ADVERTISEMENT

ಪ್ರವೀಣ್ ನೆಟ್ಟಾರು ಹತ್ಯೆ: ಎನ್‌ಐಎಯಿಂದ ಮತ್ತೊಬ್ಬ ಆರೋಪಿ ತುಫೈಲ್‌ ಸೆರೆ

₹ 5 ಲಕ್ಷ ಬಹುಮಾನ ಘೋಷಿಸಿದ್ದ ಎನ್‌ಐಎ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2023, 19:32 IST
Last Updated 5 ಮಾರ್ಚ್ 2023, 19:32 IST
ಎಂ.ಎಚ್. ತುಫೈಲ್‌
ಎಂ.ಎಚ್. ತುಫೈಲ್‌   

ಬೆಂಗಳೂರು: ಬಿಜೆಪಿ ಯುವ ಮೋರ್ಚಾ ಮಂಗಳೂರು ಜಿಲ್ಲಾ ಘಟಕದ ಕಾರ್ಯಕಾರಿಣಿ ಸದಸ್ಯ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದ ಮತ್ತೊಬ್ಬ ಆರೋಪಿ ಎಂ.ಎಚ್.ತುಫೈಲ್‌ನನ್ನು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ನಗರದಲ್ಲಿ ಬಂಧಿಸಿದ್ದಾರೆ.

‘ಕೊಡಗು ಜಿಲ್ಲೆಯ ಮಡಿಕೇರಿಯ ತುಫೈಲ್‌, 2022ರ ಜುಲೈ 26ರಂದು ನಡೆದಿದ್ದ ಪ್ರವೀಣ್‌ ನೆಟ್ಟಾರು ಹತ್ಯೆ ಬಳಿಕ ತಲೆಮರೆಸಿಕೊಂಡಿದ್ದ. ಈತನ ಪತ್ತೆಗೆ ₹ 5 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಅಮೃತಹಳ್ಳಿ ಠಾಣೆ ವ್ಯಾಪ್ತಿಯ ದಾಸರಹಳ್ಳಿಯಲ್ಲಿ ಕಾರ್ಯಾಚರಣೆ ನಡೆಸಿಶನಿವಾರ ರಾತ್ರಿ ಆರೋಪಿ ಯನ್ನು ಬಂಧಿಸಲಾಗಿದೆ’ ಎಂದು ಎನ್‌ಐಎ ಮೂಲಗಳು ಹೇಳಿವೆ.

ಬಂಧಿತ ತುಫೈಲ್‌ ನಿಷೇಧಿತ ಪಿಎಫ್‌ಐ ಸಂಘಟನೆಯ ಕೊಡಗು ಜಿಲ್ಲಾ ಘಟಕದ ಮಾಜಿ ಕಾರ್ಯದರ್ಶಿ ಹಾಗೂ ಪ್ರವೀಣ್ ಹತ್ಯೆಗಾಗಿ ಪಿಎಫ್‌ಐ ರಚಿಸಿಕೊಂಡಿದ್ದ ಸೇವಾ ತಂಡದ (ಹಿಟ್ ಟೀಮ್) ಕೊಡಗು ಜಿಲ್ಲೆಯ ಮುಖ್ಯಸ್ಥನಾಗಿದ್ದ ಎಂದು ತಿಳಿಸಿವೆ.

ADVERTISEMENT

‘ನಿಷೇಧಿತ ಪಾಪ್ಯುಲರ್ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆ ಸದಸ್ಯರಾದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕೊಡಾಜೆ ಮಹಮ್ಮದ್‌ ಶರೀಫ್‌, ನೆಕ್ಕಿಲಾಡಿಯ ಕೆ.ಎ.ಮಸೂದ್‌, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕು ಬೆಳ್ಳಾರೆ ಗ್ರಾಮದ ಎಸ್‌.ಮೊಹಮ್ಮದ್‌ ಮುಸ್ತಾಫ ಅಲಿಯಾಸ್‌ ಮುಸ್ತಾಫ ಪೈಚಾರು ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗೂ ಬಹುಮಾನ ಘೋಷಿಸಲಾಗಿದೆ’ ಎಂದು ತಿಳಿಸಿವೆ.

