ADVERTISEMENT

ಖರ್ಗೆಯವರೇ, ಜೀವನದಲ್ಲಿ ಕಿಂಚಿತ್ತಾದರೂ ಸ್ವಾಭಿಮಾನ ಬೇಕಲ್ಲವೇ: ಬಿಜೆಪಿ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಡಿಸೆಂಬರ್ 2021, 9:37 IST
Last Updated 5 ಡಿಸೆಂಬರ್ 2021, 9:37 IST
ಮಮತಾ ಬ್ಯಾನರ್ಜಿ ಮತ್ತು  ಮಲ್ಲಿಕಾರ್ಜುನ ಖರ್ಗೆ
ಮಮತಾ ಬ್ಯಾನರ್ಜಿ ಮತ್ತು ಮಲ್ಲಿಕಾರ್ಜುನ ಖರ್ಗೆ   

ಬೆಂಗಳೂರು: ಕಾಂಗ್ರೆಸ್‌ನವರಿಗೆ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಜತೆಗಿನ ನೆಂಟಸ್ಥಿಕೆಯನ್ನು ಬಿಡಲು ಮನಸಿಲ್ಲ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಬಿಜೆಪಿ, ‘ಯುಪಿಎ ಎಲ್ಲಿದೆ ಎಂದು ನಿಮ್ಮ (ಕಾಂಗ್ರೆಸ್‌) ಅಸ್ತಿತ್ವದ ಪ್ರಶ್ನೆ ಮಾಡಿದ್ದ ಮಮತಾ ಬ್ಯಾನರ್ಜಿಯವರು ಈ ಹಿಂದೆ ಸೋನಿಯಾ ಗಾಂಧಿಯವರ ಬಗ್ಗೆಯೂ‌ ಕೊಂಕು ಮಾತನಾಡಿದ್ದರು. ಆದರೂ ಕಾಂಗ್ರೆಸ್‌ನವರಿಗೆ ಟಿಎಂಸಿ ಜತೆಗಿನ ನೆಂಟಸ್ಥಿಕೆ ಬಿಡಲು ಮನಸಿಲ್ಲ. ಮಲ್ಲಿಕಾರ್ಜುನ ಖರ್ಗೆಯವರೇ, ಜೀವನದಲ್ಲಿ ಕಿಂಚಿತ್ತಾದರೂ ಸ್ವಾಭಿಮಾನ ಬೇಕಲ್ಲವೇ’ ಎಂದು ಪ್ರಶ್ನಿಸಿದೆ.

ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದ ಮಮತಾ ಬ್ಯಾನರ್ಜಿ, ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಚರ್ಚೆ ನಡೆಸಿದ್ದರು. ಈ ಭೇಟಿ ವೇಳೆ ಮಮತಾ, ಕಾಂಗ್ರೆಸ್‌ ನಾಯಕರನ್ನು ಭೇಟಿ ಮಾಡಿರಲಿಲ್ಲ.

ADVERTISEMENT

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಮತಾ, 'ರಾಷ್ಟ್ರದಲ್ಲಿ ಯುಪಿಎ ಉಳಿದಿಲ್ಲ. ಆದರೆ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಸಮಾನ ಮನಸ್ಕ ಪ್ರತಿಪಕ್ಷಗಳನ್ನು ಒಟ್ಟುಗೂಡಲು ಕರೆ ನೀಡಲಾಗಿದೆ’ ಎಂದು ಹೇಳಿದ್ದರು.

‘ಬಿಜೆಪಿ ವಿರುದ್ಧ ಸೆಣಸಲು ಬಲ ಕಳೆದುಕೊಂಡಿರುವ ಕಾಂಗ್ರೆಸ್‌ ಪಕ್ಷವು ಶೈತ್ಯಾಗಾರದಲ್ಲಿದೆ. ಬಿಜೆಪಿ ಎದುರಿಸಲು ವಿರೋಧ ಪಕ್ಷಗಳು ಪ್ರಬಲವಾದ ಮುಖ್ಯಸ್ಥರನ್ನು ನೋಡುತ್ತಿದ್ದು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮಾತ್ರ ಇದಕ್ಕೆ ಸಮರ್ಥರಾಗಿದ್ದಾರೆ’ ಎಂದು ಟಿಎಂಸಿ ಮುಖವಾಣಿ ‘ಜಾಗೋ ಬಾಂಗ್ಲಾ’ದಲ್ಲಿ ಹೇಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.