರಡೂವರೆ ವರ್ಷಗಳ ಕಾನೂನು ಸುವ್ಯವಸ್ಥೆ ಸಂಬಂಧಿಸಿದ ಶ್ವೇತ ಪತ್ರ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.
ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಕುರಿತು ವಿಧಾನಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ‘ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೊಲೆಗಾರರಿಗೆ, ಭಯೋತ್ಪಾದಕರಿಗೆ ರೆಸಾರ್ಟ್, ಫೈವ್ ಸ್ಟಾರ್ ಹೋಟೆಲ್ ಸೌಲಭ್ಯ ನೀಡಲಾಗುತ್ತಿದೆ. ಬ್ಯಾರಕ್‌ಗೆ ವರ್ಗಾವಣೆ ಮಾಡಿಸಿಕೊಳ್ಳಲು ಜೈಲಧಿಕಾರಿಗಳಿಗೆ ಕೈದಿಗಳು ಲಂಚ ನೀಡುತ್ತಾರೆ’ ಎಂದು ದೂರಿದರು.
‘ರೌಡಿಶೀಟರ್ ಗುಬ್ಬಚ್ಚಿ ಸೀನ ಜೈಲಿನಲ್ಲೇ ಜನ್ಮದಿನ ಆಚರಿಸಿಕೊಂಡ. ಆ ಕೇಕ್ ಮೇಲೆ ಹೆಸರು ಬರೆಸಿಕೊಂಡಿದ್ದ. ಅಂತಹ ಕೇಕ್ ಜೈಲಿನೊಳಗೆ ಹೇಗೆ ಬಂತು? ಭಯೋತ್ಪಾದಕ ಶಕೀಲ್ ಮನ್ನಾ ಕೈಯಲ್ಲಿ ಫೋನ್ ಇರುವ ವಿಡಿಯೊ ಬಹಿರಂಗವಾಗಿದೆ. ನಟ ದರ್ಶನ್ ಕೈಯಲ್ಲಿ ಸಿಗರೇಟ್ ಇರುವ ಫೋಟೊ ಬಂದಿತ್ತು. ಪೊಲೀಸ್ ಆಯುಕ್ತರು ಪ್ರತಿ ತಿಂಗಳು ಜೈಲಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕೆಂದು ಜೈಲಿನ ನಿಯಮದಲ್ಲೇ ಇದೆ. ಆದರೆ, ಈ ರೀತಿಯ ಭೇಟಿಗಳೇ ನಡೆದಿಲ್ಲ’ ಎಂದರು.
‘ಜೈಲಿನಲ್ಲೇ ಕೈದಿಗಳು ಮದ್ಯ ತಯಾರಿಸುತ್ತಿದ್ದಾರೆ. ಕಾರವಾರ ಜೈಲಿನಲ್ಲಿ ಕೈದಿಗಳು ಡ್ರಗ್ಸ್ ಸೇವಿಸುತ್ತಿದ್ದು, ಅದು ಸಿಗದಿದ್ದಾಗ ಸಿಬ್ಬಂದಿಗೇ ಹೊಡೆದಿದ್ದಾರೆ. ಜೈಲುಗಳಲ್ಲಿ ಜಾಮರ್‌ಗಳನ್ನೇ ಹ್ಯಾಕ್ ಮಾಡುತ್ತಾರೆ. ಸಿಸಿಟಿವಿ ಕ್ಯಾಮೆರಾಗಳನ್ನು ಖರೀದಿಸಲು ಸರ್ಕಾರದ ಬಳಿ ಹಣ ಇಲ್ಲ. ಎರಡು ವರ್ಷದಿಂದ ಕೈದಿಗಳಿಗೆ ಕೂಲಿ ಕೊಡಲು ಕೂಡಾ ಹಣವಿಲ್ಲ. ಎಷ್ಟು ಹಣ ಬಾಕಿ ಇದೆ ಎನ್ನುವುದನ್ನು ಸರ್ಕಾರವೇ ತಿಳಿಸಬೇಕು’ ಎಂದು ಆಗ್ರಹಿಸಿದರು.
ಇತ್ತೀಚೆಗೆ ನಡೆದ ಹಲವು ಅಪರಾಧ ಪ್ರಕರಣಗಳ ಬಗ್ಗೆ ಮಾತನಾಡಿದ ಅಶೋಕ, ‘ಹಿಂದೆ ಅಪರಾಧಿಗಳಿಗೆ ಪೊಲೀಸರ ಭಯ ಇತ್ತು. ಈಗ ಭಯವೇ ಇಲ್ಲ. ಬೆಂಗಳೂರಿನಲ್ಲಿ 11 ತಿಂಗಳಲ್ಲಿ 130 ಪೊಲೀಸರು ಅಪರಾಧಿಗಳ ಜೊತೆ ಶಾಮೀಲಾಗಿ ಅಮಾನತಾಗಿದ್ದಾರೆ’ ಎಂದರು.
