ಬೆಂಗಳೂರಿನ ಆರ್ಮಿ ಪಬ್ಲಿಕ್ ಸ್ಕೂಲ್‌ನ ನಿಯತಿ ಜೊಇಸ್, ರಿದಂ ಶ್ರೀವಾಸ್ತವ್ ಅವರು (ಮಧ್ಯೆ) ಪ್ರಥಮ ಸ್ಥಾನ, ದಾವಣಗೆರೆಯ ಶ್ರೀ ತರಳಬಾಳು ಜಗದ್ಗುರು ಪ್ರೌಢ ಶಾಲೆಯ ಮಾನಸಿ ಷಾ, ಬೃಂದಾ ಸತ್ಯಪ್ರಿಯ (ಎಡದಿಂದ ಮೊದಲ ಜೋಡಿ) ದ್ವೀತಿಯ ಹಾಗೂ ತೃತೀಯ ಸ್ಥಾನ ಪಡೆದ ಮೈಸೂರಿನ ಎಕ್ಸೆಲ್ ಪಬ್ಲಿಕ್ ಸ್ಕೂಲ್‌ನ ಜೆ. ಚಿನ್ಮಯ್, ಎಸ್. ಚಿರಾಗ್
ಪ್ರಜಾವಾಣಿ ಚಿತ್ರ :ರಂಜು ಪಿ
ಬೆಂಗಳೂರು: ‘ಪ್ರಜಾವಾಣಿ’ ರಾಜ್ಯ ಮಟ್ಟದ ರಸಪ್ರಶ್ನೆ ಫೈನಲ್‌ನಲ್ಲಿ ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡಿದ್ದ ಬೆಂಗಳೂರಿನ ಆರ್ಮಿ ಪಬ್ಲಿಕ್ ಸ್ಕೂಲ್ ತಂಡ ಅಂತಿಮ ಹಂತದಲ್ಲಿ ಸತತ ಎರಡು ಪ್ರಶ್ನೆಗಳಿಗೆ ‘ಸ್ಟೆಪ್‌ಅಪ್’ ತೆಗೆದುಕೊಂಡು 30 ಅಂಕಗಳನ್ನು ಬಾಚುವ ಮೂಲಕ ಉಳಿದ ತಂಡಗಳನ್ನು ಭಾರಿ ಅಂಕಗಳ ಅಂತರದಿಂದ ಹಿಂದಿಕ್ಕಿ ಚಾಂಪಿಯನ್ ಆಗಿ ಹೊರ ಹೊಮ್ಮಿತು.
ಜಯನಗರದ ವಿವೇಕ ಸಭಾಂಗಣದಲ್ಲಿ ಸೋಮವಾರ ‘ಪೈಲಟ್ ಪೆನ್‘ ಸಹಯೋಗದಲ್ಲಿ ನಡೆದ ಫೈನಲ್ಸ್‌ನಲ್ಲಿ ದಾವಣಗೆರೆಯ ಶ್ರೀ ತರಳಬಾಳು ಜಗದ್ಗುರು ಪ್ರೌಢಶಾಲಾ ತಂಡವು ದ್ವಿತೀಯ ಹಾಗೂ ಮೈಸೂರಿನ ಎಕ್ಸೆಲ್ ಪಬ್ಲಿಕ್ ಸ್ಕೂಲ್ ತಂಡವು ತೃತೀಯ ಸ್ಥಾನ ಪಡೆದವು.
ವಂಡರ್ ಲಾ, ಪೂರ್ವಿಕಾ ಮೊಬೈಲ್ಸ್, ವಿಬ್‌ಗಯಾರ್, ಸರ್.ಎಂ.ವಿಶ್ವೇಶ್ವರಯ್ಯ ಗ್ರೂಪ್–ದಾವಣಗೆರೆ, ಮಾರ್ಗದರ್ಶಿ ಚಿಟ್ ಫಂಡ್, ಎಚ್‌ಎಎಲ್, ಭೀಮಾ ಜ್ಯೂವೆಲರ್ಸ್ ಕಾರ್ಯಕ್ರಮಕ್ಕೆ ಸಹಕಾರ ನೀಡಿದವು. ಟಿವಿ ಸಹಯೋಗವನ್ನು ಏಷ್ಯಾನೆಟ್ ಸುವರ್ಣ ನ್ಯೂಸ್, ಜ್ಞಾನ ಸಹಯೋಗವನ್ನು ಕ್ಯೂರಿಯೊಸಿಟಿ ಸಲ್ಯೂಷನ್ಸ್ ಸಂಸ್ಥೆಗಳು ನೀಡಿದವು.
