ADVERTISEMENT

ಸರ್ಕಾರಿ ಕಚೇರಿಯಲ್ಲಿ ಪ್ರಿಪೇಡ್ ವಿದ್ಯುತ್ ಮೀಟರ್ ಅಳವಡಿಕೆ: ಸಚಿವ ಸುನೀಲ್ ಕುಮಾರ್

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 4:53 IST
Last Updated 2 ಆಗಸ್ಟ್ 2022, 4:53 IST
ಇಂಧನ‌ ಸಚಿವ ಸುನೀಲ್ ಕುಮಾರ್
ಇಂಧನ‌ ಸಚಿವ ಸುನೀಲ್ ಕುಮಾರ್   

ಹುಬ್ಬಳ್ಳಿ: 'ಸರ್ಕಾರಿ ಕಚೇರಿಗಳು ವಿದ್ಯುತ್ ಬಿಲ್ ಬಾಕಿ ಇಟ್ಟುಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಿಪೇಡ್ ಮೀಟರ್ ಅಳವಡಿಸುವ ಚಿಂತನೆ ನಡೆದಿದೆ' ಎಂದು ಇಂಧನ‌ ಸಚಿವ ಸುನೀಲ್ ಕುಮಾರ್ ಹೇಳಿದರು.

ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಯಾವ್ಯಾವ ಸರ್ಕಾರಿ ಇಲಾಖೆಯಲ್ಲಿ ವಿದ್ಯುತ್ ಬಿಲ್ ಬಾಕಿಯಿದೆ ಎಂದು ಪರಿಶೀಲಿಸಿ, ಅದನ್ನು ಪಾವತಿಸುವಂತೆ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳುತ್ತಿದ್ದೇವೆ. ಬಿಲ್ ಪಾವತಿಸದ ದೊಡ್ಡ ನೀರಾವರಿ ಇಲಾಖೆ, ಬಿಬಿಎಂಪಿ ಹಾಗೂ ಗ್ರಾಮ ಪಂಚಾಯ್ತಿಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಕೆಲವು ಗ್ರಾಮ ಪಂಚಾಯ್ತಿಗಳು ವಾರದವರೆಗೆ ಸಮಸ್ಯೆ ಅನುಭವಿಸಿವೆ. ಗ್ರಾಹಕರಿಗೂ ಸರ್ಕಾರಿ ಇಲಾಖೆಗೂ ಒಂದೇ ನ್ಯಾಯ' ಎಂದರು.

'ಸಮರ್ಪಕ ಹಾಗೂ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು ಎಂದು ರಾಜ್ಯದಲ್ಲಿ ಹೊಸದಾಗಿ 37 ಕಡೆಗಳಲ್ಲಿ ನೂತನ ವಿದ್ಯುತ್ ಉಪ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಆದ್ಯತೆ ಮೇರೆಗೆ ಉಪ ಕೇಂದ್ರ ಸ್ಥಾಪನೆ ಕಾರ್ಯ ನಡೆಯುತ್ತಿದೆ. ಮತ್ತಷ್ಟು ಉಪಕೇಂದ್ರ ಸ್ಥಾಪಿಸಲು ಹೆಸ್ಕಾಂ ವ್ಯಾಪ್ತಿಯಲ್ಲಿ ಬೇಡಿಕೆಗಳು ಬರುತ್ತಿವೆ. ಅವುಗಳನ್ನು ಸಹ ಪ್ರಸ್ತುತ ಬಜೆಟ್'ನಲ್ಲಿ ತೆಗೆದುಕೊಳ್ಳುವ ಆಲೋಚನೆಯಿದೆ' ಎಂದು ಹೇಳಿದರು.

ADVERTISEMENT

'ಕರ್ನಾಟಕದಲ್ಲಿ ಸೋಲಾರ್ ರೂಫ್'ಟಾಪ್ ಯೋಜನೆಗೆ ಬೆಸ್ಕಾಂ ಅನ್ನು ನೋಡಲ್ ಅಧಿಕಾರಿಯನ್ನಾಗಿ ಮಾಡಲಾಗಿದೆ. ಅದು ರಾಜ್ಯದಲ್ಲಿ ಎಷ್ಟು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದು ಎಂದು‌ ಸಮೀಕ್ಷೆ ನಡೆಸುತ್ತಿದೆ. ಅದಕ್ಕೆ ಪೂರಕವಾಗಿ 1,108 ಕಡೆಗಳಲ್ಲಿ ಇವಿ ಸ್ಟೇಷನ್ ಸ್ಥಾಪಿಸಲು ಯೋಚಿಸಿದ್ದೇವೆ. ಆ ಕುರಿತು ಅಭಿಯಾನ ಸಹ ನಡೆಯುತ್ತಿದೆ' ಎಂದರು.

'ಪೂರ್ವ ನಿಶ್ಚಿತವಾಗಿ ವಿದ್ಯುತ್ ಸ್ಥಗಿತಗೊಳಿಸುವುದಾದರೆ ಸಾರ್ವಜನಿಕರಿಗೆ ಮುಂಚಿತವಾಗಿ ತಿಳಿಸಬೇಕು. ಆ ಕುರಿತು ಎಲ್ಲಿಯಾದರೂ ಲೋಪದೋಷಗಳಾದರೆ, ಇಂದು ಮುಧೋಳದಲ್ಲಿ ನಡೆಯಲಿರುವ ಹೆಸ್ಕಾಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು. ಯಾವುದೇ ಕಾರಣಕ್ಕೂ ಗ್ರಾಹಕರಿಗೆ ಮತ್ತು ರೈತರಿಗೆ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.