ADVERTISEMENT

‘ಪ್ರಜಾವಾಣಿ–ವೀರಲೋಕ’ ಕಾವ್ಯ ಸಂಕ್ರಾಂತಿ: ಸುಧಾ ಅಡುಕಳಗೆ ಪ್ರಶಸ್ತಿ

ಕವಿತೆ ಆಗ ಹಾಡುತ್ತಿತ್ತು, ಈಗ ಮಾತನಾಡುತ್ತಿದೆ: ಕಂಬಾರ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2023, 16:21 IST
Last Updated 18 ಮಾರ್ಚ್ 2023, 16:21 IST
‘ಕಾವ್ಯ ಸಂಕ್ರಾಂತಿ ಸ್ಪರ್ಧೆ–2023’ ಬಹುಮಾನ ವಿತರಣೆ ಸಮಾರಂಭದಲ್ಲಿ (ಕುಳಿತವರು) ವೀರಕಪುತ್ರ ಶ್ರೀನಿವಾಸ, ಯೋಗರಾಜ್ ಭಟ್, ಚಂದ್ರಶೇಖರ ಕಂಬಾರ, ಎಚ್.ಎಸ್. ವೆಂಕಟೇಶಮೂರ್ತಿ, ಸವಿತಾ ನಾಗಭೂಷಣ ಹಾಗೂ ಜ.ನಾ. ತೇಜಶ್ರೀ, (ನಿಂತವರು ಎಡದಿಂದ) ಶಾಂತಕುಮಾರಿ, ಸಂಧ್ಯಾ ಹೆಗಡೆ, ಸುಧಾ ಅಡುಕಳ, ದೀಪಾ ಹಿರೇಗುತ್ತಿ, ರಂಜನಿ ಕೀರ್ತಿ ಹಾಗೂ ಫಾಲ್ಗುಣ ಗೌಡ ಇದ್ದಾರೆ. –ಪ್ರಜಾವಾಣಿ ಚಿತ್ರ
‘ಕಾವ್ಯ ಸಂಕ್ರಾಂತಿ ಸ್ಪರ್ಧೆ–2023’ ಬಹುಮಾನ ವಿತರಣೆ ಸಮಾರಂಭದಲ್ಲಿ (ಕುಳಿತವರು) ವೀರಕಪುತ್ರ ಶ್ರೀನಿವಾಸ, ಯೋಗರಾಜ್ ಭಟ್, ಚಂದ್ರಶೇಖರ ಕಂಬಾರ, ಎಚ್.ಎಸ್. ವೆಂಕಟೇಶಮೂರ್ತಿ, ಸವಿತಾ ನಾಗಭೂಷಣ ಹಾಗೂ ಜ.ನಾ. ತೇಜಶ್ರೀ, (ನಿಂತವರು ಎಡದಿಂದ) ಶಾಂತಕುಮಾರಿ, ಸಂಧ್ಯಾ ಹೆಗಡೆ, ಸುಧಾ ಅಡುಕಳ, ದೀಪಾ ಹಿರೇಗುತ್ತಿ, ರಂಜನಿ ಕೀರ್ತಿ ಹಾಗೂ ಫಾಲ್ಗುಣ ಗೌಡ ಇದ್ದಾರೆ. –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪ್ರಜಾವಾಣಿ’ಯು 75ನೇ ವರ್ಷದ ಸಂಭ್ರಮದ ಪ್ರಯುಕ್ತ ‘ವೀರಲೋಕ’ ಪ್ರಕಾಶನದ ಸಹಯೋಗದಲ್ಲಿ ಆಯೋಜಿಸಿದ್ದ ‘ಕಾವ್ಯ ಸಂಕ್ರಾಂತಿ 2023’ ಸ್ಪರ್ಧೆಯಲ್ಲಿ ಉಡುಪಿಯ ಸುಧಾ ಅಡುಕಳ ಅವರ ‘ಹಕ್ಕಿ ಮತ್ತು ಹುಡುಗಿ’ ಕವಿತೆ ಪ್ರಥಮ ಸ್ಥಾನ ಪಡೆದುಕೊಂಡಿತು.

ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಬೆಸ್ಕಾಂ ಸಹಯೋಗದಲ್ಲಿ ನಗರದಲ್ಲಿ ಶನಿವಾರ ನಡೆದ ಬಹುಮಾನ ವಿತರಣೆ ಸಮಾರಂಭದಲ್ಲಿ ವಿಜೇತರ ಹೆಸರನ್ನು ಕವಿ ಎಚ್.ಎಸ್. ವೆಂಕಟೇಶಮೂರ್ತಿ ಘೋಷಿಸಿದರು. ಪ್ರಥಮ ಬಹುಮಾನವು ₹ 50 ಸಾವಿರ ನಗದು ಒಳಗೊಂಡಿದೆ.

