ADVERTISEMENT

ನಾಡಗೀತೆಗೆ ಅಪಮಾನ ಪ್ರಕರಣ: ಚಕ್ರತೀರ್ಥ ಫೇಸ್‌ಬುಕ್ ‘ಪೋಸ್ಟ್‌’ ಬೆನ್ನತ್ತಿದ ಸಿಐಡಿ

ನಾಡಗೀತೆಗೆ ಅಪಮಾನ ಪ್ರಕರಣ

ರಾಜೇಶ್ ರೈ ಚಟ್ಲ
Published 19 ಜೂನ್ 2022, 20:48 IST
Last Updated 19 ಜೂನ್ 2022, 20:48 IST
ರೋಹಿತ್‌ ಚಕ್ರತೀರ್ಥ
ರೋಹಿತ್‌ ಚಕ್ರತೀರ್ಥ    

ಬೆಂಗಳೂರು: ನಾಡಗೀತೆಯ ಸಾಲುಗಳನ್ನು ತಿರುಚಿ,ರಾಷ್ಟ್ರಕವಿ ಕುವೆಂಪು ಅವರನ್ನು ಅವಮಾನಿಸಿ ಸಾಮಾಜಿಕ ಜಾಲತಾಣದಲ್ಲಿ‘ಪೋಸ್ಟ್‌’ ಹಂಚಿದ ಆರೋಪ ಎದುರಿಸುತ್ತಿರುವ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂಬ ಒತ್ತಡ ಹೆಚ್ಚುತ್ತಿರುವ ಮಧ್ಯೆಯೇ, ಈ ‘ಪೋಸ್ಟ್‌’ನ ಮೂಲ ಪತ್ತೆ ಹಚ್ಚಲು ರಾಜ್ಯ ಸರ್ಕಾರ ಮುಂದಾಗಿದೆ.

ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕರಿಸಿದ ಪಠ್ಯಗಳಿಗೆ ಸಾಹಿತಿಗಳು, ನಾನಾ ಸಂಘಟನೆಗಳು, ಮಠಾಧೀಶರು, ರಾಜಕಾರಣಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಪರಿಷ್ಕೃತ ಪಠ್ಯ ವಾಪಸು ಪಡೆಯಬೇಕೆಂದು ಧ್ವನಿ ಎತ್ತಿದ್ದಾರೆ. ಆ ಬೆನ್ನಲ್ಲೇ ಐದು ವರ್ಷಗಳ ಹಿಂದಿನ ಈ ಫೇಸ್‌ಬುಕ್‌ ‘ಪೋಸ್ಟ್‌’ ಮುನ್ನೆಲೆಗೆ ಬಂದಿತ್ತು.

‘ನಾಡಗೀತೆಯಲ್ಲಿನ ಸಾಲುಗಳನ್ನು ಅಶ್ಲೀಲ, ಅನುಚಿತ ಹಾಗೂ ಅಸಂಬದ್ಧ ಅರ್ಥ ಬರುವಂತೆ ತಿರುಚಿ,
ರಾಷ್ಟ್ರಕವಿ ಕುವೆಂಪು ಮತ್ತು ಕನ್ನಡಿಗರ ಭಾವನೆಗಳಿಗೆ ಹಾಗೂ ನಾಡಗೀತೆಯ ಪಾವಿತ್ರ್ಯತೆಗೆ ಧಕ್ಕೆ ತರುವ ಹಾಗೂ ತಿರುಚಲಾಗಿದೆ. ಆ ಪೋಸ್ಟ್‌ ಅನ್ನು ಆ ದಿನದಂದು ರೋಹಿತ್ ಚಕ್ರತೀರ್ಥ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿದ್ದಾರೆ. ಈ ಕೃತ್ಯ ಎಸಗಿದ ಆರೋಪಿಗಳ
ವಿರುದ್ಧ ದೂರು ದಾಖಲಿಸಿ, ಕಾನೂನು ರೀತ್ಯಾ ಕ್ರಮ ಜರುಗಿಸಬೇಕು’ ಎಂದುಸಿಐಡಿ ಸೈಬರ್‌ ಕ್ರೈಮ್‌ ಪೊಲೀಸ್ ಠಾಣೆಗೆ ಕರ್ನಾಟಕ ಪಠ್ಯಪುಸ್ತಕಗಳ ಸಂಘದ ವ್ಯವಸ್ಥಾಪಕ ನಿರ್ದೇಶಕ ಎಂ.ಪಿ. ಮಾದೇಗೌಡ ದೂರು ನೀಡಿದ್ದಾರೆ.

