ADVERTISEMENT

ಪ್ರವೀಣ್‌ ನೆಟ್ಟಾರು ಹತ್ಯೆ: ಕರ್ನಾಟಕ, ತಮಿಳುನಾಡಿನ ಹಲವು ಸ್ಥಳಗಳಲ್ಲಿ NIA ಶೋಧ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2024, 13:59 IST
Last Updated 5 ಡಿಸೆಂಬರ್ 2024, 13:59 IST
<div class="paragraphs"><p>ಎನ್‌ಐಎ, ಪ್ರವೀಣ್ ನೆಟ್ಟಾರು</p></div>

ಎನ್‌ಐಎ, ಪ್ರವೀಣ್ ನೆಟ್ಟಾರು

   

ಬೆಂಗಳೂರು: ಬಿಜೆಪಿ ಯುವ ಮೋರ್ಚಾದ ದಕ್ಷಿಣ ಕನ್ನಡ ಜಿಲ್ಲಾ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು, ಕರ್ನಾಟಕ ಮತ್ತು ತಮಿಳುನಾಡಿನ ಹಲವು ಸ್ಥಳಗಳಲ್ಲಿ ಗುರುವಾರ ನಸುಕಿನ ವೇಳೆ ಏಕಕಾಲದಲ್ಲಿ ದಾಳಿ ನಡೆಸಿ, ಶೋಧಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಯನ್ನು 2022ರ ಆಗಸ್ಟ್ 4ರಂದು ಎನ್ಐಎ ವಹಿಸಿಕೊಂಡಿತ್ತು.

ADVERTISEMENT

‘ತಲೆಮರೆಸಿಕೊಂಡಿರುವ ಆರೋಪಿಗಳು, ಶಂಕಿತರು ಹಾಗೂ ಅವರ ಸಹಚರರ ಮನೆಗಳ ಮೇಲೆ ಗುರುವಾರ ದಾಳಿ ನಡೆಸಿ ಡಿಜಿಟಲ್ ಉಪಕರಣಗಳು ಸೇರಿದಂತೆ ವಿವಿಧ ದಾಖಲೆ ಜಪ್ತಿ ಮಾಡಲಾಗಿದೆ’ ಎಂದು ಎನ್‌ಐಎ ಮೂಲಗಳು ತಿಳಿಸಿವೆ.

ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಬಂದಿದ್ದ ಎನ್‌ಐಎ ಅಧಿಕಾರಿಗಳು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಹಾಗೂ ಬೆಳ್ತಂಗಡಿ ತಾಲ್ಲೂಕಿನಲ್ಲಿ ತಪಾಸಣೆ ನಡೆಸಿದರು. ಕೊಡಗು ಜಿಲ್ಲೆಯ ಸೋಮವಾರಪೇಟೆ, ಸುಂಟಿಕೊಪ್ಪ, ಬೆಂಗಳೂರು ನಗರ ಹಾಗೂ ತಮಿಳುನಾಡಿನ ಚೆನ್ನೈನಲ್ಲಿ ಶಂಕಿತರ ಮನೆಗಳ ಮೇಲೆ ದಾಳಿ ನಡೆಸಿ ಶೋಧಿಸಿದರು.

‘ಆರೋಪಿಗಳ ಸಹಚರರನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆ ಹಾಕಲಾಗಿದೆ. ಯಾರನ್ನೂ ವಶಕ್ಕೆ ಪಡೆದಿಲ್ಲ’ ಎಂದು ಮೂಲಗಳು ತಿಳಿಸಿವೆ.

‘ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳಿಗೆ‌‌‌ ಕೊಡಗು ಜಿಲ್ಲೆಯ ಸಂಪರ್ಕವಿರುವ ಮಾಹಿತಿ ಸಿಕ್ಕಿತ್ತು’ ಎಂದು ಗೊತ್ತಾಗಿದೆ.

ಏಳು ಆರೋಪಿಗಳಿಗೆ ಶೋಧ: ‘ಪ್ರಕರಣದ ಸಂಬಂಧ ಇದುವರೆಗೂ 19 ಆರೋಪಿಗಳನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳೂ ಸೇರಿದಂತೆ ಒಟ್ಟು 23 ವಿರುದ್ಧ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ತಲೆಮರೆಸಿಕೊಂಡಿರುವ 7 ಆರೋಪಿಗಳ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್‌ ಹೊರಡಿಸಲಾಗಿದೆ. ಆರೋಪಿಗಳ ಸುಳಿವು ನೀಡಿದವರಿಗೆ ಬಹುಮಾನ ಘೋಷಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

‘ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ 2022ರ ಜುಲೈ 26ರಂದು ಪ್ರವೀಣ್‌ ನೆಟ್ಟಾರು ಅವರನ್ನು ಆರೋಪಿಗಳು ಚೂಪಾದ ಆಯುಧದಿಂದ ಇರಿದು ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು. ಭಯದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ನಿಷೇಧಿತ ಪಿಎಫ್‌ಐ ಸಂಘಟನೆ ಸದಸ್ಯರು ಪ್ರವೀಣ್‌ ಅವರನ್ನು ಹತ್ಯೆ ಮಾಡಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿತ್ತು’ ಎಂದು ಎನ್‌ಐಎ ಹೇಳಿದೆ.

ದೋಷಾರೋಪ ಪಟ್ಟಿ ಸಲ್ಲಿಕೆ: ಆರೋಪಿಗಳಾದ ಮುಸ್ತಫಾ ಪೈಚಾರ್ ಹಾಗೂ ಎಚ್‌.ವೈ.ರಿಯಾಜ್ ವಿರುದ್ಧ ಎನ್‌ಐಎ ಕಳೆದ ಆಗಸ್ಟ್‌ 4ರಂದು ನ್ಯಾಯಾಲಯಕ್ಕೆ ದೋಷಾರೋಪ‍ ಪಟ್ಟಿ ಸಲ್ಲಿಸಿತ್ತು.

‘240 ಸಾಕ್ಷಿಗಳ ಹೇಳಿಕೆ ಸೇರಿದಂತೆ 1,500 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಾಗಿತ್ತು. ಜನರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಪ್ರವೀಣ್ ನೆಟ್ಟಾರು ಅವರನ್ನು ಸಾರ್ವಜನಿಕ ಸ್ಥಳದಲ್ಲಿ ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಲಾಗಿತ್ತು’ ಎಂದೂ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.