ADVERTISEMENT

ಕೋಲಾರ: ಕೆರೆಯಲ್ಲಿ ತೇಲುವ ಸೌರಫಲಕ!

ರಾಜ್ಯದಲ್ಲಿಯೇ ಮೊದಲ ಪ್ರಾಯೋಗಿಕ ಅನುಷ್ಠಾನ

ಕೆ.ಓಂಕಾರ ಮೂರ್ತಿ
Published 5 ಜೂನ್ 2025, 0:00 IST
Last Updated 5 ಜೂನ್ 2025, 0:00 IST
ತೇಲುವ ಸೌರ ಫಲಕ ಅಳವಡಿಸಲು ಉದ್ದೇಶಿಸಿರುವ ಕೋಲಾರ ತಾಲ್ಲೂಕಿನ ಸೋಮಾಂಬುಧಿ ಅಗ್ರಹಾರ ಕೆರೆ
ತೇಲುವ ಸೌರ ಫಲಕ ಅಳವಡಿಸಲು ಉದ್ದೇಶಿಸಿರುವ ಕೋಲಾರ ತಾಲ್ಲೂಕಿನ ಸೋಮಾಂಬುಧಿ ಅಗ್ರಹಾರ ಕೆರೆ   

ಕೋಲಾರ: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕೆರೆಯಲ್ಲಿ ತೇಲುವ ಸೌರವಿದ್ಯುತ್‌ ಘಟಕ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ ಕೈಗೊಂಡಿದ್ದು, ಕೋಲಾರದಲ್ಲಿ ಪ್ರಾಯೋಗಿಕ ಅನುಷ್ಠಾನಕ್ಕೆ ಸಿದ್ಧತೆ ನಡೆದಿದೆ.

ಕೋಲಾರ ತಾಲ್ಲೂಕಿನ ಸುಗಟೂರು ಹೋಬಳಿಯ ಸೋಮಾಂಬುಧಿ ಅಗ್ರಹಾರ ಕೆರೆ ನೀರಿನ ಮೇಲೆ ಸೌರಫಲಕ ಅಳವಡಿಸಿ ವಿದ್ಯುತ್‌ ಉತ್ಪಾದಿಸಲು ಸಣ್ಣ ನೀರಾವರಿ ಇಲಾಖೆಯಿಂದ ಟೆಂಡರ್‌ ಪ್ರಕ್ರಿಯೆ ಆರಂಭವಾಗಿದೆ. 

ಕೆ.ಸಿ.ವ್ಯಾಲಿ ಯೋಜನೆ ಬಳಿಕ ಈ ಕೆರೆಯಲ್ಲಿ ವರ್ಷವಿಡೀ ನೀರು ತುಂಬಿಕೊಂಡಿರುವ ಕಾರಣ ಸೌರ ಘಟಕ ಅಳವಡಿಸಲು ಆಯ್ಕೆ ಮಾಡಲಾಗಿದೆ. 

ADVERTISEMENT

ಸುಮಾರು ಒಂದು ಸಾವಿರ ಹೆಕ್ಟೇರ್‌ ವಿಸ್ತೀರ್ಣ ಹೊಂದಿರುವ ಈ ಕೆರೆ ಜಿಲ್ಲೆಯಲ್ಲೇ ದೊಡ್ಡ ಹಾಗೂ ವಿಶಾಲವಾಗಿದ್ದು ಕೆರೆಗಳಲ್ಲಿ ಒಂದಾಗಿದೆ. ಉತ್ತಮ ಬಿಸಿಲು ಬೀಳುವ ಪ್ರದೇಶವೂ ಇದಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುತ್ತಿರುವ ಕಾರಣ ಹಲವಾರು ಬಾರಿ ಈ ಕೆರೆ ತುಂಬಿ ಕೋಡಿ ಒಡೆದಿತ್ತು. ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಿಂದ ಮಳೆಗಾಲದಲ್ಲಿ ಹರಿಯುವ ಪಾಲಾರ್ ನದಿ ಜಾಡಿನಲ್ಲಿ ಸೋಮಾಂಬುಧಿ ಎಸ್‌.ಅಗ್ರಹಾರ ಕೆರೆ ಸಿಗುತ್ತದೆ.