ಸೈಬರ್ ಅಪರಾಧ ಪ್ರಕರಣಗಳನ್ನು ಅಂಕಿಅಂಶ ಸಹಿತ ವಿವರಿಸಿದ ಅವರು, ‘ಮಾದಕ ವಸ್ತು ಸೇವಿಸುವವರಲ್ಲಿ ಶೇ 15ರಷ್ಟು ಶಾಲಾ ಮಕ್ಕಳಿದ್ದಾರೆ ಎನ್ನುವುದು ಆಘಾತಕಾರಿ. ಚಾಕೊಲೇಟ್ ಮೂಲಕ ಮಾದಕ ವಸ್ತು ನೀಡಿ ಬಳಿಕ ಅವರನ್ನು ವ್ಯಸನಿಗಳಾಗಿ ಮಾಡುತ್ತಾರೆ. ರಾಜ್ಯಕ್ಕೆ ₹ 150 ಕೋಟಿ ಮೌಲ್ಯದ ಮಾದಕ ವಸ್ತುಗಳು ಬರುತ್ತಿವೆ. ಪೊಲೀಸ್ ಇಲಾಖೆಯಲ್ಲಿ ಡ್ರಗ್ಸ್ ಜಾಲದೊಂದಿಗೆ ಇರುವವರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
‘ವಿದೇಶದಿಂದ ವನ್ಯಜೀವಿಗಳನ್ನು ತಂದು ರಾಜ್ಯದಲ್ಲಿ ಮಾರಾಟ ಮಾಡಲಾಗುತ್ತಿದೆ. ನಮ್ಮ ದೇಶದಲ್ಲಿ ಸಿಗದ ಅಪರೂಪದ ಕೋತಿ, ಹಕ್ಕಿಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಆ ಪ್ರಾಣಿಗಳಿಗೆ ಯಾವ ರೋಗ ಇದೆ ಎಂದು ಗೊತ್ತಾಗುವುದಿಲ್ಲ. ಪಾಕಿಸ್ತಾನ, ಶ್ರೀಲಂಕಾ, ಆಸ್ಟ್ರೇಲಿಯಾ, ಕಾಂಬೊಡಿಯಾ ಮೊದಲಾದ ದೇಶಗಳಿಂದ ತರಲಾಗುತ್ತಿದೆ. ಪೊಲೀಸರು ಇಂಥವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಿಲ್ಲ’ ಎಂದು ಟೀಕಿಸಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಶರಣು ಕಂದಕೂರ, ಬಿಜೆಪಿಯ ಸಿಮೆಂಟ್ ಮಂಜು, ಎಸ್.ಎನ್. ಚನ್ನಬಸಪ್ಪ, ಸಿ.ಕೆ. ರಾಮಮೂರ್ತಿ , ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತಿತರರು ರಾಜ್ಯದ ಪೊಲೀಸ್ ವ್ಯವಸ್ಥೆಯಲ್ಲಿನ ಪರಿಸ್ಥಿತಿಯನ್ನು ತೆರೆದಿಟ್ಟರು.
ಹಿರಿಯ ಪೊಲೀಸ್ ಅಧಿಕಾರಿಗಳೇ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡರೆ ಹೇಗೆ? ಪೊಲೀಸರಿಗೆ ನೈತಿಕ ಪಾಠವನ್ನು ಕಲಿಸಬೇಕಾದ ಅಗತ್ಯವಿದೆ.ಆರಗ ಜ್ಞಾನೇಂದ್ರ ಬಿಜೆಪಿ
ಪೊಲೀಸರ ವರ್ಗಾವಣೆ ಹಿಂದಿನ ‘ಇಂದ್ರ’ ಯಾರು?
