ADVERTISEMENT

ಎಫ್‌ಸ್ಟೈ ನ್ ಅಲ್ಲ, ಪೊಲಿಟಿಶಿಯನ್ಸ್ ಫೈಲ್: ರಾಜ್ಯದ ಪ್ರಮುಖ ಲೈಂಗಿಕ ಹಗರಣಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಫೆಬ್ರುವರಿ 2026, 12:54 IST
Last Updated 6 ಫೆಬ್ರುವರಿ 2026, 12:54 IST
<div class="paragraphs"><p>– ‍ಪ್ರಜಾವಾಣಿ ಚಿತ್ರ</p></div>
   

– ‍ಪ್ರಜಾವಾಣಿ ಚಿತ್ರ

ಅಮೆರಿಕದ ಜೆಫ್ರಿ ಎಫ್‌ಸ್ಟೈನ್ ಫೈಲ್ ಬಹಿರಂಗಗೊಂಡು ವಿಶ್ವದಾದ್ಯಂತ ತಲ್ಲಣ ಮೂಡಿಸಿದೆ. ಡೊನಾಲ್ಡ್ ಟ್ರಂಪ್, ನರೇಂದ್ರ ಮೋದಿ, ಬಿಲ್ ಕ್ಲಿಂಟನ್ ಅವರಂಥ ಪ್ರಭಾವಿ ರಾಜಕಾರಣಿಗಳು,ಉದ್ಯಮಿಗಳು, ಬ್ರಿಟಿಷ್ ರಾಜಮನೆತನ ಸೇರಿದಂತೆ ಹಲವು ವ್ಯಕ್ತಿಗಳ ಹೆಸರು ಕೇಳಿಬಂದಿದ್ದು ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

ಫ್ಲಾರಿಡಾದ ಪಾಮ್ ಬೀಚ್‌ನಲ್ಲಿ, ಮೆಕ್ಸಿಕೊ, ನ್ಯೂಯಾರ್ಕ್‌ಗಳಲ್ಲಿ ಬಂಗಲೆಗಳನ್ನು ಖರೀದಿಸಿದ್ದ ಆತ, ಅವುಗಳಲ್ಲಿ ರಾಜಕಾರಣಿಗಳು, ಉದ್ಯಮಿಗಳು, ಶ್ರೀಮಂತರಿಗೆ ಅದ್ದೂರಿ ಪಾರ್ಟಿಗಳನ್ನು (ಔತಣಕೂಟ) ಸಂಘಟಿಸುವುದಕ್ಕೆ ಆರಂಭಿಸಿ, ಅದರ ಮೂಲಕ ಪ್ರಭಾವಿಗಳ ಸಂಪರ್ಕ ಗಳಿಸಿದ್ದ. ದಿನಕಳೆದಂತೆ ಆತನ ಪಾರ್ಟಿಗಳು ಜನಪ್ರಿಯವಾದವು. ದೇಶವಿದೇಶಗಳ ಖ್ಯಾತನಾಮರೂ ಅವನ ಸಂಪರ್ಕಕ್ಕೆ ಬಂದಿದ್ದರು. ದೊಡ್ಡ ದೊಡ್ಡ ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿಗಳ ಮೇಲೆ ಪ್ರಭಾವ ಬೀರಿ ತನ್ನ ವ್ಯಾವಹಾರಿಕ ಕೆಲಸ ಸಾಧಿಸಿಕೊಳ್ಳುತ್ತಿದ್ದ. ಸ್ವತಃ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ನಡೆಸಿದ ಅಪರಾಧಿಯಾಗಿರುವ ಎಫ್‌ಸ್ಟೈನ್, ಪ್ರಭಾವಿಗಳನ್ನು ಇದರ ಬಲೆಗೆ ಕೆಡವಿದ್ದಾನೆ ಎಂಬ ಆರೋಪವೂ ಇದೆ.

ADVERTISEMENT

ರಾಜಕಾರಣಿಗಳು, ಉದ್ಯಮಿಗಳು ಮತ್ತು ಪ್ರಭಾವಿಗಳು ಲೈಂಗಿಕ ಹಗರಣದಲ್ಲಿ ಸಿಲುಕಿರುವ ಹತ್ತಾರು ಪ್ರಕರಣಗಳನ್ನು ರಾಜ್ಯ ಮತ್ತು ರಾಷ್ಟ್ರದಲ್ಲೂ ಕಾಣಬಹುದಾಗಿದೆ.

