ADVERTISEMENT

ವಿವಾಹಪೂರ್ವ ಸಮಾಲೋಚನೆಗೆ ‘ಕೂಡಿ ಬಾಳೋಣ’ ಕೇಂದ್ರ ಆರಂಭ: ರಾಜ್ಯ ಮಹಿಳಾ ಆಯೋಗ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 15:50 IST
Last Updated 2 ಡಿಸೆಂಬರ್ 2025, 15:50 IST
   

ಬೆಂಗಳೂರು: ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಸಾಂತ್ವನ ಕೇಂದ್ರಗಳಲ್ಲಿ  ವಿವಾಹಪೂರ್ವ ಸಮಾಲೋಚನೆಗಾಗಿ  ‘ಕೂಡಿ ಬಾಳೋಣ’ ಕೇಂದ್ರ ಆರಂಭಿಸಲು ರಾಜ್ಯ ಮಹಿಳಾ ಆಯೋಗವು ಮುಂದಾಗಿದೆ.

ರಾಷ್ಟ್ರೀಯ ಮಹಿಳಾ ಆಯೋಗವು ‘ತೇರೆ ಮೇರೆ ಸಪನೆ’ ಎಂಬ ವಿವಾಹಪೂರ್ವ ಸಮಾಲೋಚನಾ ಕೇಂದ್ರ ಕಾರ್ಯಕ್ರಮ ರೂಪಿಸಿದೆ. ಅದರಂತೆ, ರಾಜ್ಯಗಳಲ್ಲಿ ವಿವಾಹಪೂರ್ವ ಸಮಾಲೋಚನಾ ಕೇಂದ್ರ ಆರಂಭಿಸುವಂತೆ ಎಲ್ಲ ರಾಜ್ಯಗಳ ಮಹಿಳಾ ಆಯೋಗಕ್ಕೆ ಪತ್ರ ಬರೆದಿತ್ತು.

‘ತೇರೆ ಮೇರೆ ಸಪನೆ’ಯ ಪ್ರಮಾಣಿತ ಕಾರ್ಯವಿಧಾನದ (ಎಸ್‌ಒಪಿ) ಆಧಾರದಲ್ಲಿಯೇ ಸಮಾಲೋಚನಾ ಕೇಂದ್ರ ಆರಂಭಿಸುವ ಬಗ್ಗೆ ರಾಜ್ಯ ಮಹಿಳಾ ಆಯೋಗವು ಪ್ರಸ್ತಾವ ರೂಪಿಸಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಲ್ಲಿಸಿತ್ತು. ‘ತೇರೆ ಮೇರೆ ಸಪನೆ’ ಎಂಬ ಹಿಂದಿ ಹೆಸರನ್ನು ಬದಲಿಸಿ, ‘ಕೂಡಿ ಬಾಳೋಣ’ ಎಂದು ಮರುನಾಮಕರಣ ಮಾಡಲಾಗಿದೆ.

ADVERTISEMENT

ಆಯೋಗದ ಈ ಪ್ರಸ್ತಾವಕ್ಕೆ ಇಲಾಖೆಯು ಮಂಗಳವಾರ ಅನುಮೋದನೆ ನೀಡಿದ್ದು, ಲಭ್ಯವಿರುವ ಸಂಪನ್ಮೂಲಗಳನ್ನು ‘ಕೂಡಿ ಬಾಳೋಣ’ ಕೇಂದ್ರಕ್ಕೆ ಒದಗಿಸಬೇಕು ಎಂದು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ. ಜಿಲ್ಲಾಧಿಕಾರಿಗಳ ಬಳಿ ಲಭ್ಯವಿರುವ ಅನುದಾನ ಅಥವಾ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿ ಬಳಸಿಕೊಂಡು ಅಗತ್ಯ ಸಂಪನ್ಮೂಲಗಳನ್ನು ಸೃಷ್ಟಿಸಬಹುದು ಎಂದು ಆದೇಶದಲ್ಲಿ ಸಲಹೆ ನೀಡಲಾಗಿದೆ.

ಈ ಕೇಂದ್ರಗಳ ರೂಪುರೇಷೆ ಹೇಗಿರಬೇಕು, ಅವು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದರ ಬಗ್ಗೆ ತರಬೇತಿ ನೀಡಲು ರಾಷ್ಟ್ರೀಯ ಮಹಿಳಾ ಆಯೋಗದ ಪರಿಣತರ ತಂಡವು ರಾಜ್ಯಕ್ಕೆ ಭೇಟಿ ನೀಡಲಿದೆ. ಅದಕ್ಕೂ ಮುನ್ನ ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸಮಾಲೋಚನಾ ಕೇಂದ್ರಕ್ಕೆ ಜಾಗ ಗುರುತಿಸಿ, ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.