ADVERTISEMENT

ಗ್ರಾಪಂ ಚುನಾವಣೆ ಮುಂದೂಡಿರುವುದು ಪ್ರಜಾಪ್ರಭುತ್ವ ವಿರೋಧಿ ನಿರ್ಧಾರ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 28 ಮೇ 2020, 16:12 IST
Last Updated 28 ಮೇ 2020, 16:12 IST
   

ಬೆಂಗಳೂರು: ಕೋವಿಡ್‌–19 ಸೋಂಕು ಭೀತಿಯಿಂದಾಗಿ ಗ್ರಾಮ ಪಂಚಾಯಿತಿ ಚುನಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡಿರುವುದಾಗಿ ರಾಜ್ಯ ಚುನಾವಣಾ ಆಯೋಗವು ಪ್ರಕಟಿಸಿದೆ. ಆದರೆ, ಈ ನಿರ್ಧಾರದ ವಿರುದ್ಧ ಅಸಮಾಧಾನ ಹೊರಹಾಕಿರುವ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಇದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಟೀಕಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರು, ಚುನಾವಣಾ ಆಯೋಗವು ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂದು ಕುಟುಕಿದ್ದಾರೆ. ಮಾತ್ರವಲ್ಲದೆ, ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ.

‘ಗ್ರಾಮ ಪಂಚಾಯತ್‌ಗಳ ಚುನಾವಣೆಯನ್ನು ರಾಜ್ಯ ಚುನಾವಣಾ ಆಯೋಗ‌ ಮುಂದೂಡಿರುವುದು ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993ಕ್ಕೆ ಬಗೆದ ಅಪಚಾರ. ಈ ಪ್ರಜಾಪ್ರಭುತ್ವ ವಿರೋಧಿ ನಿರ್ಧಾರವನ್ನು ಕಾಂಗ್ರೆಸ್‌ ನ್ಯಾಯಾಲಯದಲ್ಲಿ‌ ಪ್ರಶ್ನಿಸಲಿದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಮಂದುವರಿದು, ‘ಗ್ರಾಮ ಪಂಚಾಯತ್‌ಗಳ ಚುನಾವಣೆಯನ್ನು ಮುಂದೂಡುವ ಮೂಲಕ ರಾಜ್ಯ ಚುನಾವಣಾ ಆಯೋಗ ಆಡಾಳಿತಾರೂಢ ಬಿಜೆಪಿ ಹಾಕಿದ ತಾಳಕ್ಕೆ ತಕ್ಕ ಹಾಗೆ ಕುಣಿದಿದೆ. ಇದೊಂದು ಕೆಟ್ಟ ಸಂಪ್ರದಾಯ’ ಎಂದು ಬರೆದು, #SavePanchayatRaj ಎಂದು ಆಗ್ರಹಿಸಿದ್ದಾರೆ.

’ರಾಜ್ಯ ಸರ್ಕಾರದ ದುರಾಡಳಿತದಿಂದ ಜನ ಬೇಸತ್ತು ಹೋಗಿದ್ದಾರೆ. ಚುನಾವಣೆ ಎದುರಿಸಲಾಗದ ಪುಕ್ಕಲು ಸರ್ಕಾರ ನಾಮ ನಿರ್ದೇಶನದ ಸದಸ್ಯರ ಮೂಲಕ ಅಡ್ಡಮಾರ್ಗದಲ್ಲಿ ಗ್ರಾಮ ಪಂಚಾಯತ್ ಮೇಲೆ ಸ್ವಾಮ್ಯ ಸ್ಥಾಪಿಸಲು ಹೊರಟಿರುವುದು ನಾಚಿಕೆಗೇಡಿನ ನಡವಳಿಕೆ’ ಎಂದು ಟೀಕಿಸಿದ್ದಾರೆ.

‘ಚುನಾವಣೆ ಮುಂದೂಡಿಕೆ ನಮಗೆ ಅನಿರೀಕ್ಷಿತವೇನಲ್ಲ. ಇಂತಹದ್ದೊಂದು ಅನುಮಾನದಿಂದಲೇ ನಾವು ಚುನಾವಣಾ ಆಯುಕ್ತರನ್ನು ಭೇಟಿಯಾಗಿ ಮನವಿ ಮಾಡಿದ್ದೆವು. ನಮ್ಮ ಅನುಮಾನ‌ ಈಗ ನಿಜವಾಗಿದೆ. ಇದರ ವಿರುದ್ಧ ಗ್ರಾಮ ಪಂಚಾಯತ್ ಮಟ್ಟದಲ್ಲಿಯೇ ಕಾಂಗ್ರೆಸ್‌ ಪ್ರತಿಭಟನೆ ನಡೆಸಲಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕರ್ನಾಟಕ ಪಂಚಾಯತ್ ಕಾಯ್ದೆಯ ಸೆಕ್ಷನ್ 8ರ ಪ್ರಕಾರ ಗ್ರಾಮ ಪಂಚಾಯತ್‌ಗಳಿಗೆ ಚುನಾವಣೆ ನಡೆಸದೆ ಆಡಳಿತ ಸಮಿತಿ ರಚಿಸುವಂತಿಲ್ಲ. ಈ ಅಕ್ರಮವನ್ನು ನ್ಯಾಯಾಲಯದ ಗಮನಕ್ಕೆ ತರುತ್ತೇವೆ. ಅಲ್ಲಿ ನ್ಯಾಯ ಸಿಗುವ ಸಂಪೂರ್ಣ ಭರವಸೆ ನಮಗಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೋವಿಡ್‌–19 ಸೋಂಕಿನಿಂದಾಗಿ ಸದ್ಯನಿರ್ಮಾಣವಾಗಿರುವ ಸಂಕಷ್ಟದ ಸನ್ನಿವೇಶವನ್ನು ಚುನಾವಣಾ ಆಯೋಗ, ‘ಅಸಾಧಾರಣ ಪರಿಸ್ಥಿತಿ’ ಎಂದು ಪರಿಗಣಿಸಿದೆ. ಹೀಗಾಗಿ,6,025 ಗ್ರಾಮ ಪಂಚಾಯಿತಿಗಳ ಚುನಾವಣೆಯನ್ನು ತಾತ್ಕಾಲಿಕವಾಗಿಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.