ADVERTISEMENT

ಪಾಲಿಟೆಕ್ನಿಕ್ ಉಪನ್ಯಾಸಕರಿಗೆ ಶೀಘ್ರ ವೇತನ ಭರವಸೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 20:29 IST
Last Updated 18 ಫೆಬ್ರುವರಿ 2020, 20:29 IST
ಸಿ.ಎನ್.ಅಶ್ವತ್ಥನಾರಾಯಣ
ಸಿ.ಎನ್.ಅಶ್ವತ್ಥನಾರಾಯಣ   

ಬೆಂಗಳೂರು: ಪಾಲಿಟೆಕ್ನಿಕ್ ಕಾಲೇಜುಗಳ ಅರೆಕಾಲಿಕ ಉಪನ್ಯಾಸಕರು, ಚಿತ್ರಕಲಾ ಮಹಾವಿದ್ಯಾಲಯಗಳ ಉಪನ್ಯಾಸಕರ ವೇತನವನ್ನು ಹದಿನೈದು ದಿನಗಳಲ್ಲಿ ಬಿಡುಗಡೆ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥನಾರಾಯಣ ವಿಧಾನಪರಿಷತ್‌ನಲ್ಲಿ ಮಂಗಳವಾರ ಭರವಸೆ ನೀಡಿದರು.

ಬಿಜೆಪಿ ಸದಸ್ಯ ಎಸ್‌.ವಿ.ಸಂಕನೂರ ವಿಷಯ ಪ್ರಸ್ತಾಪಿಸಿ, ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕರು ಒಂದು ವರ್ಷದಿಂದ ವೇತನ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಕ್ಷಣ ಸಮಸ್ಯೆ ಪರಿಹರಿಸಬೇಕು ಎಂದು ಕೋರಿದರು.

ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ವೇತನ ಬಿಡುಗಡೆಯಾಗಿಲ್ಲ. ಶೀಘ್ರ ಅನುದಾನ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಇದರಿಂದ ತೃಪ್ತರಾಗದ ವಿರೋಧ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ADVERTISEMENT

‘ಆರು ತಿಂಗಳಿಂದ ಶಿಕ್ಷಕರಿಗೆ ವೇತನ ನೀಡಲು ಸರ್ಕಾರದಲ್ಲಿ ಹಣ ಇಲ್ಲ’ ಎಂದು ಬಸವರಾಜ ಹೊರಟ್ಟಿ ತರಾಟೆಗೆ ತೆಗೆದುಕೊಂಡರು. ‘ಇಂತಹ ದುಃಸ್ಥಿತಿ ನಿಮಗೆ ಬರಬಾರದಿತ್ತು’ ಎಂದು ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಕಿಚಾಯಿಸಿದರು.

‘ಯಾವಾಗ ಹಣ ಬಿಡುಗಡೆ ಮಾಡುತ್ತೀರಿ ಎಂಬುದನ್ನು ಸ್ಪಷ್ಟವಾಗಿ ಹೇಳಬೇಕು’ ಎಂದು ಪಟ್ಟುಹಿಡಿದರು. ಇದಕ್ಕೆ ಸ್ಪಂದಿಸಿದ ಸಚಿವರು, 15 ದಿನಗಳಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.