ADVERTISEMENT

‘ಶ್ರೀರಂಗಪಟ್ಟಣ ಚಲೋ’ ವಿಫಲಗೊಳಿಸಿದ ಪೊಲೀಸರು

2 ಕಿ.ಮೀ ದೂರದಲ್ಲೇ ಪ್ರತಿಭಟನಾಕಾರರಿಗೆ ತಡೆ, ದ್ವೀಪ ನಗರಿಯ ಸುತ್ತ ಪೊಲೀಸ್‌ ಸರ್ಪಗಾವಲು

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 12:43 IST
Last Updated 4 ಜೂನ್ 2022, 12:43 IST
ಶ್ರೀರಂಗಪಟ್ಟಣ ಪೂರ್ವ ಕೋಟೆ ದ್ವಾರ ಮತ್ತು ಮೇಲೆ ಪೊಲೀಸರನ್ನು ಕಾವಲಿಗೆ ಇರಿಸಲಾಗಿತ್ತು
ಶ್ರೀರಂಗಪಟ್ಟಣ ಪೂರ್ವ ಕೋಟೆ ದ್ವಾರ ಮತ್ತು ಮೇಲೆ ಪೊಲೀಸರನ್ನು ಕಾವಲಿಗೆ ಇರಿಸಲಾಗಿತ್ತು   

ಶ್ರೀರಂಗಪಟ್ಟಣ: ಭಜರಂಗದಳ, ವಿಶ್ವಹಿಂದೂ ಪರಿಷತ್‌ ಮುಖಂಡರು ಕರೆ ನೀಡಿದ್ದ ‘ಶ್ರೀರಂಗಪಟ್ಟಣ ಚಲೋ’ ಯಾತ್ರೆಯನ್ನು ಪೊಲೀಸರು ವಿಫಗೊಳಿಸಿದರು. ಸಂಘಟನೆಗಳ ಕಾರ್ಯಕರ್ತರು ಪಟ್ಟಣ ಪ್ರವೇಶಿಸುವಕ್ಕೆ ಮೊದಲೇ 2 ಕಿ.ಮೀ ದೂರದಲ್ಲೇ ತಡೆದರು.

ಜಾಮಿಯಾ ಮಸೀದಿಯಲ್ಲಿ ಹನುಮಂತನ ಪೂಜೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಯಾತ್ರೆಗೆ ಕರೆ ನೀಡಲಾಗಿತ್ತು. ಇದಕ್ಕೆ ಅವಕಾಶ ನೀಡದ ಪೊಲೀಸರು ಮಸೀದಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದರು. 500ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ಸರ್ಪಗಾವಲು ರಚಿಸಲಾಗಿತ್ತು. ಜಾಮಿಯಾ ಮಸೀದಿ ಸುತ್ತ ಕಬ್ಬಿಣದ ಬೇಲಿ ನಿರ್ಮಿಸಲಾಗಿತ್ತು.

ತಾಲ್ಲೂಕಿನ ಕಿರಂಗೂರು ವೃತ್ತದ ಮೂಲಕ ಘೋಷಣೆ ಕೂಗುತ್ತಾ ಬರುತ್ತಿದ್ದ ಬಜರಂಗದಳ, ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗ ಸೇನೆ ಕಾರ್ಯಕರ್ತರನ್ನು ಪೊಲೀಸರು ತಡೆದು ನಿಲ್ಲಿಸಿದರು. ಕಿರಂಗೂರು ವೃತ್ತದಿಂದ ಈಚೆ ಬಾರದಂತೆ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ಯಾರಿಕೇಡ್‌ ಹಾಕಲಾಗಿತ್ತು. ಜೊತೆಗೆ ಕಾರ್ಯಕರ್ತರನ್ನು ಹಗ್ಗದ ಮೂಲಕ ನಿಯಂತ್ರಿಸಿದರು.

