ADVERTISEMENT

ಎಲ್‌ಐಸಿ ಜತೆ ಒಪ್ಪಂದ ರದ್ದು; ಅಂಚೆ ಇಲಾಖೆಗೆ ಒಲಿದ ‘ಭಾಗ್ಯಲಕ್ಷ್ಮಿ’!

ಸರ್ಕಾರ ತೀರ್ಮಾನ

ಎಸ್.ರವಿಪ್ರಕಾಶ್
Published 14 ಮೇ 2020, 19:30 IST
Last Updated 14 ಮೇ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನೆಚ್ಚಿನ ‘ಭಾಗ್ಯಲಕ್ಷ್ಮಿ’ ಯೋಜನೆಯನ್ನು 2020–21 ನೇ ಸಾಲಿನಿಂದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಬದಲು ಅಂಚೆ ಇಲಾಖೆಯನ್ನೇ ಏಜೆನ್ಸಿಯಾಗಿಸಲುಸರ್ಕಾರ ತೀರ್ಮಾನಿಸಿದೆ.

ಈ ಸಂಬಂಧ ಹಣಕಾಸು ಇಲಾಖೆ ಆದೇಶವೊಂದನ್ನು ಹೊರಡಿಸಿದ್ದು, ಯೋಜನೆಯನ್ನು ಮರು ವಿನ್ಯಾಸಗೊಳಿಸಿ ಜಾರಿಗೆ ತರಲಿದೆ. ಇದರಿಂದ ಫಲಾನುಭವಿಗಳಿಗೆ ಸರ್ಕಾರ ಭರವಸೆ ನೀಡಿದಂತೆ ₹1 ಲಕ್ಷ ಸಿಗಲಿದೆ. ಸರ್ಕಾರಕ್ಕೂ ಹಣ ಉಳಿತಾಯವಾಗುತ್ತದೆ.

ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕ ಕೆ.ಎ.ದಯಾನಂದ ಅವರು ‘ಪ್ರಜಾವಾಣಿ’ ಜತೆಗೆ ಮಾತನಾಡಿ, ಭಾರತೀಯ ಜೀವ ವಿಮಾ ನಿಗಮವು ಈ ಹಿಂದೆ ಒಪ್ಪಂದ ಮಾಡಿಕೊಂಡಂತೆ ಬಾಂಡ್‌ ಮುಚ್ಯುರಿಟಿ ಆದ ಬಳಿಕ ₹1 ಲಕ್ಷ ನೀಡಲು ತಕರಾರು ಮಾಡುತ್ತಲೇ ಇತ್ತು. ಈ ವಿಷಯ ಬಜೆಟ್‌ ತಯಾರಿಕೆ ಸಂದರ್ಭದಲ್ಲಿ ಚರ್ಚೆಗೆ ಬಂದಿತ್ತು. ಬಡ್ಡಿ ದರ ಕಡಿಮೆ ಇರುವುದರಿಂದ ಕಡಿಮೆ ಬೀಳುವ ಮೊತ್ತವನ್ನು ಸರ್ಕಾರವೇ ಭರಿಸಿಕೊಡಬೇಕು ಎಂದು ಒತ್ತಾಯಿಸಿತ್ತು ಎಂದು ಹೇಳಿದರು.

ADVERTISEMENT

ಆ ಕಾರಣಕ್ಕೆ ಭಾಗ್ಯಲಕ್ಷ್ಮಿ ಯೋಜನೆಯನ್ನು ಸುಕನ್ಯ ಸಂವೃದ್ಧಿಗೆ ವರ್ಗಾಯಿಸಲಿದ್ದೇವೆ. ಜೀವ ವಿಮಾ ನಿಗಮದ ಬೇಡಿಕೆ ಈಡೇರಿಸಲು ಹೊರಟರೆ ರಾಜ್ಯ ಸರ್ಕಾರ ₹2,000 ಕೋಟಿ ಗೂ ಹೆಚ್ಚು ಹಣ ತುಂಬಿ ಕೊಡಬೇಕಾಗುತ್ತದೆ. ಆದ್ದರಿಂದ ಯೋಜನೆಯನ್ನು ಅಂಚೆ ಇಲಾಖೆಗೆ ವರ್ಗಾಯಿಸಲು ತೀರ್ಮಾನಿಸಲಾಯಿತು. ಅಂಚೆ ಇಲಾಖೆಗೆ ನೀಡುವುದೆಂದರೆ ಏಜೆನ್ಸಿ ಬದಲಾವಣೆ ಮಾಡಿದಂತೆ. ಫಲಾನುಭವಿಗಳಿಗೆ ₹1 ಲಕ್ಷ ಸಿಗುತ್ತದೆ ಎಂದು ದಯಾನಂದ ತಿಳಿಸಿದರು.