ಅಂಕೋಲದ ಫಾಲ್ಗುಣ ಗೌಡ ಅಚವೆ ಅವರ ‘ದಣಪೆ’, ಬೆಂಗಳೂರಿನ ಸಂಧ್ಯಾ ಹೆಗಡೆ ಅವರ ‘ರಂಗಸ್ಥಳ’, ಶಾಂತಾಕುಮಾರಿ ಅವರ ‘ಬಾರು ಡಾನ್ಸರು’, ರಂಜನಿ ಕೀರ್ತಿ ಅವರ ‘ತಥಾಸ್ತು’ ಮತ್ತು ಚಿಕ್ಕಮಗಳೂರಿನ ದೀಪಾ ಹಿರೇಗುತ್ತಿ ಅವರ ‘ಆಕ್ರಮಣ’ ಕವನ ತೀರ್ಪುಗಾರರ ಮೆಚ್ಚುಗೆ ಪಡೆದಿದ್ದು, ಪ್ರಥಮ ಬಹುಮಾನಕ್ಕೆ ಪೈಪೋಟಿ ನಡೆಸಿದ್ದವು. ಮೆಚ್ಚುಗೆ ಪಡೆದ ಐದೂ ಕವಿತೆಗಳಿಗೆ ತಲಾ ₹ 5 ಸಾವಿರ ಬಹುಮಾನ ನೀಡಲಾಯಿತು. ‘ಕಾವ್ಯ ಸಂಕ್ರಾಂತಿ 2023’ ಸ್ಪರ್ಧೆಗೆ 1,500ಕ್ಕೂ ಅಧಿಕ ಕವನಗಳು ಬಂದಿದ್ದವು.

ADVERTISEMENT

ಬಹುಮಾನ ವಿತರಿಸಿ ಮಾತನಾಡಿದ ಸಾಹಿತಿ ಚಂದ್ರಶೇಖರ ಕಂಬಾರ, ‘ಕವಿತೆ ಮೊದಲು ಹಾಡುತ್ತಿತ್ತು. ಈಗ ಮಾತನಾಡಲು ಶುರು ಮಾಡಿದೆ. ಕಾವ್ಯ ಮಾತನಾಡಲು ಪ್ರಾರಂಭಿಸಿದರೆ ಮಾತಿಗೂ ಕಾವ್ಯಕ್ಕೂ ವ್ಯತ್ಯಾಸ ಇರುವುದಿಲ್ಲ. ಕಾವ್ಯ ಎಂದೂ ಮಲಗಬಾರದು, ಸದಾ ಎಚ್ಚರದಿಂದ ಇರಬೇಕು. ಕವಿತೆಗೆ ಛಂದಸ್ಸು ಅಗತ್ಯ. ಆದ್ದರಿಂದಲೇ ನಮ್ಮ ಹಿರಿಯರು ಛಂದಸ್ಸನ್ನೇ ಕಾವ್ಯ ಎಂದರು. ಛಂದಸ್ಸು ಇಲ್ಲದ ಕವಿತೆ ಗಂಭೀರತೆ ಕಳೆದುಕೊಳ್ಳುತ್ತದೆ’ ಎಂದು ತಿಳಿಸಿದರು.

ಲಯಗಾರಿಕೆ ಕಳೆದುಕೊಳ್ಳುತ್ತಿದೆ: ಸ್ಪರ್ಧೆಯ ತೀರ್ಪುಗಾರರೂ ಆಗಿದ್ದ ಎಚ್‌.ಎಸ್. ವೆಂಕಟೇಶಮೂರ್ತಿ, ‘ಸ್ಪರ್ಧೆಗೆ ಬಂದಿದ್ದ ಕವಿತೆಗಳಲ್ಲಿ ಆಯ್ದ 50 ಕವಿತೆಗಳು ನಮ್ಮ ಮುಂದೆ ಇದ್ದವು. ಪ್ರತಿ ಕವಿತೆಯೂ ಓದಿದಾಗ ವಿಶೇಷ ಅನಿಸಿತು. ಅಂತಿಮವಾಗಿ ಆರು ಕವಿತೆಗಳನ್ನು ಆಯ್ಕೆ ಮಾಡಲಾಯಿತು. ಯಾವುದೇ ಕವಿಯನ್ನು ತೂಕ ಮಾಡಲು ಸಾಧ್ಯವಿಲ್ಲ. ಇವತ್ತು ಕವಿತೆ ಹೆಚ್ಚು ಸೂಕ್ಷ್ಮ ಆಗುತ್ತಿದ್ದು, ಲಯಗಾರಿಕೆಯನ್ನು ಕಳೆದುಕೊಳ್ಳುತ್ತಿದೆ. ಓದುವ ಕವಿತೆಗಿಂತ ಓದಿಸಿಕೊಳ್ಳುವ ಕವಿತೆ ಬರುತ್ತಿದೆ’ ಎಂದು ಹೇಳಿದರು.

ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್‌, ‘ಕವಿತ್ವ ಯಾರಲ್ಲಿ ಯಾವ ರೀತಿ ಹುಟ್ಟುತ್ತದೆ ಹೇಳಲು ಬರುವುದಿಲ್ಲ. ಕವಿತೆಗಳನ್ನು ಕೇಳುಗರಿಗೆ ತಟ್ಟುವ ರೀತಿಯಲ್ಲಿ ಓದಬೇಕು. ಎಲ್ಲರನ್ನೂ ಮುಟ್ಟುವ ರೀತಿ ರಚಿಸಬೇಕು. ಮಾಹಿತಿಯ ಕ್ರಾಂತಿಯಲ್ಲಿ ಎಲ್ಲವೂ ಟೈಪಿಂಗ್‌ನಲ್ಲಿಯೇ ಮುಗಿಯುತ್ತಿದೆ. ಎದುರಿಗೆ ಸಿಕ್ಕಾಗ ಮಾತು ಇಲ್ಲವಾಗುತ್ತಿದೆ’ ಎಂದರು.