ADVERTISEMENT

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ‘ನಾಡಗೀತೆಯ ಸಾಲುಗಳನ್ನು ತಿರುಚಿದ ಮತ್ತು ಕುವೆಂಪು ಅವರನ್ನು ಗೇಲಿ ಮಾಡಿದ ಕೃತ್ಯದಲ್ಲಿ ರೋಹಿತ್‌ ಚಕ್ರತೀರ್ಥ ಅವರ ತಪ್ಪಿಲ್ಲ. ಅವರು, ಆ ಪೋಸ್ಟ್‌ ಹಂಚಿಕೊಂಡಿದ್ದಾರೆ ಅಷ್ಟೆ.
ರೋಹಿತ್‌ ಚಕ್ರತೀರ್ಥ ವಿರುದ್ಧ 2017ರಲ್ಲೇ ತನಿಖೆ ನಡೆಸಿದ್ದ ಪೊಲೀಸರು ‘ಬಿ’ ರಿಪೋರ್ಟ್‌ ಸಲ್ಲಿಸಿದ್ದರು. ಹೀಗಾಗಿ, ಈ ಕೃತ್ಯ ಎಸಗಿದ ಮೂಲ ವ್ಯಕ್ತಿಯನ್ನು ಪತ್ತೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದೇವೆ’ ಎಂದರು.

‘ಈ ಪ್ರಕರಣಕ್ಕೆ ಸಂಬಂಧಿಸಿ ಫೇಸ್‌ಬುಕ್‌ನಿಂದ ಮಾಹಿತಿ ಪಡೆಯಲಾಗುತ್ತಿದೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಎಫ್‌ಐಆರ್‌ನಲ್ಲಿ ಏನಿದೆ?

‘ಕನ್ನಡ ನಾಡಿನ ನಾಡಗೀತೆಯಲ್ಲಿನ ಸಾಲುಗಳನ್ನು ತಿರುಚಿ ಅಶ್ಲೀಲ, ಅನುಚಿತ ಹಾಗೂ ಅಸಂಬದ್ಧ ಅರ್ಥ ಬರುವಂತೆ ಮಾಡಲಾಗಿದೆ. ಈ ಮೂಲಕ ರಾಷ್ಟ್ರಕವಿ ಕುವೆಂಪು ಅವರಿಗೆ, ಅವರ ಅನುಯಾಯಿಗಳಿಗೆ, ಸಮಸ್ತ ಕನ್ನಡಿಗರ ಭಾವನೆಗಳಿಗೆ ಹಾಗೂ ನಾಡಗೀತೆಯ ಪಾವಿತ್ರ್ಯತೆಗೆ ಧಕ್ಕೆ ತರುವ ಹಾಗೂ ತಿರುಚಿದ ಸಾಹಿತ್ಯದ ಬಗ್ಗೆ, ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾದ ಹಿನ್ನೆಲೆಯಲ್ಲಿ ವಿವಿಧ ರೀತಿಯ ವಿಮರ್ಶೆಗಳು ನಿರಂತರ ಕಂಡುಬರುತ್ತಿದೆ. ಇದರಿಂದ ಸಾಮರಸ್ಯ ಕದಡುವ ಸಾಧ್ಯತೆಗಳಿವೆ. ಈ ಕೃತ್ಯ 2017 ರ ಮಾರ್ಚ್‌ 16 ರ ಹಿಂದೆ ಘಟಿಸಿದ್ದು ಕಂಡುಬಂದಿದೆ. ಅದೇ ದಿನ ರೋಹಿತ್ ಚಕ್ರತೀರ್ಥ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡು, ಅದರ ಕೆಳಗೆ ‘ವಾಟ್ಸ್‌ಆ್ಯಪ್‌ ಬಂದಿದೆ, ಮೂಲ ಕವಿಗಳು ಇದ್ದರೆ ಮುಂದೆ ಬನ್ನಿ ಬುರ್ಜ್ ಖಲೀಫಾ ಕೊಡುತ್ತೇನೆ’ ಎಂಬುದಾಗಿ ಉಲ್ಲೇಖಿಸಿರುವಂತೆ ಸಾಮಾಜಿಕ ಜಾಲತಾಣದಲ್ಲಿ, ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದನ್ನು ಗಮನಿಸಲಾಗಿದೆ. ಆದ್ದರಿಂದ ಕ್ರಮ ತೆಗೆದುಕೊಳ್ಳಬೇಕು’ ಎಂದು ದೂರಿನಲ್ಲಿ ಮಾದೇಗೌಡ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.