ರಾಜ್ಯದ ಮಟ್ಟಿಗೆ ನೋಡುವುದಾದರೆ, ಇತ್ತೀಚೆಗೆ ಅತಿ ಹೆಚ್ಚು ಸುದ್ದಿ ಮಾಡಿದ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ, ಮಾಜಿ ಸಚಿವ ಎಚ್‌.ಡಿ, ರೇವಣ್ಣ ಅವರ ಮಗ ಪ್ರಜ್ವಲ್ ರೇವಣ್ಣ ಅವರ ಪ್ರಕರಣ. ಹಲವು ಮಹಿಳೆಯರ ಜೊತೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿ ಅದರ ವಿಡಿಯೊ ಚಿತ್ರೀಕರಿಸಿದ ಆರೋಪ ಅವರ ಮೇಲಿದೆ. ನೂರಾರು ವಿಡಿಯೊಗಳ ಪೆನ್‌ಡ್ರೈವ್‌ಗಳು ಬಹಿರಂಗವಾಗಿ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗಿತ್ತು. ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಬಳಿಕ ವಾಪಸ್ ಆಗಿದ್ದರು. ಮನೆಗೆಲಸದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅವರ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಅಪಹರಣ ಪ್ರಕರಣ ರೇವಣ್ಣ ಮೇಲಿದೆ. ಅಲ್ಲದೆ, ಅವರ ಮತ್ತೊಬ್ಬ ಮಗ ಸೂರಜ್ ರೇವಣ್ಣ ವಿರುದ್ಧ ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಜೀವ ಬೆದರಿಕೆಯ ಆರೋಪವೂ ಇತ್ತು. ಈ ಸಂಬಂಧ ತನಿಖಾಧಿಕಾರಿಗಳು ಬಿ ರಿಪೋರ್ಟ್ ಸಲ್ಲಿಸಿದ್ದರು. ಬಳಿಕ, ಬಿ ರಿಪೋರ್ಟ್ ವಿರುದ್ಧ ಸಂತ್ರಸ್ತ ಮೇಲ್ಮನವಿ ಸಲ್ಲಿಸಿದ್ದಾರೆ.

ಇದಕ್ಕೂ ಮೊದಲು ರಾಜ್ಯದಲ್ಲಿ ಸದ್ದು ಮಾಡಿದ ಲೈಂಗಿಕ ಹಗರಣಗಳೆಂದರೆ, 2021ರ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸುತ್ತಿಕೊಂಡ ಸಿ.ಡಿ ಹಗರಣ. ಕೆಲಸ ಕೊಡಿಸುವ ಆಮಿಷವೊಡ್ಡಿ ಯುವತಿ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂದು ಆರೋಪಿಸಲಾದ ವಿಡಿಯೊ ದೃಶ್ಯದ ಸಿಡಿ ಎಲ್ಲೆಡೆ ಹರಿದಾಡಿತ್ತು. ಬಳಿಕ, ಎಸ್‌ಐಟಿ ತನಿಖೆ ಆರಂಭವಾಗಿದ್ದರಿಂದ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಪ್ರಕರಣದ ವಿಚಾರಣೆ ನಡೆಸಿದ ಎಸ್‌ಐಟಿ ಸಾಕ್ಷ್ಯಾಧಾರಗಳ ಕೊರತೆಯಿಂದ ಅವರನ್ನು ಖುಲಾಸೆಗೊಳಿಸಿತು.

ಒಪ್ಪಿತ ಲೈಂಗಿಕತೆಯನ್ನು ಯಾರೂ ವಿರೋಧಿಸುವುದು ಸಾಧ್ಯವಿಲ್ಲ. ಕಾನೂನು ಸಹ ಒಪ್ಪಿತ ಲೈಂಗಿಕತೆಗೆ ಅವಕಾಶ ನೀಡುತ್ತದೆ. ಆದರೆ, ಒಂದು ಗಂಡು ಮತ್ತು ಒಂದು ಹೆಣ್ಣು ನಡೆಸುವ ಒಪ್ಪಿತ ಲೈಂಗಿಕತೆಯಲ್ಲಿ ಅಧಿಕಾರ ಯಾವ ರೀತಿ ಪ್ರಭಾವ ಬೀರಿದೆ? ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ರಾಜ್ಯದ ರಾಜಕಾರಣ ಮತ್ತು ಅದಕ್ಕೆಅಂಟಿಕೊಂಡ ಲೈಂಗಿಕ ಹಗರಣಗಳ ಬಹುಮುಖ್ಯ ವಿಚಾರವನ್ನು ನಾವು ನೋಡಬಹುದು.