ಇದಕ್ಕೂ ಮೊದಲು ಕವಿಗೋಷ್ಠಿ ನಡೆಯಿತು. ಸತ್ಯಮಂಗಲ ಮಹಾದೇವ, ವಸುಂಧರಾ ಕದಲೂರು, ಬೇಲೂರು ರಘುನಂದನ್, ಬಿ.ಆರ್. ಶೃತಿ, ಚೀಮನಹಳ್ಳಿ ರಮೇಶಬಾಬು, ಮಂಜುಳಾ ಹುಲಿಕುಂಟೆ, ಸೂರ್ಯಕೀರ್ತಿ, ಚಾಂದ್ ಪಾಷಾ ಹಾಗೂ ಬಹುಮಾನ ವಿಜೇತರು ಕವಿತೆ ವಾಚಿಸಿದರು.

ಸ್ಪರ್ಧೆಯ ತೀರ್ಪುಗಾರರಾಗಿದ್ದ ಸವಿತಾ ನಾಗಭೂಷಣ, ವೀರಲೋಕ ಪ್ರಕಾಶನದ ವೀರಕಪುತ್ರ ಶ್ರೀನಿವಾಸ ಇದ್ದರು.

‘ ಸೂಕ್ಷ್ಮ ಇಕ್ಕಟ್ಟು, ಬಿಕ್ಕಟ್ಟು’

‘ಮಾತು ಮನಸ್ಸಾಕ್ಷಿಯಿಂದ ಬರದೆ ಇದ್ದಾಗ ರಾಜಾರೋಷವಾಗಿ ‘ಏನಮ್ಮ ಹಣೆಗಿಟ್ಟಿಲ್ಲ, ಗಂಡ ಇಲ್ಲವಾ?’ ಎಂದು ಕೇಳುವ, ತುಂಬಿದ ಕಲಾಪದಲ್ಲಿ ರಾಜಕಾರಣಿಯೊಬ್ಬರು ‘ಅತ್ಯಾಚಾರಕ್ಕೆ ಒಳಗಾದಾಗ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೆ ಅದನ್ನು ಅನುಭವಿಸು’ ಎಂದು ಹೇಳುವ ನೀಚತನಕ್ಕೆ ಇಳಿಯುತ್ತಾರೆ. ‘ಸಾಹಿತ್ಯ ಸಮ್ಮೇಳನದ ವ್ಯವಸ್ಥೆ ಸರಿಯಿಲ್ಲ’ ಎಂದಾಗ ಸದಸ್ಯತ್ವದಿಂದಲೇ ಕಿತ್ತುಹಾಕುವ ಅಸಹ್ಯಕರ ಕೆಲಸಕ್ಕೆ ಇಳಿಯುತ್ತಾರೆ’ ಎಂದು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಜ.ನಾ. ತೇಜಶ್ರೀ ಆಕ್ರೋಶ ವ್ಯಕ್ತಪಡಿಸಿದರು.

‘ಸ್ಪರ್ಧೆಯು ನಿಜವಾದ ಸೃಜನಶೀಲತೆಗೆ ಅಡ್ಡಿ ಪಡಿಸುತ್ತದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಸ್ಪರ್ಧೆ ಎನ್ನುವುದು ಲಾಭ, ಗೆಲುವು, ಸೋಲಿಗೆ ಸಂಬಂಧಿಸಿದ್ದು. ಆಕರ್ಷಕ ಮೊತ್ತದ ಬಹುಮಾನವನ್ನು ಪಡೆದವರು ಗೆದ್ದರು, ಅದನ್ನು ಪಡೆಯದವರು ಸೋತರು ಎಂದು ಹೇಳಲಾಗದ ಸೂಕ್ಷ್ಮ ಇಕ್ಕಟ್ಟು, ಬಿಕ್ಕಟ್ಟಿನಲ್ಲಿ ಇದ್ದೇವೆ. ಇವತ್ತು ಸ್ಪರ್ಧೆಗಳನ್ನು ನಡೆಸುವವರ ನಡುವೆಯೇ ಸ್ಪರ್ಧೆ ನಡೆಯುತ್ತಿದೆಯೇ ಎನ್ನುವಂತಾಗಿದೆ. ಸ್ಪರ್ಧೆಯಲ್ಲಿ ನಿಗದಿ ಮಾಡುವ ಹಣದಲ್ಲಿಯೂ ಸ್ಪರ್ಧೆ ನಡೆಯುತ್ತಿರುವುದು ದುರಂತ. ಈ ಬಿಕ್ಕಟ್ಟನ್ನು ಎದುರಿಸಲೇಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.