ನವದೆಹಲಿ: ರಾಜ್ಯದ ನೀರಾವರಿ ಯೋಜನೆಗಳ ಕುರಿತು ಕೇಂದ್ರ ಸಚಿವರಾದ ಭೂಪೇಂದರ್ ಯಾದವ್ ಹಾಗೂ ಸಿ.ಆರ್.ಪಾಟೀಲ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಅವರನ್ನೂ ಭೇಟಿ ಮಾಡಿ ಚರ್ಚಿಸಿದರು.
ಈ ಭೇಟಿಯ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಬರೆದುಕೊಂಡ ಶಿವಕುಮಾರ್, ‘ಜೋಶಿ ಅವರನ್ನು ಭೇಟಿ ಮಾಡಿ, ಬಾಕಿ ಉಳಿದಿರುವ ಕರ್ನಾಟಕದ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುಮತಿ ದೊರಕಿಸಿಕೊಡಲು ಸಹಕಾರ ನೀಡುವಂತೆ ಮನವಿ ಮಾಡಿದೆ. ಭವಿಷ್ಯದ ಕರ್ನಾಟಕಕ್ಕೆ ರಾಜಕೀಯವನ್ನು ಮೀರಿದ ಏಕತೆಯ ಅಗತ್ಯವಿದೆ’ ಎಂದು ಹೇಳಿದ್ದಾರೆ. ಈ ಹೇಳಿಕೆಯು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
‘ಮಹದಾಯಿ ವಿಷಯದ ಬಗ್ಗೆ ನೀವು, ಜೋಶಿ ಹಾಗೂ ಗೋವಾದ ಮುಖ್ಯಮಂತ್ರಿ ಚರ್ಚೆ ನಡೆಸಿ ಒಮ್ಮತಕ್ಕೆ ಬನ್ನಿ ಎಂದು ಭೂಪೇಂದರ್ ಯಾದವ್ ಸಲಹೆ ನೀಡಿದ್ದರು. ಮಹದಾಯಿ ವಿಷಯದಲ್ಲಿ ಗೋವಾ ಅನಗತ್ಯವಾಗಿ ತಕರಾರು ಎತ್ತುತ್ತಿದ್ದು, ಹೀಗಾಗಿ ಅವರೊಂದಿಗೆ ಚರ್ಚೆ ನಡೆಸುವುದಿಲ್ಲ ಎಂದು ಶಿವಕುಮಾರ್ ಸ್ಪಷ್ಟಪಡಿಸಿದ್ದರು. ಜೋಶಿ ಅವರೊಂದಿಗೆ ಚರ್ಚೆ ನಡೆಸುವಂತೆ ಸಚಿವರು ಸಲಹೆ ನೀಡಿದ್ದರು. ಅವರ ಸಲಹೆಯ ಮೇರೆಗೆ ಜೋಶಿ ಅವರನ್ನು ಶಿವಕುಮಾರ್ ಭೇಟಿ ಮಾಡಿದರು’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.