ಮಾತೃಶ್ರೀ ಸ್ಥಗಿತ:ಕೇಂದ್ರ ಪುರಸ್ಕೃತ ಯೋಜನೆಯಾದ ಮಾತೃ ವಂದನಾ ಯೋಜನೆಯಡಿ ಗರ್ಭಿಣಿ, ಬಾಣಂತಿಯರಿಗೆ ₹5,000 ಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ 60:40 ರ ಅನುಪಾತದಲ್ಲಿ ನೀಡಲಾಗುತ್ತಿದೆ. ಇದರ ಜತೆಗೆ ಪೂರಕ ಪೌಷ್ಟಿಕ ಆಹಾರ ನೀಡುವ ಮಾತೃಪೂರ್ಣ ಯೋಜನೆಯೂ ಜಾರಿಯಲ್ಲಿರುವುದರಿಂದ 2020–21 ನೇ ಸಾಲಿನಿಂದ ಮಾತೃಶ್ರೀ ಯೋಜನೆಯನ್ನು ನಿಲ್ಲಿಸಲು ಸರ್ಕಾರ ತೀಮಾರ್ನಿಸಿದೆ.

ಅಲ್ಲದೆ, ಕೇಂದ್ರ ಪುರಸ್ಕೃತ ಯೋಜನೆಯಡಿ ಒನ್‌ ಸ್ಟಾಪ್‌ ಕೇಂದ್ರಗಳನ್ನು ಸ್ಥಾಪಿಸಿರುವುದರಿಂದ ‘ಸಾಂತ್ವನ’ ಯೋಜನೆಯನ್ನು ನಿಲ್ಲಿಸಲು ನಿರ್ಧರಿಸಲಾಗಿದೆ. ವಿಶೇಷ ಬೆಂಬಲ ಯೋಜನೆಯಡಿ ಎಚ್‌ಐವಿ ಪಾಸಿಟಿವ್‌ ಇರುವ ಮಕ್ಕಳಿಗೆ ನೆರವು ನೀಡುವ ಯೋಜನೆ ಅಡಿ, ಅನುದಾನವನ್ನು ನಗದು ರೂಪದಲ್ಲಿ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲು ತೀರ್ಮಾನಿಸಲಾಗಿದೆ.

* ಬಜೆಟ್‌ ಭಾಷಣದಲ್ಲಿ ಘೋಷಿಸಿರುವಂತೆ ನಗರ ಪ್ರದೇಶಗಳಲ್ಲಿ 450 ಅಂಗನವಾಡಿ ಕೇಂದ್ರಗಳಿಗೆ ಕಟ್ಟಡದ ಬಾಡಿಗೆ ಮತ್ತು ಆಡಳಿತಾತ್ಮಕ ವೆಚ್ಚ ಭರಿಸಲು ಸರ್ಕಾರದಿಂದ ಅನುದಾನ

* ಈ ಅಂಗನವಾಡಿಗಳಿಗೆ ಅಗತ್ಯವಿರುವ ಸಿಬ್ಬಂದಿಯನ್ನು ಇಲಾಖೆಯಲ್ಲಿ ಈಗ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯಿಂದಲೇ ಮರು ವಿನ್ಯಾಸದ ಮೂಲಕ ನಿಯೋಜಿಸಲಾಗುವುದು. ಪೂರಕ ಪೌಷ್ಟಿಕ ಆಹಾರವನ್ನು ಇಲಾಖೆಗೆ ಒದಗಿಸಿರುವ ಅನುದಾನದಿಂದಲೇ ಭರಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.