ADVERTISEMENT

ಓಲೈಕೆ ಮುಂದುವರಿದರೆ ಸಿದ್ದರಾಮಯ್ಯ, ಡಿಕೆಶಿ ಮನೆಗೂ ಬೆಂಕಿ: ಪ್ರಮೋದ ಮುತಾಲಿಕ್

ಎಸ್‌ಡಿಪಿಐ ಮತ್ತು ಪಿಎಫ್‌ಐ ನಿಷೇಧಿಸದಿದ್ದರೆ ಕೋರ್ಟ್‌ಗೆ ಮೊರೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 8:55 IST
Last Updated 14 ಆಗಸ್ಟ್ 2020, 8:55 IST
ಪ್ರಮೋದ ಮುತಾಲಿಕ್
ಪ್ರಮೋದ ಮುತಾಲಿಕ್   

ಹುಬ್ಬಳ್ಳಿ: ಕಾಂಗ್ರೆಸ್‌ ನಿರಂತರವಾಗಿ ಮುಸ್ಲಿಮರನ್ನು ಓಲೈಸುತ್ತಿರುವುದು ಬೆಂಗಳೂರಿನ ಹಿಂಸಾಚಾರಕ್ಕೆ ಕಾರಣ. ಇದು ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರ ಮನೆಗೂ ಪುಂಡರು ಬೆಂಕಿ ಹಚ್ಚುತ್ತಾರೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಹೇಳಿದರು.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕಾಂಗ್ರೆಸ್‌ನವರು ರಾಮನ ಬದಲು ಬಾಬರ್‌ನನ್ನು ಕೈ ಹಿಡಿದಿದ್ದು, ಹಜ್‌ ಯಾತ್ರೆಗೆ ಸಬ್ಸಿಡಿ ನೀಡಿ ಓಲೈಸಿದ್ದರಿಂದಲೇ ರಾಜ್ಯದಲ್ಲಿ ಮೇಲಿಂದ ಮೇಲೆ ಹಿಂಸಾಚಾರ ನಡೆಯುತ್ತಿವೆ. ಕಾಂಗ್ರೆಸ್‌ ಸಾಕಿದ ಗಿಣಿ ಈಗ ಅವರನ್ನೇ ಕಚ್ಚುತ್ತಿದೆ. ಪುಂಡರು ಮುಂದೆ ವಿಧಾನಸೌಧಕ್ಕೂ ಬೆಂಕಿ ಹಚ್ಚುತ್ತಾರೆ. ಅವರ ಹೆಡೆಮುರಿ ಕಟ್ಟಲು ಇದು ಸರಿಯಾದ ಸಮಯ’ ಎಂದರು.

ಫೇಸ್‌ಬುಕ್‌ನಲ್ಲಿ ಅವಹೇಳನಕಾರಿಯಾಗಿ ಸಂದೇಶ ಹಾಕಿದ್ದ ಆರೋಪದ ಮೇಲೆ ಬಂಧಿತನಾಗಿರುವ ನವೀನ್‌ನನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಆಟವಾಡುತ್ತಿದೆ. ಬಶೀರ್‌ ಎಂಬಾತ ರಾಮನ ಬಗ್ಗೆ ಅಶ್ಲೀಲವಾಗಿ ಪೋಸ್ಟರ್‌ಗಳನ್ನು ಪ್ರಕಟಿಸಿದ್ದ, ಭಗವದ್ಗೀತೆಯನ್ನು ಸುಡುತ್ತೇನೆ ಎಂದು ಅಬ್ಬರಿಸಿದ್ದ. ನಾವು ಆತನ ವಿರುದ್ಧ ಕಾನೂನಿನ ಚೌಕಟ್ಟಿನಲ್ಲಿ ಹೋರಾಡುತ್ತಿದ್ದೇವೆ, ಪ್ರಕರಣ ದಾಖಲಿಸಿದ್ದೇವೆ. ನವೀನ್‌ ವಿರುದ್ಧವೂ ಕಾನೂನು ರೀತಿಯಲ್ಲಿ ಹೋರಾಡುವುದನ್ನು ಬಿಟ್ಟು, ಹಿಂಸಾಚಾರ ನಡೆಸಿದ್ದು ಪೂರ್ವಯೋಜಿತ ಕೃತ್ಯ ಎಂದು ಆರೋಪಿಸಿದರು.