ಮೈಸೂರು, ಕಲಬುರ್ಗಿ, ಹುಬ್ಬಳ್ಳಿ, ಬಾಗಲಕೋಟೆ ಹಾಗೂ ಬೆಂಗಳೂರು ವಲಯಗಳಲ್ಲಿ ಗೆಲುವು ಸಾಧಿಸಿ, ಫೈನಲ್‌ಗೆ ಆಯ್ಕೆಯಾಗಿದ್ದ ಆರು ತಂಡಗಳು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.
7ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ನಡೆದ ವಲಯವಾರು ಸ್ಪರ್ಧೆಯಲ್ಲಿ ನೂರಾರು ತಂಡಗಳು ಪಾಲ್ಗೊಂಡಿದ್ದವು. ಅದರಲ್ಲಿ ವಿಜೇತ ತಂಡಗಳು ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಪಾಲ್ಗೊಂಡವು. ಫೈನಲ್‌ನಲ್ಲಿ ಸರಿಯಾದ ಉತ್ತರ ನೀಡಿದವರು ಆಕರ್ಷಕ ಟ್ರೋಫಿ, ಗಿಫ್ಟ್ ವೋಚರ್, ಪ್ರಶಸ್ತಿ ಪತ್ರವನ್ನು ತಮ್ಮದಾಗಿಸಿಕೊಂಡರು.
ಫೈನಲ್ಸ್‌ನಲ್ಲಿ ಪೈಲಟ್ ನಂಬರ್ ಒನ್ ಚಾಯ್ಸ್, ವಸುದೈವ ಕುಟುಂಬಕಂ, ದೃಶ್ಯ, ನಿಮ್ಮ ಆಯ್ಕೆ, ನಮ್ಮ ಪ್ರಶ್ನೆ ಹಾಗೂ ಪಟಾಪಟ್ ಎಂಬ ಐದು ಸುತ್ತುಗಳಿದ್ದವು. ಪ್ರತಿ ಸುತ್ತು ಸ್ಪರ್ಧಿಗಳ, ಪ್ರೇಕ್ಷಕ ವರ್ಗದ ಕುತೂಹಲ ಹೆಚ್ಚಿಸುವಂತೆ ಮಾಡಿತ್ತು.
ಕ್ವಿಜ್ ಮಾಸ್ಟರ್ ಮೇಘವಿ ಮಂಜುನಾಥ್ ಅವರು ಪ್ರಶ್ನೆಗಳ ಸುರಿಮಳೆ ಸುರಿಸುತ್ತಿದ್ದರೆ, ವಿದ್ಯಾರ್ಥಿಗಳು ಅಷ್ಟೆ ವೇಗವಾಗಿ ಉತ್ತರ ನೀಡುವ ಮೂಲಕ ಶಹಬ್ಬಾಸ್ ಗಿರಿ ಗಿಟ್ಟಿಸಿದರು. ಪರದೆ ಮೇಲೆ ಪ್ರಶ್ನೆ ಮೂಡುತ್ತಿದ್ದಂತೆ ಉತ್ತರ ನೀಡಲು ಹಾತೊರೆಯುತ್ತಿದ್ದ ವಿದ್ಯಾರ್ಥಿಗಳು ಬಜರ್‌ಗೆ ವಿರಾಮ ನೀಡದೆ ಜಾಣ್ಮೆ ಮೆರೆದರು.
ಒಮ್ಮೊಮ್ಮೆ ಸರಳ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ಎಡವುತ್ತಿದ್ದರು. ಸರಿ ಉತ್ತರ ನೀಡುತ್ತಿದ್ದಂತೆ ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿ ಸ್ಪರ್ಧಿಗಳನ್ನು ಹುರಿದುಂಬಿಸಿದರು.
ಸ್ಪರ್ಧೆಯಲ್ಲಿ ಸ್ಥಳೀಯದಿಂದ ಜಾಗತಿಕ ಮಟ್ಟದವರೆಗಿನ ವಿಷಯಗಳ ಕುರಿತು ಪ್ರಶ್ನೆಗಳನ್ನು ಕೇಳಲಾಯಿತು. ಪ್ರೇಕ್ಷಕರ ವಿಭಾಗದ ಪ್ರಶ್ನೆಗಳಿಗೆ ಉತ್ತರಿಸಲು ಪೈಪೋಟಿ ಕಂಡು ಬಂತು. ಸರಿ ಉತ್ತರ ನೀಡಿದವರಿಗೆ ಆಕರ್ಷಕ ಬಹುಮಾನಗಳನ್ನು ವಂಡರ್ ಲಾ ಕಡೆಯಿಂದ ನೀಡಲಾಯಿತು.
