ADVERTISEMENT

ಜನಸಂಖ್ಯೆ ವೃದ್ಧಿ: ನ್ಯಾಯಮೂರ್ತಿಗಳ ಅಭಾವ- ನ್ಯಾ. ಎಸ್.ಸುನಿಲ್ ದತ್‌ ಯಾದವ್ ಅಭಿಮತ

ನ್ಯಾ. ಎಸ್.ಸುನಿಲ್ ದತ್‌ ಯಾದವ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 0:02 IST
Last Updated 10 ಜನವರಿ 2026, 0:02 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ದಾವೆಗಳ ದಾಖಲಾತಿಯಲ್ಲಿ ಅನೂಹ್ಯ ಏರುಗತಿ ಕಂಡು ಬರುತ್ತಿದ್ದು, ಇದಕ್ಕೆ ಪೂರಕವಾಗಿ ಅಧಿಕ ಸಂಖ್ಯೆಯಲ್ಲಿ ನ್ಯಾಯಾಲಯ ಮತ್ತು ನ್ಯಾಯಮೂರ್ತಿಗಳ ನೇಮಕಾತಿಯೂ ಹೆಚ್ಚಬೇಕಿದೆ’ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಯೋಗೀಶ್‌ಗೌಡ ಗೌಡರ್ ಕೊಲೆ ಪ್ರಕರಣದ 15ನೇ ಆರೋಪಿಯಾಗಿರುವ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ, ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್.ಸುನಿಲ್ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಮುಕ್ತಾಯಗೊಳಿಸಿತು. ಅಂತೆಯೇ, ಆದೇಶ ಕಾಯ್ದಿರಿಸಿತು.

ವಿಚಾರಣೆ ಮುಕ್ತಾಯದ ಬಳಿಕ ನ್ಯಾಯಮೂರ್ತಿ ಸುನಿಲ್‌ ದತ್‌ ಯಾದವ್‌ ಅವರು, ‘ಪ್ರಕರಣಗಳ ವಿಲೇವಾರಿಯಲ್ಲಿ ತಡ ಆಗುತ್ತಿರುವುದಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಸರ್ಕಾರ ಸಾಂಸ್ಥಿಕ ಸುಧಾರಣೆಗಳ ಮೂಲಕ ಪರಿಹರಿಸಬೇಕೆ ವಿನಃ ನ್ಯಾಯಾಲಯದ ಮುಂದೆ ಇಡುವುದರಿಂದ ಪ್ರಯೋಜನವಿಲ್ಲ. ನ್ಯಾಯಾಲಯ ಮತ್ತು ನ್ಯಾಯಮೂರ್ತಿಗಳ ನೇಮಕಾತಿ ಹೆಚ್ಚಿಸುವ ಮಾರ್ಗವನ್ನು ಹೊರತುಪಡಿಸಿ ನ್ಯಾಯದಾನ ಪ್ರಕ್ರಿಯೆಗೆ ಮತ್ತಾವುದೇ ಅಡ್ಡದಾರಿಗಳಿಲ್ಲ’ ಎಂದು ಹೇಳಿದರು.

ADVERTISEMENT

‘ಪ್ರತಿಯೊಂದು ಪ್ರಕರಣದ ವಿಚಾರಣೆಗೂ ತನ್ನದೇ ಆದ ಸಮಯ ಬೇಕು. ಇದರಿಂದ ನ್ಯಾಯಮೂರ್ತಿಗಳ ಕೆಲಸದ ಒತ್ತಡ ಹೆಚ್ಚಿದೆ. ಪ್ರಕರಣಗಳನ್ನು ವೇಗವಾಗಿ ಇತ್ಯರ್ಥಪಡಿಸುವ ವಿಧಾನಕ್ಕೆ ಪ್ರಯತ್ನಿಸಲು ಹೋದರೆ ಅದು ಗಂಭೀರ ಪೂರ್ವಗ್ರಹಕ್ಕೆ ದಾರಿ ಮಾಡಿಕೊಡಬಲ್ಲದು. ಪರಿಣಾಮ ಪ್ರತಿಯೊಂದು ಪ್ರಕರಣಕ್ಕೆ ಅದರದೇ ಆದ ಸಮಯ ನೀಡಲು ಪರ್ಯಾಯ ಮಾರ್ಗವೇ ಇಲ್ಲವಾಗಿದೆ. ಇದೇನಿದ್ದರೂ ಸಾಂಸ್ಥಿಕ ಸುಧಾರಣೆಗಳ ಮೂಲಕವೇ ಬಗೆಹರಿಯಬೇಕು’ ಎಂದರು.

