ADVERTISEMENT

ನೀತಿ ಯೋಜನೆ ಸಮಿತಿಗಳ ಸಭೆ 3 ತಿಂಗಳಿಗೊಮ್ಮೆ ಕಡ್ಡಾಯವಾಗಿ ನಡೆಯಬೇಕು: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 15 ಮೇ 2025, 9:50 IST
Last Updated 15 ಮೇ 2025, 9:50 IST
   

ಬೆಂಗಳೂರು: ‘ರಾಜ್ಯದ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರು ನಿಯಮಿತವಾಗಿ ರಾಜ್ಯ ಪ್ರವಾಸ ಮಾಡಬೇಕು. ಗ್ರಾಮ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ, ಹಿಂದುಳಿದವರಿಗೆ ಮೀಸಲಾತಿ ಸರಿಯಾಗಿ ಪಾಲನೆ ಆಗುತ್ತಿದೆಯೇ ಎಂದು ಗಮನ ವಹಿಸಬೇಕು’ ಎಂದು ನೀತಿ ಮತ್ತು ಯೋಜನಾ ಆಯೋಗ ಉಪಾಧ್ಯಕ್ಷ ಬಿ.ಆರ್. ಪಾಟೀಲ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರಾಜ್ಯ ನೀತಿ ಮತ್ತು ಯೋಜನಾ ಆಯೋಗ ಹಾಗೂ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಜಂಟಿ ಸಭೆ ಗುರುವಾರ ನಡೆಯಿತು.

ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ‘ನಾನು ವಿಕೇಂದ್ರೀಕರಣದ ಪರ, ಅಧಿಕಾರವನ್ನು ಗ್ರಾಮ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು. ಅಧಿಕಾರ ವಿಕೇಂದ್ರೀಕರಣದಲ್ಲಿ ಜನರ ಒಳಗೊಳ್ಳುವಿಕೆ ಮುಖ್ಯ. ಜನರ ಅಭಿಪ್ರಾಯಗಳಿಗೆ ಮನ್ನಣೆ ನೀಡಬೇಕು. ಯೋಜನಾ ಮತ್ತು ಅಭಿವೃದ್ಧಿ ಸಮಿತಿಗಳು ಬಜೆಟ್ ಮಂಡನೆಗೆ ಪೂರ್ವದಲ್ಲಿ ಸಭೆ ಕರೆದು ಅಭಿಪ್ರಾಯಗಳನ್ನು ಚರ್ಚಿಸಬೇಕು’ ಎಂದರು.

ADVERTISEMENT

‘ನೀತಿ ಯೋಜನೆ ಸಮಿತಿಗಳ ಆಯ್ಕೆ ಕಾಲಕಾಲಕ್ಕೆ ಆಗುವ ಕುರಿತಂತೆ ಮತ್ತು ನಿಯಮಿತವಾಗಿ ಸಭೆ ನಡೆಯಲು ಅಧಿಕಾರಿಗಳು ಕ್ರಮ ವಹಿಸಬೇಕು. ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ನಡೆಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಲಾಗುವುದು’ ಎಂದರು.

‘ತಾಲ್ಲೂಕು, ಜಿಲ್ಲಾ ಮಟ್ಟದ ಸಮಿತಿಯ ಶಿಫಾರಸುಗಳನ್ನು ಗಮನಕ್ಕೆ ತಂದು ಬಜೆಟ್ ಪೂರ್ವ ಸಭೆಗಳಲ್ಲಿ ಮಂಡಿಸಬೇಕು. ಸಂವಿಧಾನದ (73)(74) ರನ್ವಯ ಗ್ರಾಮ , ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಸರಿಯಾಗಿ ಪಾಲನೆ ಆಗುತ್ತಿಲ್ಲ. ಇದನ್ನು ಪರಿಶೀಲಿಸಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಸ್ಥಳೀಯ ಸಂಸ್ಥೆಗಳ ಆರ್ಥಿಕ ಸಹಾಯ ಒದಗಿಸಲು ಹಣಕಾಸು ಆಯೋಗದ ಅಧ್ಯಕ್ಷರಾದ ಸಿ. ನಾರಾಯಣಸ್ವಾಮಿ ವರದಿ ನೀಡಿದ್ದು ಅದರ ಜಾರಿಗೆ ಕ್ರಮ ವಹಿಸಲಾಗುವುದು’ ಎಂದರು.