‘ನಿಮ್ಮ ಆಯ್ಕೆ ನಮ್ಮ ಪ್ರಶ್ನೆ’ ಸುತ್ತು ಆಸಕ್ತಿದಾಯವಾಗಿತ್ತು. ಕ್ರೀಡಾ ಜಗತ್ತು, ಧಾರ್ಮಿಕ, ವಾಸ್ತುಶಿಲ್ಪ, ರಾಜಕೀಯ ಕುರಿತು ಪ್ರಶ್ನೆ ಕೇಳಲಾಯಿತು. ಜಾಣ್ಮೆ, ತಾಳ್ಮೆಯ ಉತ್ತರಗಳು ಬಂದವು. ಋಣಾತ್ಮಕ ಅಂಕಗಳ ಸುತ್ತಿನಲ್ಲಿ ತಪ್ಪು ಉತ್ತರ ನೀಡಿ ಅಂಕ ಕಳೆದುಕೊಂಡು ನಿರಾಸೆ ಅನುಭವಿಸಿದರು.
ಪಟಾಪಟ್ ಸುತ್ತಿನಲ್ಲಿ ‘ಡಿಫಾಲ್ಟ್’ ಸರಿ ಉತ್ತರಕ್ಕೆ 10 ಅಂಕ, ತಪ್ಪು ಉತ್ತರಕ್ಕೆ ಮೈನಸ್ 5, ‘ಸ್ಟೆಪ್ಅಪ್’ ತೆಗೆದುಕೊಂಡರೆ ಸರಿ ಉತ್ತರಕ್ಕೆ 15 ಅಂಕ, ತಪ್ಪು ಉತ್ತರಕ್ಕೆ ಮೈನಸ್ 7 ಅಂಕಗಳಿದ್ದವು. ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಆರ್ಮಿ ಪಬ್ಲಿಕ್ ಸ್ಕೂಲ್, ಕೊನೆಯ ಸುತ್ತಿನಲ್ಲೂ ಎರಡು ಪ್ರಶ್ನೆಗಳಿಗೆ ಸರಿ ಉತ್ತರ ನೀಡಿ ಅಂಕ ಹೆಚ್ಚಿಸಿಕೊಂಡು, ಗೆಲುವಿನ ನಗೆ ಬೀರಿತು.
ಪ್ರಥಮ ಸ್ಥಾನ ಪಡೆದ ತಂಡಕ್ಕೆ ಟ್ಯಾಬ್, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ಮೊಬೈಲ್ ಫೋನ್ ಹಾಗೂ ತೃತೀಯ ಸ್ಥಾನ ಪಡೆದ ತಂಡಕ್ಕೆ ಗ್ಯಾಜೆಟ್ ನೀಡಲಾಯಿತು.
ಪ್ರಜಾವಾಣಿ ಕಾರ್ಯ ನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಟಿಪಿಎಂಎಲ್ ನ್ಯಾಷನಲ್ ಸೇಲ್ಸ್ ಹೆಡ್ ಆನಂದ್ ಬಿಲ್ಡಿಕರ್, ಪೈಲಟ್ ಪೆನ್ಸ್ ರಿಜಿನಲ್ ಬ್ಯುಸಿನೆಸ್ ಮ್ಯಾನೇಜರ್‌ಗಳಾದ ಆರ್.ಕುಮಾರ್, ಗಣೇಶ್ ಹೆಗಡೆ, ದಾವಣಗೆರೆಯ ಸರ್.ಎಂ.ವಿ.ಪಿಯು ಕಾಲೇಜಿನ ನಿರ್ದೇಶಕ ಜೆ.ಪದ್ಮನಾಭ್, ವಂಡರ್ ಲಾ ಬ್ಯುಸಿನೆಸ್ ಡೆವಲಂಪ್‌ಮೆಂಟ್ ಮ್ಯಾನೇಜರ್ ಅವರು ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ವಿಜೇತರ ಅಭಿಪ್ರಾಯಗಳು