‘ಗೃಹ ಇಲಾಖೆಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ. ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಯಾವ ‘ಇಂದ್ರ’ ಭಾಗಿಯಾಗಿದ್ದಾನೆ. ಅಂತಹ ಅತೀಂದ್ರೀಯ ಶಕ್ತಿ ಯಾರು ಎನ್ನುವುದನ್ನು ಬಹಿರಂಗಪಡಿಸಬೇಕು’ ಎಂದು ಬಿಜೆಪಿಯ ವಿ. ಸುನೀಲ್ ಕುಮಾರ್ ಆಗ್ರಹಿಸಿದರು. ‘ನೊಂದವರಿಗೆ ನೆರವು ನೀಡಬೇಕಾದ ಪೊಲೀಸ್ ಇಲಾಖೆ ಶೋಷಿಸುವ ಇಲಾಖೆಯಾಗಿದೆ’ ಎಂದು ಆಗ್ರಹಿಸಿದರು. ‘ಅಪರಾಧಿಗಳನ್ನು ಸದೆಬಡಿದು ಕಟಕಟೆಯಲ್ಲಿ ನಿಲ್ಲಿಸಬೇಕಾದ ಪೊಲೀಸರೇ ಕಟಕಟೆಯಲ್ಲಿ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಅನ್ಯಾಯಕ್ಕೆ ಒಳಗಾಗಿ ಪೊಲೀಸ್ ಠಾಣೆಗೆ ಬರುವ ಸಂತ್ರಸ್ತರಿಗೆ ರಕ್ಷಣೆ ನೀಡಬೇಕಾದ ಪೊಲೀಸರು ಅಪರಾಧಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ. ಇಲಾಖೆಯ ಮೇಲೆ ಗೃಹ ಸಚಿವರ ಹಿಡಿತ ತಪ್ಪಿದೆಯೇ? ಇಲಾಖೆಯಲ್ಲಿ ರಿಯಲ್ ಎಸ್ಟೇಟ್ ಕೈಯಾಡಿಸುತ್ತಿದೆಯೇ? ಅಥವಾ ಗೃಹ ಸಚಿವರಿಗೆ ಇಲಾಖೆ ಬಗ್ಗೆ ಆಸಕ್ತಿ ಇಲ್ಲವೇ’ ಎಂದು ಪ್ರಶ್ನಿಸಿದರು.
ಪೊಲೀಸರ ದಕ್ಷತೆ– ಮುನಿರತ್ನ ವಂಗ್ಯ
‘ರಾಜ್ಯದ ಪೊಲೀಸರು ಸಾಕಷ್ಟು ದಕ್ಷರಾಗಿದ್ದಾರೆ. ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿ ಅದು ತಿರಸ್ಕಾರ ಆಗುವ ಮೊದಲೇ ಆರೋಪಿಯಾಗಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಮಗ ಶಾಸಕ ಎಚ್.ಡಿ. ರೇವಣ್ಣ ಅವರನ್ನು ಬಂಧಿಸಲು ಇಡೀ ಮನೆಯನ್ನು ಸುತ್ತುವರಿದಿದ್ದರು’ ಎಂದು ಬಿಜೆಪಿಯ ಮುನಿರತ್ನ ವ್ಯಂಗ್ಯವಾಡಿದರು. ಆಗ ಸಿಟ್ಟಾದ ಸಭಾಧ್ಯಕ್ಷ ಯು.ಟಿ. ಖಾದರ್ ‘ಇಲ್ಲದ ವಿವಾದ ಸೃಷ್ಟಿ ಮಾಡಲು ಇಲ್ಲಿ ಅವಕಾಶವಿಲ್ಲ’ ಎಂದು ಹೇಳಿ ಬಿಜೆಪಿ ಅರವಿಂದ ಬೆಲ್ಲದ ಅವರಿಗೆ ಮಾತನಾಡುವಂತೆ ಸೂಚನೆ ನೀಡಿದರು. ಆದರೂ ಮಾತು ನಿಲ್ಲಿಸದ ಮುನಿರತ್ನ ಪೊಲೀಸ್ ಇಲಾಖೆ ಕುರಿತಂತೆ ಮಾತನ್ನು ಮುಂದುವರಿಸಿದರು. ಆಗ ಆರ್. ಅಶೋಕ ಮತ್ತು ಅರವಿಂದ ಬೆಲ್ಲದ್ ಇಬ್ಬರೂ ಮುನಿರತ್ನ ಅವರನ್ನು ಸಮಾಧಾನಪಡಿಸಲು ಮುಂದಾದರು. ಅಷ್ಟರಲ್ಲಾಗಲೇ ಯು.ಟಿ. ಖಾದರ್ ಅವರು ಚರ್ಚೆಗೆ ಅಂತ್ಯ ಹಾಡಿ ಅರವಿಂದ ಬೆಲ್ಲದ್ ಮಾತನಾಡುವ ಅವಕಾಶವನ್ನು ಕಸಿದರು. ಇದರಿಂದ ಬೆಲ್ಲದ ಮುನಿರತ್ನ ಕಡೆಗೆ ಒಂದು ಕ್ಷಣ ಸಿಟ್ಟಿನಿಂದ ನೋಡಿ ಸುಮ್ಮನಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.