ADVERTISEMENT

ಮೌಢ್ಯ ಪ್ರಶ್ನಿಸಿದ್ದಕ್ಕೆ ಜೈಲಿಗಟ್ಟಿದ ಪೊಲೀಸರು: ಖಂಡನೆ

ಪ್ರತಿಕ್ರಿಯೆಗೆ ಗೃಹ ಸಚಿವ ಪರಮೇಶ್ವರ ನಕಾರ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2018, 20:34 IST
Last Updated 7 ಸೆಪ್ಟೆಂಬರ್ 2018, 20:34 IST
   

ಬೆಂಗಳೂರು: ಮೌಢ್ಯ ಪ್ರಶ್ನಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಪ್ರಕಟಿಸಿದ್ದಕ್ಕಾಗಿ ಬಂಟ್ವಾಳ ತಾಲ್ಲೂಕಿನ ಸಾಲೆತ್ತೂರಿನ ಅಶ್ರಫ್‌ ಎಂಬುವರನ್ನು ಜೈಲಿಗೆ ಅಟ್ಟಿದ ಪೊಲೀಸರ ವರ್ತನೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆ ಎಂಬ ಟೀಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದೆ.

ಆದರೆ, ಪೊಲೀಸರ ಈ ಕ್ರಮದ ಬಗ್ಗೆ ಪ್ರತಿಕ್ರಿಯಿಸಲು ಗೃಹ ಸಚಿವ ಜಿ. ಪರಮೇಶ್ವರ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ನಿರಾಕರಿಸಿದ್ದಾರೆ. ಪೊಲೀಸರ ನಡೆಗೆ ಆಕ್ರೋಶ ವ್ಯಕ್ತಪಡಿಸಿರುವ ಹಲವರು, ‘ಅಮಾಯಕ ವ್ಯಕ್ತಿಗೆ ಅನ್ಯಾಯ ಆಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

ಘಟನೆ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಕಮಲ್ ಪಂತ್, ‘ಮೌಢ್ಯ ಪ್ರಶ್ನಿಸಿದ್ದಕ್ಕಷ್ಟೇ ಅಶ್ರಫ್ ವಿರುದ್ಧ ಕ್ರಮ ಜರುಗಿಸಿದ್ದರೆ ತಪ್ಪಾಗುತ್ತದೆ. ಯಾವ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು ಎಂಬ ಬಗ್ಗೆ ಠಾಣಾಧಿಕಾರಿಯಿಂದ ವಿವರಣೆ ಪಡೆಯುವಂತೆ ಐಜಿಪಿ ಹಾಗೂ ಎಸ್ಪಿಗೆ ಸೂಚಿಸಲಾಗಿದೆ’ ಎಂದರು.

ADVERTISEMENT

ಅಶ್ರಫ್ ಬೆಂಬಲಕ್ಕೆ ನಿಂತ ಕೆಲವರು ‘ಜಸ್ಟೀಸ್‌ ಫಾರ್‌ ಅಶ್ರಫ್‌’ ಎಂಬ ಅಭಿಯಾನವನ್ನು ಫೇಸ್‌ಬುಕ್‌ನಲ್ಲಿ ಆರಂಭಿಸಿದ್ದಾರೆ.ಲೇಖಕ ಪುರುಷೋತ್ತಮ ಬಿಳಿಮಲೆ, ‘ಮೂಢ ನಂಬಿಕೆಗಳನ್ನು ಪ್ರಶ್ನಿಸಬಾರದೇ’ ಎಂದು ಕೇಳಿದ್ದಾರೆ.

**

ಯು.ಟಿ. ಖಾದರ್ ಎಲ್ಲಿದ್ದೀರಿ?

ಘಟನೆ ಬಗ್ಗೆ ಸಚಿವ ಯು.ಟಿ. ಖಾದರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಹಲವರು, ‘ಖಾದರ್ ಎಲ್ಲಿದ್ದೀರಿ? ಅಶ್ರಫ್ ಸಾಲೆತ್ತೂರುಗೆ ನ್ಯಾಯ ಕೊಡಿಸಿ’ ಎಂದು ಫೇಸ್‌ಬುಕ್‌ನಲ್ಲಿ ಒತ್ತಾಯಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.