‘ಪ್ರಜಾವಾಣಿ’ ಪತ್ರಿಕೆಯಲ್ಲಿನ ಜಾಹೀರಾತು ನೋಡಿ ರಸಪ್ರಶ್ನೆಯಲ್ಲಿ ಪಾಲ್ಗೊಂಡೆವು. ನಿಜಕ್ಕೂ ಖುಷಿ ನೀಡಿತು. ವಲಯ ಮಟ್ಟದ ಸ್ಪರ್ಧೆಯಲ್ಲಿ ಪ್ರಶ್ನಾವಳಿಗಳು ಉತ್ತಮವಾಗಿದ್ದವು. ಪ್ರಾಥಮಿಕ ಹಂತದಲ್ಲಿ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸಿದೆವು. ಕ್ವಿಜ್ ಮಾಸ್ಟರ್ ಆಕರ್ಷಕವಾಗಿ ಸ್ಪರ್ಧೆ ನಡೆಸಿಕೊಟ್ಟರು.–ನಿಯತಿ ಜೊಇಸ್, ರಿದಂ ಶ್ರೀವಾಸ್ತವ್ – ಪ್ರಥಮ ಸ್ಥಾನ ಪಡೆದವರು
ವಿದ್ಯಾರ್ಥಿಗಳಿಗೆ ಜ್ಞಾನ ಬೆಳೆಸಿಕೊಳ್ಳಲು ಈ ರಸಪ್ರಶ್ನೆ ಸುವರ್ಣಾವಕಾಶ. ಪ್ರತಿಯೊಂದು ಪ್ರಶ್ನೆಗೆ ಯೋಚಿಸಿ ತಾಳ್ಮೆಯಿಂದ ಉತ್ತರಿಸಿದೆವು. ನಮ್ಮ ಪ್ರತಿಭೆ ಪ್ರದರ್ಶನಕ್ಕೆ ಒಳ್ಳೆಯ ವೇದಿಕೆ ದೊರಕಿತು. ಕೆಲವು ಪ್ರಶ್ನೆಗಳು ಕಠಿಣವಾಗಿತ್ತು. ನಿತ್ಯ ದಿನಪತ್ರಿಕೆಗಳನ್ನು ಓದುತ್ತಿದ್ದೆವು.–ಮಾನಸಿ ಷಾ, ಬೃಂದಾ ಸತ್ಯಪ್ರಿಯ – ದ್ವಿತೀಯ ಸ್ಥಾನ ಪಡೆದವರು
ಕಳೆದ ವರ್ಷ ನಮ್ಮ ಶಾಲೆ ಚಾಂಪಿಯನ್ ಆಗಿತ್ತು. ಈ ವರ್ಷ ಪ್ರಥಮ ಸ್ಥಾನ ಪಡೆಯುವ ಅವಕಾಶ ಇತ್ತು. ಸ್ವಲ್ಪದರಲ್ಲಿಯೇ ದ್ವಿತೀಯ ಸ್ಥಾನ ತಪ್ಪಿತ್ತು. ತೃತೀಯ ಸ್ಥಾನ ಪಡೆದಿರುವುದು ಖುಷಿ ನೀಡಿದೆ. ಮತ್ತಷ್ಟು ಪ್ರಯತ್ನ ಹಾಕಬೇಕಿತ್ತು. ಕಠಿಣ ಪ್ರಶ್ನೆಗಳಿದ್ದವು.–ಜೆ. ಚಿನ್ಮಯ್, ಎಸ್. ಚಿರಾಗ್ – ತೃತೀಯ ಸ್ಥಾನ ಪಡೆದವರು
ಪೈಪೋಟಿ ನೀಡಿದ ಸರ್ಕಾರಿ ಶಾಲೆ ಮಕ್ಕಳು
‘ಪ್ರಜಾವಾಣಿ’ ಕ್ವಿಜ್ ಚಾಂಪಿಯನ್‌ಶಿಪ್ ರಾಜ್ಯದಲ್ಲಿಯೇ ವಿಶೇಷವಾದದ್ದು. ಸರ್ಕಾರಿ ಶಾಲೆ ಮಕ್ಕಳು ಸಹ ಖಾಸಗಿ ಶಾಲೆಯ ಮಕ್ಕಳಿಗೆ ಪೈಪೋಟಿ ನೀಡಿದರು. ಎಲ್ಲಾ ವಿಷಯಗಳ ಕುರಿತು ಪ್ರಶ್ನೆಗಳನ್ನು ಕೇಳಲಾಯಿತು. ಕಠಿಣ ಮತ್ತು ಸುಲಭ ಪ್ರಶ್ನೆಗಳಿದ್ದವು. ವರ್ಷದಿಂದ ವರ್ಷಕ್ಕೆ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆ.–ಮೇಘವಿ ಮಂಜುನಾಥ್, ಕ್ವಿಜ್ ಮಾಸ್ಟರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.