ADVERTISEMENT

ಬೈಕ್‌ನಲ್ಲಿ ಬಂದ ಯುವಕನೊಬ್ಬ ಜೈಶ್ರೀರಾಂ ಘೋಷಣೆ ಕೂಗುತ್ತಾ ಪಟ್ಟಣದ ಕಡೆಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಆತನನ್ನು ಬೆನ್ನಟ್ಟಿ ಹಿಡಿದರು. ಹೆದ್ದಾರಿ ಪಕ್ಕದ ಬನ್ನಿ ಮಂಟಪದತ್ತ ಪ್ರತಿಭಟನಾಕಾರರರನ್ನು ಕರೆದೊಯ್ಯುವಲ್ಲಿ ಪೊಲೀಸರು ಯಶಸ್ವಿಯಾದರು. ಬನ್ನಿಮಂಟಪದ ಸುತ್ತಲೂ ಬ್ಯಾರಿಕೇಡ್‌ ಅಳವಡಿಸಿ ಅತ್ತಿತ್ತ ಓಡಾಡದಂತೆ ನಾಕಾಬಂಧಿ ಹಾಕಲಾಗಿತ್ತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ಯತೀಶ್‌ ಸ್ಥಳದಲ್ಲೇ ಮೊಕ್ಕಾಂ ಹೂಡಿ ಭದ್ರತೆಯ ಮೇಲ್ವಿಚಾರಣೆ ನಡೆಸಿದರು.

ಪಟ್ಟಣದ ಕುವೆಂಪು ವೃತ್ತದಿಂದ ಜಾಮಿಯಾ ಮಸೀದಿಗೆ ಸಂಪರ್ಕ ಕಲ್ಪಿಸುವ ಮಾರ್ಗವನ್ನು ಬಂದ್‌ ಮಾಡಲಾಗಿತ್ತು. ವೆಲ್ಲೆಸ್ಲಿ ಸೇತುವೆಯಿಂದ ಮಸೀದಿಗೆ ತೆರಳುವ ಮಾರ್ಗವನ್ನು ಮುಚ್ಚಲಾಗಿತ್ತು. ಪಟ್ಟಣದ ಪೂರ್ವ ಕೋಟೆ ದ್ವಾರ, ಕೋಟೆ ಮತ್ತು ಬುರುಜುಗಳ ಮೇಲೆ ಪೊಲೀಸರನ್ನು ಕಾವಲಿರಿಸಲಾಗಿತ್ತು. ಅನುಮಾನ ಬಂದವರನ್ನು ತಡೆದು ವಾಪಸ್ ಕಳುಹಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

‘ಜಿಲ್ಲಾಡಳಿತ ಮತ್ತು ಪೊಲೀಸರು ಮೂಡಲಬಾಗಿಲು ಆಂಜನೇಯಸ್ವಾಮಿಯ ಮೂಲ ಸ್ಥಳವಾದ ಜಾಮಿಯಾ ಮಸೀದಿಯತ್ತ ತೆರಳಲು ನಮ್ಮನ್ನು ಬಿಟ್ಟಿಲ್ಲ. ಆದರೆ ಕಾನೂನು ಹೋರಾಟದ ಮೂಲಕ ಮೂಲ ಮಂದಿರವನ್ನು ನಮ್ಮ ಸುಪರ್ದಿಗೆ ಪಡೆದೇ ತೀರುತ್ತೇವೆ’ಎಂದು ಬಜರಂಗ ಸೇನೆ ರಾಜ್ಯ ಸಂಚಾಲಕ ಬಿ. ಮಂಜುನಾಥ್‌ ಹೇಳಿದರು.

ಪ್ರತಿಭಟನಾಕಾರರ ಅಹವಾಲು ಆಲಿಸಿದ ಉಪ ವಿಭಾಗಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ‘ಸಂಘಟನೆಗಳ ಬೇಡಿಕೆಗಳ ಕುರಿತು ಕಾನೂನಿನ ವ್ಯಾಪ್ತಿಯಲ್ಲಿ ಪರಿಶೀಲಿಸಲಾಗುವುದು. ಸ್ಮಾರಕದ ವಾರಸುದಾರಿಕೆ ಮತ್ತು ಅದರ ಐತಹ್ಯ ಕುರಿತು ಸಂಬಂಧಿಸಿದ ಇಲಾಖೆ ಜತೆಗೂ ಚರ್ಚಿಸಿ ಅಗತ್ಯ ಮಾಹಿತಿ ಪಡೆಯಲಾಗುವುದು’ ಎಂದು ಭರವಸೆ ನೀಡಿದರು. ತಹಶೀಲ್ದಾರ್‌ ಶ್ವೇತಾ ಎನ್‌. ರವೀಂದ್ರ ಹಾಜರಿದ್ದರು.