ರಾಜ್ಯದಲ್ಲಿ ಈ ಹಿಂದೆ ನಡೆದ ರಾಜಕೀಯ ಲೈಂಗಿಕ ಹಗರಣಗಳನ್ನು ನೋಡುವಾಗ ನೆನಪಾಗುವ ಮೊದಲ ಹಗರಣ 1973ರಲ್ಲಿ ನಡೆದಿದ್ದು. ಆಗ ಮುಖ್ಯಮಂತ್ರಿಯಾಗಿದ್ದವರು ದೇವರಾಜ ಅರಸು. ಅವರ ಸಂಪುಟದಲ್ಲಿ ಗೃಹ ಸಚಿವರಾಗಿದ್ದವರು ಆರ್.ಡಿ.ಕಿತ್ತೂರರು. ಅವರ ಮೇಲಿದ್ದ ಆರೋಪ ಕಾಣೆಯಾಗಿದ್ದ ಹೆಣ್ಣುಮಗಳೊಬ್ಬಳು ಸಚಿವ ಕಿತ್ತೂರ್ ಅವರ ಮನೆಯಲ್ಲಿ ಇದ್ದರು ಎಂಬುದು. ಆರೋಪದ ಕಾರಣದಿಂದ ಕಿತ್ತೂರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಬಹುಶಃ ಲೈಂಗಿಕ ಹಗರಣದ ಕಾರಣದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೊದಲ ಸಚಿವರೂ ಅವರೇ. ಬಹಿರಂಗವಾದ ಮೊದಲ ಪ್ರಕರಣವೂ ಅದೇ.

ಇವತ್ತಿನ ಸಂದರ್ಭದಲ್ಲಿ ಈ ಹಗರಣವನ್ನು ನೋಡುವಾಗ ಇದೊಂದು ದೊಡ್ಡ ಹಗರಣ ಎಂದು ಅನ್ನಿಸುವುದಿಲ್ಲ. ಮನೆಯಲ್ಲಿ ಇದ್ದಳು ಎನ್ನಲಾದ ಆ ಹೆಣ್ಣುಮಗಳ ಜೊತೆ ಕಿತ್ತೂರ್ ಬೇರೆ ರೀತಿ ಸಂಬಂಧ ಹೊಂದಿದ್ದರು ಎಂಬುದಕ್ಕೆ ಯಾವುದೇ ಸಾಕ್ಷ್ಯ ಇರಲಿಲ್ಲ. ಆಕೆ ಸಚಿವರ ಮನೆಯಲ್ಲಿ ಇದ್ದರು ಅಷ್ಟೆ. ಆ ಸಂದರ್ಭದಲ್ಲಿ ಬಂದ ವರದಿಗಳ ಪ್ರಕಾರ, ಈ ಕತೆ ತುಂಬಾ ಸಿನಿಮೀಯವೂ ರೋಚಕವೂ ಆಗಿದೆ.

ಈ ಹೆಣ್ಣುಮಗಳು ಅದೊಂದು ದಿನ ಭಾರಿ ಮಳೆ ಬೀಳುತ್ತಿದ್ದ ಸಂದರ್ಭದಲ್ಲಿ ಸಚಿವರ ಅಧಿಕೃತ ನಿವಾಸದ ಕಾಂಪೌಂಡ್ ಒಳಗಿನ ಮರದ ಕೆಳಗೆ ನಿಂತಿದ್ದಳು. ಸಚಿವರು ಆಕೆಯನ್ನು ಮನೆಯ ಒಳಗೆ ಕರೆದಿದ್ದರು. ಇಲ್ಲಿಂದ ಕಥೆ ಬೇರೆ ಬೇರೆ ತಿರುವುಗಳನ್ನು ಪಡೆದು ಸಚಿವ ಕಿತ್ತೂರ್ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. 1973ರ ಸಂದರ್ಭದಲ್ಲಿ ಇದ್ದ ನೈತಿಕತೆಯ ವ್ಯಾಖ್ಯೆ ಈಗ ಸಂಪೂರ್ಣವಾಗಿ ಬದಲಾಗಿದೆ. ಆ ಸಂದರ್ಭದಲ್ಲಿ ಸಿ.ಡಿಯ ಸಾಕ್ಷ್ಯ ಇಲ್ಲದಿದ್ದರೂ ಕೇವಲ ಆರೋಪದ ಹಿನ್ನೆಲೆಯಲ್ಲಿ ಸಚಿವರು ರಾಜೀನಾಮೆ ನೀಡಿದರು. ಈಗ ಸಿ.ಡಿ ಇದ್ದರೂ ಅದು ನಕಲಿ ಎಂದು ವಾದ ಮಾಡಬಹುದು.