ADVERTISEMENT

ಬಿಜೆಪಿ ವಿರುದ್ಧ ಆಕ್ರೋಶ: ರಾಜ್ಯದಲ್ಲಿ ಹಿಂದೆ ನಡೆದ ಘಟನೆಗಳಲ್ಲಿ ಮತ್ತು ಬೆಂಗಳೂರಿನ ಹಿಂಸಾಚಾರದಲ್ಲಿ ಎಸ್‌ಡಿಪಿಐ ಮತ್ತು ಪಿಎಫ್‌ಐ ಪಾತ್ರ ಇರುವುದು ಸ್ಪಷ್ಟವಾಗಿದೆ. ಇದಕ್ಕೆ ಸಂಬಂಧಿಸಿದ ದಾಖಲೆ ನೀಡಿದರೂ ರಾಜ್ಯ ಬಿಜೆಪಿ ಸರ್ಕಾರ ಸಂಘಟನೆಗಳ ನಿಷೇಧಕ್ಕೆ ಪರಿಣಾಮಕಾರಿಯಾಗಿ ಕ್ರಮ ತೆಗೆದುಕೊಳ್ಳುತ್ತಿಲ್ಲ. ಈ ವಿಷಯದಲ್ಲಿ ರಾಜ್ಯ ಸರ್ಕಾರ ಕೂಡ ಆಟವಾಡುತ್ತಿದೆ ಎಂದು ದೂರಿದರು.

ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರಗಳು ಅಧಿಕಾರದಲ್ಲಿದ್ದರೂ ಸಂಘಟನೆಗಳ ನಿಷೇಧಕ್ಕೆ ಮೀನಮೇಷ ಏಕೆ ಎಂದು ಪ್ರಶ್ನಿಸಿದರಲ್ಲದೇ, ದೇಶ ಹಾಗೂ ಜನರ ಬಗ್ಗೆ ನಿಜವಾದ ಕಾಳಜಿಯಿದ್ದರೆ ಸಂಘಟನೆಗಳನ್ನು ನಿಷೇಧಿಸಲಿ ಎಂದೂ ಸವಾಲು ಹಾಕಿದರು. ಸಂಘಟನೆಗಳ ನಿಷೇಧಕ್ಕೆ ಪೂರಕವಾದ ದಾಖಲೆಗಳನ್ನು ಗೃಹ ಸಚಿವರಿಗೆ ನೀಡುತ್ತೇನೆ. ನಿಷೇಧಿಸದಿದ್ದರೆ ಕೋರ್ಟ್‌ ಮೊರೆ ಹೋಗುತ್ತೇನೆ ಎಂದರು.

ಪ್ರಧಾನಿ ನರೇಂದ್ರ ಮೋದಿ ದೇಶದ ಬಗ್ಗೆ ಅತೀವವಾದ ಪ್ರೀತಿ, ಭಕ್ತಿ ಹೊಂದಿದ್ದಾರೆ. ಅವರು ಭಾರತವನ್ನು ಅಫಘಾನಿಸ್ತಾನ, ತಾಲಿಬಾನ್‌ ಆಗಲು ಬಿಡುವುದಿಲ್ಲ. ಪುಂಡಾಟಿಕೆ ನಡೆಸುವವರನ್ನು ದೇಶದಿಂದ ಒದ್ದು ಓಡಿಸುತ್ತಾರೆ. ಮೋದಿ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದವರು ಸಂಘಟನೆಗಳ ನಿಷೇಧಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿಲ್ಲ. ರಾಜ್ಯ ಬಿಜೆಪಿ ಈ ವಿಷಯದಲ್ಲಿ ಮೃದುಧೋರಣೆ ಹೊಂದಿದಂತೆ ಕಾಣುತ್ತಿದೆ ಎಂದರು.

ಜಮೀರ್ ಅಹ್ಮದ್ ಕಾರಣ: ಬೆಂಗಳೂರಿನ ಘಟನೆ ಬಳಿಕ ಜಮೀರ್‌ ಅಹ್ಮದ್‌ ವರ್ತನೆ ನೋಡಿದರೆ ಈ ಘಟನೆಗೆ ಅವರೇ ನೇರ ಕಾರಣ ಎಂಬುದು ಗೊತ್ತಾಗುತ್ತದೆ ಎಂದು ಮುತಾಲಿಕ್‌ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.