ವಾರ ಕಾಯ್ದು, ಕಾರ್ಯಾಚರಣೆ: ‘ಹತ್ಯೆ ಬಳಿಕ ಊರು ತೊರೆದಿದ್ದ ತುಫೈಲ್, ವಿವಿಧೆಡೆ ಸುತ್ತಾಡಿದ್ದ. ಬಳಿಕ ಬೆಂಗಳೂರಿಗೆ ಬಂದಿದ್ದ. ದಾಸರಹಳ್ಳಿ ನಿವಾಸಿ ನಂಜುಂಡಪ್ಪ ಅವರ ಮೂರು ಅಂತಸ್ತಿನ ಕಟ್ಟಡದ ಮೊದಲ ಮಹಡಿಯಲ್ಲಿ ಬಾಡಿಗೆಗೆ ಉಳಿದಿದ್ದ’ ಎಂದು ಎನ್‌ಐಎ ಮೂಲಗಳು ತಿಳಿಸಿವೆ.

‘ಮನೆಯಲ್ಲಿ ಒಬ್ಬನೇ ಇರುತ್ತಿದ್ದ ತುಫೈಲ್, ಹೆಚ್ಚಾಗಿ ಹೊರಗೆ ಬರುತ್ತಿರಲಿಲ್ಲ. ಅಗತ್ಯ ವಸ್ತುಗಳ ಖರೀದಿಗಷ್ಟೇ ಬರುತ್ತಿದ್ದ. ಮಾಸ್ಕ್‌ ಧರಿಸಿ ಅಂಗಡಿಗೆ ಹೋಗಿ ವಾಪಸು ಮನೆ ಸೇರುತ್ತಿದ್ದ. ಹೀಗಾಗಿ, ಈತನ ಬಗ್ಗೆ ಸ್ಥಳೀಯರಿಗೆ ಮಾಹಿತಿ ಇರಲಿಲ್ಲ’ ಎಂದು ತಿಳಿಸಿವೆ.

‘ತಾಂತ್ರಿಕ ಪುರಾವೆಗಳ ಮೂಲಕ ತುಫೈಲ್ ವಿಳಾಸ ಪತ್ತೆಯಾಗಿತ್ತು. ಆತನ ಮನೆ ಬಳಿ ಒಂದು ವಾರ ಸುತ್ತಾಡಿ ಮಾಹಿತಿ ಕಲೆಹಾಕಲಾಗಿತ್ತು. ತುಫೈಲ್ ಎಂಬುದು ಖಚಿತವಾದ ಬಳಿಕವೇ ಕಾರ್ಯಾಚರಣೆ ನಡೆಸಲಾಯಿತು’ ಎಂದು ಎನ್‌ಐಎ ಮೂಲಗಳು ಹೇಳಿವೆ.

‘ನಲ್ಲಿ ದುರಸ್ತಿ ಮಾಡುವವರ ಸೋಗಿ ನಲ್ಲಿ ಅಧಿಕಾರಿಗಳಿಬ್ಬರು ಮನೆಗೆ ಹೋಗಿ ದ್ದರು. ಕುರಿ ಮಾಂಸ ತಂದಿಟ್ಟುಕೊಂಡಿದ್ದ ತುಫೈಲ್, ಅದನ್ನು ಸ್ವಚ್ಛಗೊಳಿಸುತ್ತಿದ್ದ. ಅದೇ ಸಮಯಕ್ಕೆ ಅಧಿಕಾರಿಗಳು ಬಾಗಿಲು ಬಡಿದಿದ್ದರು’ ತಿಳಿಸಿವೆ.

‘ಬಾಗಿಲು ತೆರೆದಿದ್ದ ತುಫೈಲ್, ‘ನಲ್ಲಿ ಸರಿಯಾಗಿದೆ. ನಿಮಗೆ ಯಾರು ಬರಲು ಹೇಳಿದರು’ ಎಂದು ಪ್ರಶ್ನಿಸಿದ್ದ. ಅಧಿಕಾರಿಗಳು, ಮಾಲೀಕರ ಹೆಸರು ಹೇಳಿದ್ದರು. ಅದಕ್ಕೆ ಒಪ್ಪದ ತುಫೈಲ್, ಬಾಗಿಲು ಹಾಕಲು ಮುಂದಾಗಿದ್ದ.

ಅಧಿಕಾರಿಗಳು ಆಗ, ಆತನ ಹೆಸರು ಹೇಳಿ ಹಿಡಿಯಲು ಮುಂದಾಗಿದ್ದರು. ತಪ್ಪಿಸಿಕೊಳ್ಳಲು ಯತ್ನಿಸಿದ್ದ ಆರೋಪಿ, ಅಧಿಕಾರಿಗಳ ಮೇಲೆ ಹಲ್ಲೆಗೂ ಯತ್ನಿ ಸಿದ್ದ. ಸಿಬ್ಬಂದಿ ನೆರವಿನಿಂದ ಆರೋಪಿ ಬಂಧಿಸಲಾಯಿತು’ ಎಂದು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.