ಇದಾದ ನಂತರ 2007ರಲ್ಲಿ ಶಾಸಕ ರೇಣುಕಾಚಾರ್ಯ ಅವರ ಲೈಂಗಿಕ ಹಗರಣ ವರದಿಯಾಯಿತು. ಸ್ವಲ್ಪಕಾಲ ಭಾರಿ ಸದ್ದು ಮಾಡಿತು. ನರ್ಸ್ ಒಬ್ಬರ ಜೊತೆ ರೇಣುಕಾಚಾರ್ಯ ಚುಂಬನದಲ್ಲಿ ತೊಡಗಿದ್ದ ದೃಶ್ಯಗಳು ಬಹಿರಂಗಗೊಂಡವು. ಇದು ಭಾರತೀಯ ಜನತಾ ಪಕ್ಷವನ್ನು ಮುಜುಗರಕ್ಕೆ ಈಡು ಮಾಡಿತು. ರಾಜಕಾರಣಿಗಳ ನೈತಿಕತೆಯ ಪ್ರಶ್ನೆ ಮತ್ತೆ ಚರ್ಚೆಗೆ ಕಾರಣವಾಯಿತು. ಸಾರ್ವಜನಿಕ ಬದುಕಿನಲ್ಲಿ ಇರುವವರು ನೈತಿಕತೆಗೆ ಮಹತ್ವ ನೀಡದಿರುವುದು ಸಾಮಾಜಿಕ ವಲಯದ ಚರ್ಚೆಗೆ ಗ್ರಾಸ ಒದಗಿಸಿತು. ಈ ಆರೋಪದ ನಡುವೆಯೂ ರೇಣುಕಾಚಾರ್ಯ 2008ರಲ್ಲಿ ಸಚಿವರಾದರು. ಅವರ ಮೇಲೆ ಬಂದಿದ್ದ ಅನೈತಿಕ ಸಂಬಂಧದ ಪ್ರಶ್ನೆಯನ್ನು ನೇಪಥ್ಯಕ್ಕೆ ಸರಿಯಿತು.

2010ರಲ್ಲಿ ಇನ್ನೊಬ್ಬ ಸಚಿವರು ಲೈಂಗಿಕ ಹಗರಣಕ್ಕೆ ಸಿಲುಕಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಅವರು ಯಡಿಯೂರಪ್ಪ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದ ಹರತಾಳು ಹಾಲಪ್ಪ. ಸ್ನೇಹಿತನ ಹೆಂಡತಿಯ ಜೊತೆ ಲೈಂಗಿಕ ಚಟುವಟಿಕೆ ನಡೆಸಿದ ಆರೋಪ ಹೊತ್ತಿದ್ದ ಹಾಲಪ್ಪ 2017ರಲ್ಲಿ ಈ ಆರೋಪದಿಂದ ಮುಕ್ತರಾದರು. ತಮ್ಮ ಹೆಂಡತಿಯ ಜೊತೆ ಹಾಲಪ್ಪ ಅವರಿಗೆ ಸಂಬಂಧವಿದೆ ಎಂದು ಅವರ ಸ್ನೇಹಿತರೊಬ್ಬರು ಆರೋಪ ಮಾಡಿದ್ದರು.

ಅದಾದ ಕೇವಲ ಒಂದು ವರ್ಷದ ನಂತರ ಉಡುಪಿ ಶಾಸಕರಾಗಿದ್ದ ರಘುಪತಿ ಭಟ್ಟರ ವಿರುದ್ಧ ಲೈಂಗಿಕ ಹಗರಣ ಆರೋಪ ಕೇಳಿಬಂದಿತ್ತು. ಮಹಿಳೆಯೊಬ್ಬರ ಜೊತೆ ಅವರಿದ್ದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. ಭಟ್ಟರು ಚುನಾವಣೆಯಿಂದಲೇ ಹಿಂದೆ ಸರಿದರು. ಐದು ವರ್ಷ ವನವಾಸ ಅನುಭವಿಸಿದರು. ಯಾವಾಗಲೂ ಸಾಮಾನ್ಯ ಜನರಿಗೆ ನೆನಪು ಕಡಿಮೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಭಟ್ಟರು ಉಡುಪಿ ಕ್ಷೇತ್ರದಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದರು.