ಬನ್ನಿಮಂಟಪದಲ್ಲೇ ಹನುಮ ಪೂಜೆ

ಪಟ್ಟಣಕ್ಕೆ ತೆರಳಲು ಸಾಧ್ಯವಾಗದೇ ದಸರಾ ಬನ್ನಿ ಮಂಟಪದಲ್ಲೇ ಶ್ರೀರಾಮ ತಾರಕ ಮಂತ್ರ ಮತ್ತು ಹನುಮಾನ್‌ ಚಾಲೀಸ ಪಠಡಿಸಿದರು. ಮಂಟಪದ ಒಳಗೆ ಆಂಜನೇಯನ ಮೂರ್ತಿ ಕೂರಿಸಿ ಪೂಜೆ ಸಲ್ಲಿಸಿದರು.

‘ಮಸೀದಿಯತ್ತ ತಮ್ಮನ್ನು ಬಿಡದ ಪೊಲೀಸರು ಮತ್ತು ಜಿಲ್ಲಾಡಳಿತದ ವಿರುದ್ಧ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಭಾರತೀಯ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿರುವ ಜಾಮಿಯಾ ಮಸೀದಿಯಲ್ಲಿ ಮದರಸಾ ನಡೆಸಲು, ಮುಸ್ಲಿಮರು ಪ್ರಾರ್ಥನೆ ಸಲ್ಲಿಸಲು ಅವಕಾಶ ಇದೆ. ಅಲ್ಲಿ ಹನುಮಂತನಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು’ ಎಂದು ಭಜರಂಗದಳ ಜಿಲ್ಲಾ ಘಟಕದ ಜಿಲ್ಲಾ ಸಂಚಾಲಕ ಹೊಸ ಆನಂದೂರು ಬಸವರಾಜು, ತಾಲ್ಲೂಕು ಕಾರ್ಯದರ್ಶಿ ಬೆಳಗೊಳ ಸುನಿಲ್‌ ಆಕ್ರೋಶ ವ್ಯಕ್ತಪಡಿಸಿದರು.

25 ದಿನಗಳ ಗಡುವು

‘ಇನ್ನು 25 ದಿನಗಳ ಒಳಗಾಗಿ ಜಾಮಿಯಾ ಮಸೀದಿಯ ಒಳಗೆ ನಡೆಯುತ್ತಿರುವ ಮದರಸಾವನ್ನು ತೆರವು ಮಾಡಬೇಕು. ಅಡುಗೆ ಮಾಡಿಕೊಂಡು ಊಟ ಮಾಡುತ್ತಿರುವುದನ್ನು ನಿಷೇಧಿಸಬೇಕು. ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ ಸಂಸ್ಥೆ ಈ ಸ್ಮಾರಕ ಯಾರಿಗೆ ಸೇರಿದ್ದು ಎಂಬುದನ್ನು ಸ್ಪಷ್ಟಪಡಿಸಬೇಕು’ ಸಂಘಟನೆಗಳ ಕಾರ್ಯಕರ್ತರು ಒತ್ತಾಯಿಸಿದರು.

‘ಮಸೀದಿಯ ಮಿನಾರುಗಳ ಕೆಳಗೆ ಇರುವ ಪ್ರಾಂಗಣಕ್ಕೆ ಕಟ್ಟಿರುವ ಗೋಡೆಯನ್ನು ಕೆಡವಿ ಉತ್ಖನನ ನಡೆಸಬೇಕು. ಮಸೀದಿಯಲ್ಲಿನ ಹಿಂದೂ ದೇವರ ಮೂರ್ತಿಗಳನ್ನು ವಿರೂಪಗೊಳಿಸಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಗಡುವಿನ ಒಳಗೆ ನಮ್ಮ ಬೇಡಿಕೆ ಈಡೇರದಿದ್ದರೆ ಮಸೀದಿಯನ್ನು ನಮ್ಮ ಸುಪರ್ದಿಗೆ ಪಡೆಯುತ್ತೇವೆ’ ಎಂದು ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಘಟಕದ ಸಂಚಾಲಕ ಚಿಕ್ಕಬಳ್ಳಿ ಬಾಲಕೃಷ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.