ADVERTISEMENT

ಉಪಚುನಾವಣೆ | ಗೊಂದಲಕ್ಕೀಡಾದ ಪ್ರತಾಪಗೌಡ: ದೆಹಲಿಗೆ ದೌಡು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2019, 13:36 IST
Last Updated 21 ಸೆಪ್ಟೆಂಬರ್ 2019, 13:36 IST
ಪ್ರತಾಪಗೌಡ ಪಾಟೀಲ
ಪ್ರತಾಪಗೌಡ ಪಾಟೀಲ   

ರಾಯಚೂರು:ಚುನಾವಣೆ ಆಯೋಗ ಪ್ರಕಟಿಸಿದ ಉಪಚುನಾವಣೆ ಕ್ಷೇತ್ರಗಳ ಪಟ್ಟಿಯಲ್ಲಿ ರಾಯಚೂರಿನ ಮಸ್ಕಿ ವಿಧಾನಸಭೆ ಕ್ಷೇತ್ರವು ಬಿಟ್ಟುಹೋಗಿರುವುದಕ್ಕೆ ಅನರ್ಹ ಶಾಸಕರ ಪಟ್ಟಿಯಲ್ಲಿರುವ ಪ್ರತಾಪಗೌಡ ಪಾಟೀಲ ಅವರು ಗೊಂದಲಕ್ಕೀಡಾಗಿದ್ದು, ಚುನಾವಣೆ ಆಯೋಗದಿಂದ ಕಾರಣ ತಿಳಿಯಲು ದೆಹಲಿಗೆ ದೌಡಾಯಿಸಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಸನಗೌಡ ತುರ್ವಿಹಾಳ ಅವರು 213 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಮತಗಳ ಎಣಿಕೆ ಹಾಗೂ ಮತದಾನದಲ್ಲಿ ಅಕ್ರಮ ನಡೆದಿದೆ ಎಂದು ಬಸನಗೌಡ ಅವರು ಹೈಕೋರ್ಟ್‌ಗೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದು, ಇನ್ನೂ ವಿಚಾರಣೆ ನಡೆಯುತ್ತಿದೆ.

‘ಮಸ್ಕಿ ಕ್ಷೇತ್ರಕ್ಕೆ ಉಪ ಚುನಾವಣೆ ಏಕೆ ಪ್ರಕಟಿಸಿಲ್ಲ ಎಂಬುದರ ಬಗ್ಗೆ ನನಗೂ ಗೊಂದಲವಿದೆ. ಕಾರಣ ಸ್ಪಷ್ಟವಾಗಿಲ್ಲ. ವಿಧಾನಸಭೆ ಚುನಾವಣೆ ಫಲಿತಾಂಶದ ಬಗ್ಗೆ ಆಕ್ಷೇಪಣಾ ಅರ್ಜಿಯೊಂದು ಹೈಕೋರ್ಟ್‌ಗೆ ಸಲ್ಲಿಸಿರುವುದು ಗೊತ್ತು. ಆದರೆ, ನಿಖರವಾದ ಕಾರಣ ತಿಳಿದುಕೊಳ್ಳಲು ಹೊರಟಿದ್ದೇನೆ’ ಎಂದು ಪ್ರತಾಪಗೌಡ ಪಾಟೀಲ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

ADVERTISEMENT

ಉಪಚುನಾವಣೆ ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆ ಬಸನಗೌಡ ತುರ್ವಿಹಾಳ ಅವರುಬೆಂಗಳೂರಿನಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿ ಮಾಡುತ್ತಿದ್ದು, ಪ್ರತಿಕ್ರಿಯೆಗೆ ಸಿಗುತ್ತಿಲ್ಲ. ಹೈಕೋರ್ಟ್‌ಗೆ ಸಲ್ಲಿಸಿದ ಆಕ್ಷೇಪಣಾ ಅರ್ಜಿ ವಾಪಸ್‌ ಪಡೆಯುವಂತೆ ಬಸನಗೌಡ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.