ADVERTISEMENT

ಜನರ ಆಯ್ಕೆ ಸಂಸದ; ಪ್ರಧಾನಿಯಲ್ಲ: ಪ್ರಕಾಶ್‌ ರೈ

​ಪ್ರಜಾವಾಣಿ ವಾರ್ತೆ
Published 4 ಮೇ 2019, 8:50 IST
Last Updated 4 ಮೇ 2019, 8:50 IST
ಲೋಕಸಭೆ ಚುನಾವಣೆಯಲ್ಲಿ ದೆಹಲಿಯಿಂದ ಸ್ಪರ್ಧಿಸಿರುವ ಆಮ್‌ ಆದ್ಮಿ ಪಕ್ಷ (ಎಎಪಿ)ದ ಅಭ್ಯರ್ಥಿಗಳಿಗೆ ಬೆಂಬಲ ನೀಡುವುದಾಗಿ ನವದೆಹಲಿಯಲ್ಲಿ ಸೋಮವಾರ ಘೋಷಿಸಿದ ನಟ ಪ್ರಕಾಶ್‌ ರೈ. ಎಎಪಿ ಮುಖಂಡ ಗೋಪಾಲ್‌ ರಾಯ್‌ ಚಿತ್ರದಲ್ಲಿದ್ದಾರೆ
ಲೋಕಸಭೆ ಚುನಾವಣೆಯಲ್ಲಿ ದೆಹಲಿಯಿಂದ ಸ್ಪರ್ಧಿಸಿರುವ ಆಮ್‌ ಆದ್ಮಿ ಪಕ್ಷ (ಎಎಪಿ)ದ ಅಭ್ಯರ್ಥಿಗಳಿಗೆ ಬೆಂಬಲ ನೀಡುವುದಾಗಿ ನವದೆಹಲಿಯಲ್ಲಿ ಸೋಮವಾರ ಘೋಷಿಸಿದ ನಟ ಪ್ರಕಾಶ್‌ ರೈ. ಎಎಪಿ ಮುಖಂಡ ಗೋಪಾಲ್‌ ರಾಯ್‌ ಚಿತ್ರದಲ್ಲಿದ್ದಾರೆ   

ನವದೆಹಲಿ: ‘ದೇಶದ ಪ್ರತಿ ಕ್ಷೇತ್ರದ ಮತದಾರರು ಲೋಕಸಭೆಯಲ್ಲಿ ತಮ್ಮನ್ನು ಪ್ರತಿನಿಧಿಸುವ ಸಂಸದನನ್ನು ಆಯ್ಕೆ ಮಾಡುತ್ತಾರೆ, ಪ್ರಧಾನಿಯನ್ನಲ್ಲ’ ಎಂದು ನಟ ಪ್ರಕಾಶ್ ರೈ ಅಭಿಪ್ರಾಯಪಟ್ಟರು.

ಇಲ್ಲಿನ ಆಮ್ ಆದ್ಮಿ ಪಕ್ಷ (ಎಎಪಿ)ದ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜನಪರ ಕಾಳಜಿಯನ್ನು ವ್ಯಕ್ತಪಡಿಸುವ ಪಕ್ಷವನ್ನು ಬೆಂಬಲಿಸುವ ಉದ್ದೇಶದೊಂದಿಗೆ ಎಎಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ರಾಷ್ಟ್ರ ರಾಜಧಾನಿಗೆ ಬಂದಿದ್ದೇನೆ’ ಎಂದು ಘೋಷಿಸಿದರು.

‘ನಮ್ಮನ್ನು ಪ್ರತಿನಿಧಿಸುವ ಸಂಸದರು ಸಂಸತ್‌ನಲ್ಲಿ ಸಂದರ್ಭಾನುಸಾರ ಪ್ರಧಾನಿಯನ್ನು ಆಯ್ಕೆ ಮಾಡುವುದು ವಾಡಿಕೆ. ನಮಗೀಗ ದೇಶದಲ್ಲೇ ನೆಲೆನಿಂತು, ಜನರ ಕಷ್ಟ–ಸುಖಕ್ಕೆ ಸ್ಪಂದಿಸುವ ಪ್ರಧಾನಿಯ ಅಗತ್ಯವಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ದೇಶಕ್ಕೆ ಬರುವ ಅನಿವಾಸಿ ಭಾರತೀಯ ಪ್ರಧಾನಿ ಅಲ್ಲ’ ಎಂದು ಅವರು ಪ್ರಧಾನಿ ಮೋದಿ ಅವರ ಹೆಸರನ್ನು ಪ್ರಸ್ತಾಪಿಸದೆ ಹರಿಹಾಯ್ದರು.