‘ಪ್ರಕರಣಗಳ ಇತ್ಯರ್ಥ ಮತ್ತು ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಸಮನ್ವಯ ಸಾಧಿಸಲು ನ್ಯಾಯಮೂರ್ತಿಗಳು ಅನವರತ ಹೋರಾಡುತ್ತಿದ್ದಾರೆ. ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಹಳೇ ಪ್ರಕರಣಗಳು ಹಿಂದಕ್ಕೆ ಸರಿಯುತ್ತಿವೆ. ಈ ವಿಲೇವಾರಿ ಸಮಸ್ಯೆಯನ್ನು ಹೇಗೆ ತಾನೆ ಪರಿಹರಿಸಲು ಸಾಧ್ಯ? ಕೆಲವು ಪ್ರಕರಣಗಳು ಜಟಿಲವಾಗಿರುತ್ತವೆ. ಯಾವುದಾದರೂ ಒಂದು ಹಳೆಯ ಪ್ರಕರಣವನ್ನು ಇತ್ಯರ್ಥ ಮಾಡೋಣ ಎಂದು ಎತ್ತಿಕೊಂಡರೆ ಅದನ್ನು ವಿಲೇವಾರಿ ಮಾಡುವುದರೊಳಗೆ 10 ಪುಟ್ಟ ಪ್ರಕರಣಗಳನ್ನು ಇತ್ಯರ್ಥಪಡಿಸಬಹುದು. ಇದು ಸುಲಭವಾಗಿ ಬಗೆಹರಿಯುವ ಸಮಸ್ಯೆಯಲ್ಲ’ ಎಂದು ನ್ಯಾ.ಸುನಿಲ್‌ ದತ್‌ ವಿಶ್ಲೇಷಿಸಿದರು.

ವಿಳಂಬಕ್ಕೆ ಸಿಬಿಐ ಕಳವಳ

‘ಹಾಲಿ ಇರುವ ನ್ಯಾಯಮೂರ್ತಿಗಳ ಪಾಲಿಗೆ ಕಾರ್ಯಭಾರದ ಒತ್ತಡ ಇನ್ನಿಲ್ಲದಂತೆ ಹೆಚ್ಚಾಗಿದೆ’ ಎಂದು ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್‌ ಹೇಳಿದರು. ನ್ಯಾಯಪೀಠದ ಅಭಿಪ್ರಾಯಕ್ಕೆ ದನಿಗೂಡಿಸಿದ ಅವರು ‘ಇವತ್ತಿನ ಜನಸಂಖ್ಯೆಗೆ ಹೋಲಿಕೆ ಮಾಡಿದರೆ ನ್ಯಾಯಮೂರ್ತಿಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಇದೆ. 2013ರ ಮೇಲ್ಮನವಿಗಳು ಇನ್ನೂ ಬಾಕಿ ಇವೆ’ ಎಂದರು. ವಿನಯ ಕುಲಕರ್ಣಿ ಪರ ಪದಾಂಕಿತ ಹಿರಿಯ ವಕೀಲ ಸಿ.ವಿ.ನಾಗೇಶ್‌ ಅವರೂ ಸಮಸ್ಯೆಯ ಅಗಾಧತೆಯನ್ನು ಉಲ್ಲೇಖಿಸಿ ನ್ಯಾಯಮೂರ್ತಿಗಳ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.