ADVERTISEMENT

ಪ್ರಜಾವಾಣಿ, ಡೆಕ್ಕನ್‌ಹೆರಾಲ್ಡ್‌ ಬಳಗದ ಶೈಕ್ಷಣಿಕ ಮೇಳ ಎಡ್ಯುವರ್ಸ್‌ ಇಂದು, ನಾಳೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2024, 19:40 IST
Last Updated 5 ಏಪ್ರಿಲ್ 2024, 19:40 IST
   

ಬೆಂಗಳೂರು: ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ವತಿಯಿಂದ ಆಯೋಜಿಸಿರುವ ಕರ್ನಾಟಕದ ಅತಿ ದೊಡ್ಡ ಶೈಕ್ಷಣಿಕ ಮೇಳ ‘ಎಡ್ಯುವರ್ಸ್‌’ ಇದೇ 6 ಮತ್ತು 7 ರಂದು ನಡೆಯಲಿದೆ.

ನಗರದ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ (ಗೇಟ್‌ 2/3) ಎರಡೂ ದಿನ ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ಮೇಳ ನಡೆಯಲಿದ್ದು, ಎಲ್ಲರಿಗೂ ಮುಕ್ತ ಆಹ್ವಾನವಿದೆ.

ಹದಿಮೂರು ವರ್ಷಗಳಿಂದ ಈ ಶೈಕ್ಷಣಿಕ ಮೇಳವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಮೇಳದಲ್ಲಿ ಶಿಕ್ಷಣ ಕ್ಷೇತ್ರದ ಹಲವು ಪರಿಣತರು, ತಜ್ಞರು ಪಾಲ್ಗೊಳ್ಳುತ್ತಿದ್ದಾರೆ. ಪರಿಣತರೊಂದಿಗೆ ಸಂವಾದ, ಉಪನ್ಯಾಸ ಮತ್ತು ಚರ್ಚೆ ಗಳನ್ನು ಆಯೋಜಿಸ ಲಾಗುತ್ತದೆ. ಎರಡೂ ದಿನ ಸಿಇಟಿ ಹಾಗೂ ಕಾಮೆಡ್‌–ಕೆ ಕುರಿತು ವಿಶೇಷ ಗೋಷ್ಠಿಗಳು ನಡೆಯಲಿವೆ.

ADVERTISEMENT

50ಕ್ಕೂ ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಈ ಮೇಳದಲ್ಲಿ ಪಾಲ್ಗೊಳ್ಳಲಿವೆ. ‌ಪಿಯುಸಿ ನಂತರ ಮುಂದೇನು ಎಂಬ ಪ್ರಶ್ನೆಗೆ ಮೇಳದಲ್ಲಿ ಪರಿಹಾರ ಪಡೆಯಬಹುದಾಗಿದೆ. ಜೊತೆಗೆ, ಪಿಯುಸಿ ಅಥವಾ ತತ್ಸಮಾನ ವಿದ್ಯಾಭ್ಯಾಸ ಮುಗಿಸಿದ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ವಿವರವಾದ ಮಾಹಿತಿ ದೊರೆಯಲಿದೆ.

ಸಿಇಟಿ ಮತ್ತು ಕಾಮೆಡ್‌–ಕೆ ಪರೀಕ್ಷಾರ್ಥಿಗಳಿಗೆ ಎರಡೂ ದಿನ ಅಣಕು ಪರೀಕ್ಷೆ ಹಮ್ಮಿಕೊಳ್ಳಲಾಗುವುದು. ಈ ಅಣಕು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಒಂದು ಲಕ್ಷ ಮೌಲ್ಯದ ಬಹುಮಾನಗಳನ್ನು ಗೆಲ್ಲುವ ಅವಕಾಶಗಳಿವೆ.

ವಿಶೇಷ ಉಪನ್ಯಾಸಗಳು: 

ಎರಡು ದಿನಗಳ ಮೇಳದಲ್ಲಿ ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. 6ರಂದು ಬೆಳಿಗ್ಗೆ 10ಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿವೃತ್ತ ಪಿಆರ್‌ಒ ಎ.ಎಸ್‌.ರವಿ ಅವರಿಂದ ಸಿಇಟಿ ಕುರಿತ ವಿಶೇಷ ಉಪನ್ಯಾಸವಿದೆ. ಸಿ.ಇ.ಟಿ ಕೌನ್ಸೆಲಿಂಗ್‌ಗೆ ಸಿದ್ಧತೆ ಹೇಗೆ? ಬೇಕಾಗುವ ದಾಖಲೆಗಳು ಯಾವುವು? ಎಂಜಿನಿಯರಿಂಗ್‌ ಕಾಲೇಜು ಆಯ್ಕೆ ಹೇಗೆ? ಎಂಬ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಈ ಗೋಷ್ಠಿಯಲ್ಲಿ ಉತ್ತರ ಸಿಗಲಿದೆ.

7ರಂದು ಕಾಮೆಡ್‌–ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಎಸ್‌.ಕುಮಾರ್ ಅವರು ಕಾಮೆಡ್‌ –ಕೆ ಕುರಿತು ಮಾಹಿತಿ ನೀಡಲಿದ್ದಾರೆ. ಈ ಗೋಷ್ಠಿಯಲ್ಲಿ ಕೋರ್ಸ್‌ಗಳ ಆಯ್ಕೆ, ಉದ್ಯೋಗಾವಕಾಶ, ಕಾಲೇಜಿನಲ್ಲಿರುವ ಶೈಕ್ಷಣಿಕ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ಇದರೊಂದಿಗೆ ‘ರೇಡಿಯೊ ಸಿಟಿ’ ಎಫ್‌ಎಂನ ಆರ್‌ಜೆ ರಜಸ್‌ ಅವರು ರೇಡಿಯೊ ಹಾಗೂ ವಾಯ್ಸ್‌ ಇಂಡಸ್ಟ್ರಿಯಲ್ಲಿರುವ ಅವಕಾಶಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಅಪೊಲೊ ನ್ಯಾಷನಲ್‌ ಸ್ಕೂಲ್‌ನ ಉಪಾಧ್ಯಕ್ಷೆ ಐಶ್ವರ್ಯಾ ಡಿ.ಕೆ.ಎಸ್ ಹೆಗ್ಡೆ ಅವರು ‘ಕಲಿಕೆ ಹಾಗೂ ಬೆಳವಣಿಗೆ’ ಕುರಿತು ಉಪನ್ಯಾಸ ನೀಡಲಿದ್ದಾರೆ.

ಆಸಕ್ತ ವಿದ್ಯಾರ್ಥಿಗಳು www.deccanherald.com/eduverse ಜಾಲತಾಣಕ್ಕೆ ಲಾಗಿನ್‌ ಆಗಿ ಕ್ಯುಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ನಿಮ್ಮ ಸ್ಥಳವನ್ನು ಕಾಯ್ದಿರಿಸಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.