ADVERTISEMENT

‘ಕೋಮುವಾದ ಮತ್ತು ದ್ವೇಷವನ್ನು ಪಸರಿಸುವ ರಾಜಕಾರಣವನ್ನು ಜನ ವಿರೋಧಿಸುವ ಅಗತ್ಯವಿದೆ. ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿ ಅಭಿವೃದ್ಧಿಗೆ ಆದ್ಯತೆ ನೀಡದಿರುವುದು ಜನರಿಗೆ ತಿಳಿದಿರುವ ವಿಷಯ. ಚುನಾವಣೆಯಲ್ಲಿ ಜನ ಆ ಎರಡೂ ಪಕ್ಷಗಳನ್ನು ಸಾರಾಸಗಟಾಗಿ ತಿರಸ್ಕರಿಸುವ ಮೂಲಕ ಬುದ್ದಿ ಕಲಿಸಲಿದ್ದಾರೆ’ ಎಂದು ಅವರು ಭವಿಷ್ಯ ನುಡಿದರು.

‘ಉತ್ತಮರ ಆಯ್ಕೆ ಎಂದರೆ ನಿಜಕ್ಕೂ ಅದು ಜನರ ಜಯ. ಕೆಟ್ಟವರ ಆಯ್ಕೆ ಎಂಬುದೇ ಜನರ ಸೋಲು’ ಎಂದ ಅವರು, ‘ರಾಜಕೀಯ ಮಾರ್ಕೆಟಿಂಗ್‌ ಸರಕಲ್ಲ. ಅದೊಂದು ಬ್ರಾಂಡ್‌ ಕೂಡ ಅಲ್ಲ’ ಎಂದು ಪ್ರತಿಪಾದಿಸಿದರು.

ಮೋದಿ ಒಬ್ಬ ನಟ: ‘ನಾನೊಬ್ಬ ನಟನಾಗಿ ಸಂಪಾದಿಸಿರುವ ಜನಪ್ರಿಯತೆಯನ್ನು ಬಳಸಿ ಎಎಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಇಲ್ಲಿಗೆ ಬಂದಿಲ್ಲ. ಬದಲಿಗೆ, ಒಬ್ಬ ರಾಜಕಾರಣಿಯಾಗಿ ಬಂದಿದ್ದೇನೆ. ಬಿಜೆಪಿ ಅನೇಕ ನಟರನ್ನು ಸ್ಪರ್ಧೆಗೆ ಇಳಿಸಿದೆ. ಏಕೆಂದರೆ ಸ್ವತಃ ಮೋದಿ ಒಬ್ಬ ನಟ. ಅಂತೆಯೇ ಇತರ ನಟರನ್ನೂ ತಮ್ಮ ಪಕ್ಷಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ’ ಎಂದು ಪ್ರಕಾಶ್‌ ರೈ ಟೀಕಿಸಿದರು.

ದೆಹಲಿಗೆ ಸ್ವತಂತ್ರ ರಾಜ್ಯದ ಸ್ಥಾನಮಾನ ಬೇಕು ಎಂಬ ಬೇಡಿಕೆ ಇರಿಸಿ ಹೋರಾಟ ನಡೆಸಿರುವ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಇಲ್ಲಿನ ಶಾಲೆ– ಕಾಲೇಜುಗಳು ಮತ್ತು ವಿಶ್ವವಿದ್ಯಾಲಯದಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ದೊರೆಯುತ್ತಿಲ್ಲ ಎಂಬರ್ಥದ ಹೇಳಿಕೆ ನೀಡಿದ್ದಾರೆ. ಇದು ಎಲ್ಲ ಕೇಂದ್ರಾಡಳಿತ ಪ್ರದೇಶಗಳು ಎದುರಿಸುತ್ತಿರುವ ಸಮಸ್ಯೆಯಾಗಿದೆ. ಸ್ವತಂತ್ರ ರಾಜ್ಯ ಸ್ಥಾನಮಾನ ದೊರೆತಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೂ ಸಾಕಷ್ಟು ಅವಕಾಶ ದೊರೆಯಲಿದೆ ಎಂಬುದು ಕೇಜ್ರಿವಾಲ್‌ ಅವರ ಹೇಳಿಕೆಯ ಹಿಂದಿನ ಸತ್ಯ ಎಂದು ಅವರು ಸ್ಪಷ್ಟಪಡಿಸಿದರು. ಎಎಪಿ ಹಿರಿಯ ಮುಖಂಡ ಗೋಪಾಲ್‌ ರಾಯ್‌ ಈ ಸಂದರ್ಭ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.