2015ರಲ್ಲಿ ಲೈಂಗಿಕ ಹಗರಣದಲ್ಲಿ ಸಿಲುಕಿದ ಇನ್ನೊಬ್ಬ ಶಾಸಕ ಎ. ರಾಮದಾಸ್. ಮಹಿಳೆಯೊಬ್ಬರನ್ನು ಲೈಂಗಿಕವಾಗಿ ಬಳಸಿಕೊಂಡರು ಎಂಬುದು ಅವರ ಮೇಲಿನ ಆರೋಪವಾಗಿತ್ತು. ಆದರೆ ಈ ಆರೋಪದಿಂದಾಗಿ ರಾಮದಾಸ್ ಆತ್ಮಹತ್ಯೆಗೆ ಯತ್ನ ನಡೆಸಿದ್ದರು. ನಂತರ ಈ ಆರೋಪದ ಬಗ್ಗೆ ಸಿಐಡಿ ಪೊಲೀಸರು ತನಿಖೆ ನಡೆಸಿದರು. ಅದರಲ್ಲಿ ಅವರು ಆರೋಪ ಮುಕ್ತರಾದರು.

2016ರಲ್ಲಿ ಅಂದಿನ ಸರ್ಕಾರದಲ್ಲಿ ಅಬಕಾರಿ ಸಚಿವರಾಗಿದ್ದ ಎಚ್‌.ವೈ. ಮೇಟಿ ಅವರು ಮಹಿಳೆಯೊಬ್ಬರ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎನ್ನಲಾದ ವಿಡಿಯೊವನ್ನು ಆರ್‌ಟಿಐ ಕಾರ್ಯಕರ್ತರೊಬ್ಬರು ಬಹಿರಂಗಗೊಳಿಸಿದ್ದರು. ಬಳಿಕ, ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ತನಿಖೆ ನಡೆದು ಅವರು ಆರೋಪ ಮುಕ್ತರಾಗಿದ್ದರಯ.

2019ರಲ್ಲಿ ಅಂದಿನ ಮಹದೇವಪುರ ಶಾಸಕ ಅರವಿಮದ ಲಿಂಬಾವಳಿ ಅವರು ಸಲಿಂಗ ಕಾಮದ ನಡೆಸಿದ್ದಾರೆಂಬ ಆರೋಪದ ವಿಡಿಯೊ ಹರಿದಾಡಿತ್ತು. ಇದೊಂದು ನಕಲಿ ವಿಡಿಯೊ ಎಂದು ಲಿಂಬಾವಳಿ ತಳ್ಳಿಹಾಕಿದ್ದರು.

ಇನ್ನೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ 17 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಪೊಕ್ಸೊ ಪ್ರಕರಣ ದಾಖಲಾಗಿದ್ದು, ತನಿಖಾ ಹಂತದಲ್ಲಿದೆ.

ಇವು ಲೈಂಗಿಕ ಹಗರಣಗಳ ವಿಷಯವಾದರೆ, ಕೆಲವು ರಾಜಕೀಯ ವ್ಯಕ್ತಿಗಳು ವಿವಾಹೇತರ ಸಂಬಂಧಗಳಿಂದಲೂ ಸುದ್ದಿಯಾಗಿದ್ದರು. ಮದುವೆಯೇತರ ಸಂಬಂಧ ಅಥವಾ ಸ್ನೇಹಿತೆಯರನ್ನು ಹೊಂದಿದ್ದಾರೆ ಎಂದು ಹೇಳಲಾಗಿದ್ದ ಸಾಕಷ್ಟು ರಂಜನೀಯ ಕಥೆಗಳು ಕೇಳಿ ಬಂದಿದ್ದವು. ಜೊತೆಗೆ ಈ ಸಂಬಂಧಗಳನ್ನು ಒಪ್ಪಿಕೊಂಡ ಕೆಲ ಹಿರಿಯ ರಾಜಕಾರಣಿಗಳು ತಾವು ‘ಶ್ರೀರಾಮಚಂದ್ರ ಅಲ್ಲ’ ಎಂದು ಜನರ ಎದುರು ಸ್ಪಷ್ಟಪಡಿಸಿದ್ದರು.

ಇವು ರಾಜಕಾರಣಿಗಳ ಕಥೆಯಾದರೆ, ರಾಜ್ಯದ ಹಲವು ಸ್ವಾಮೀಜಿಗಳೂ ಲೈಂಗಿಕ ಹಗರಣ ಆರೋಪದಿಂದ ಸುದ್ದಿ ಮಾಡಿದ್ದರು. ರಾಘವೇಶ್ವರ ಶ್ರೀ, ಮುರುಘಾ ಶರಣರು, ಕಮಲಾಕರ ಭಟ್, ಆನಂದ್ ಗುರೂಜಿ, ದೇವಿ ಶ್ರೀ ಮುಂತಾದವರ ಹೆಸರು ಕೇಳಿಬಂದಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.