‘ಸಂವಿಧಾನದ 73ನೇ ತಿದ್ದುಪಡಿ ಅನ್ವಯ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಜವಾಬ್ದಾರಿ ನಕ್ಷೆಯನ್ನು ಸಿದ್ದಪಡಿಸಲು 2023-24ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಅದರಂತೆ ಗ್ರಾಮೀಣಾಭಿವೃದ್ಧಿ ಇಲಾಖೆಯು 13 ಇಲಾಖೆಗಳಿಗೆ ಸಂಬಂಧಿಸಿದಂತೆ ಜವಾಬ್ದಾರಿ ನಕ್ಷೆಯನ್ನು ಸಿದ್ಧಪಡಿಸಿದೆ. ಅದರಲ್ಲಿ ಆರೋಗ್ಯ ಇಲಾಖೆ, ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ, ಕೃಷಿ, ಜಲಾನಯನ ಅಭಿವೃದ್ಧಿ, ತೋಟಗಾರಿಕೆ ಮತ್ತು ರೇಷ್ಮೆ ಸೇರಿದಂತೆ ಒಂಬತ್ತು ಇಲಾಖೆಗಳ ಕಾರ್ಯಚಟುವಟಿಕೆಯ ಜವಾಬ್ದಾರಿ ನಕ್ಷೆಗಳು ಅಧಿಸೂಚನೆಗೊಂಡಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗಳಿಂದ ಸಹಮತಿ ಬಾಕಿ ಇದೆ. ಬಾಕಿ ಇರುವ ಉಳಿದ 16 ಇಲಾಖೆಗಳ ಕಾರ್ಯಚಟುವಟಿಕೆಯ ಜವಾಬ್ದಾರಿ ನಕ್ಷೆಯನ್ನು 2025ರ ಆಗಸ್ಟ್ 15ರ ಒಳಗೆ ಪೂರ್ಣಗೊಳಿಸಬೇಕು’ ಎಂದು ಮುಖ್ಯಮಂತ್ರಿ ಸಲಹೆ ನೀಡಿದರು.

‘ಗ್ರಾಮ ಠಾಣಾ ಗಡಿಯನ್ನು ಬಹಳ ಹಿಂದೆ ನಿಗದಿ ಪಡಿಸಲಾಗಿದ್ದು  ಪ್ರಸ್ತುತ ವಿಸ್ತರಣೆ ಆಗಿರುವ ಪ್ರದೇಶವನ್ನು ಪುನರ್ ಸಮೀಕ್ಷೆ  ಮಾಡಿಸಿ ನಿಗದಿಪಡಿಸಲು ಕಂದಾಯ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆ ಕ್ರಮ ವಹಿಸಬೇಕು. ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಮೂಲಸೌಕರ್ಯ ಅಭಿವೃದ್ಧಿಗೊಳಿಸಲು ಲ್ಯಾಂಡ್ ಬ್ಯಾಂಕ್ ಸ್ಥಾಪನೆ, ಗ್ರಾಮ ನಕ್ಷೆ ಹೊಂದಿರದ ಗ್ರಾಮಗಳಿಗೆ ಗ್ರಾಮ ನಕ್ಷೆ ರಚನೆ ಕುರಿತಂತೆಯೂ ಪ್ರಸ್ತಾವನೆ ಸಲ್ಲಿಸಬೇಕು’ ಎಂದೂ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ, ಬಿ.ಆರ್. ಪಾಟೀಲ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸಭೆಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.