ಕೋಲಾರದ ಯಶಸ್ಸಿನ ಆಧಾರದ ಮೇರೆಗೆ ರಾಜ್ಯದ ವಿವಿಧೆಡೆ ಇಲಾಖೆ ವ್ಯಾಪ್ತಿಯಲ್ಲಿರುವ 100 ಎಕರೆಗೂ ಹೆಚ್ಚಿನ ವಿಸ್ತೀರ್ಣದ 40ಕ್ಕೂ ಹೆಚ್ಚು ಕೆರೆಗಳಲ್ಲಿ ತೇಲುವ ಸೌರ ಘಟಕ ಅಳವಡಿಸಲು ಸರ್ಕಾರ ಮುಂದಾಗಲಿದೆ. ಈ ಮೂಲಕ 2,500 ಮೆಗಾ ವಾಟ್‌ ವಿದ್ಯುತ್‌ ಉತ್ಪಾದಿಸುವ ಗುರಿ ಹೊಂದಿದೆ.

‘ಇಲಾಖೆಯಲ್ಲಿ ಕೆ.ಸಿ.ವ್ಯಾಲಿ ಹಾಗೂ ಎಚ್‌.ಎನ್‌.ವ್ಯಾಲಿಗೆ ಸಂಬಂಧಿಸಿದಂತೆ ನೀರು ಹರಿಸುವ ಕಾರ್ಯಕ್ಕೆ ವಿದ್ಯುತ್‌ ಬಳಸುತ್ತಿದ್ದು, ಕೋಟ್ಯಂತರ ರೂಪಾಯಿ ಶುಲ್ಕ ಬರುತ್ತಿದೆ. ಹೀಗಾಗಿ, ಖರ್ಚು ತಗ್ಗಿಸುವ ನಿಟ್ಟಿನಲ್ಲಿ ಪರ್ಯಾಯವಾಗಿ ಕೆರೆ ನೀರಿನ ಮೇಲೆ ಸೌರ ಫಲಕ ಅಳವಡಿಸುವ ತೀರ್ಮಾನಕ್ಕೆ ಬರಲಾಗಿದೆ. ವಿದ್ಯುತ್‌ ಉತ್ಪಾದಿಸಿ ವಿದ್ಯುತ್‌ ನಿಗಮದ ಗ್ರಿಡ್‌ಗೆ ಕೊಡಲಾಗುವುದು’ ಎಂದು ಸಣ್ಣ ನೀರಾವರಿ ಇಲಾಖೆ ಪ್ರಭಾರ ಕಾರ್ಯಪಾಲಕ ಎಂಜಿನಿಯರ್‌ ವಿಷ್ಣು ಕಾಮತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿದ್ಯುತ್‌ಗೆ ತಗುಲುವ ವೆಚ್ಚವೂ ಕಡಿಮೆಯಾಗುತ್ತದೆ. ಸ್ವಾವಲಂಬನೆ ಸಾಧಿಸಬಹುದು. ವಿನೂತನ ತಂತ್ರಜ್ಞಾನದ ಸೌರಫಲಕ ಅಳವಡಿಸಿದರೆ ಕೆರೆಯ ನೀರಿನ ಮಟ್ಟ ಹೆಚ್ಚು ಕಡಿಮೆಯಾದರೂ ಯಾವುದೇ ಸಮಸ್ಯೆ ಆಗುವುದಿಲ್ಲ’ ಎಂದರು.

ತೇಲುವ ಸೌರ ಫಲಕ ಅಳವಡಿಸಲು ಉದ್ದೇಶಿಸಿರುವ ಸಣ್ಣ ನೀರಾವರಿ ಇಲಾಖೆ
ಕೆರೆಗಳಲ್ಲಿ ತೇಲುವ ಸೌರ ಘಟಕ ಕರ್ನಾಟಕದಲ್ಲಿ ಈವರೆಗೆ ಎಲ್ಲೂ ಇಲ್ಲ. ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಜಲಾಶಯಗಳ ಹಿನ್ನೀರಿನಲ್ಲಿ ದೊಡ್ಡ ಕೆರೆಗಳಲ್ಲಿ ಇಂಥ ವ್ಯವಸ್ಥೆ ಇದೆ
-ವಿಷ್ಣು ಕಾಮತ್‌, ಕಾರ್ಯಪಾಲಕ ಎಂಜಿನಿಯರ್‌ (ಪ್ರಭಾರ) ಸಣ್ಣ ನೀರಾವರಿ ಇಲಾಖೆ

ದೇಶದ ಎಲ್ಲೆಲ್ಲಿ ತೇಲುವ ಸೌರಫಲಕ?

* ತೆಲಂಗಾಣದ ರಾಮಗುಂಡಂ ಬಳಿ. ಇದು ದೇಶದ ಮೊದಲ ತೇಲುವ ಘಟಕ

* ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ನರ್ಮದಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಓಂಕಾರೇಶ್ವರ ಜಲಾಶಯದ ಹಿನ್ನೀರಿನಲ್ಲಿ 

*ತೇಲುವ ಸೌರ ಘಟಕವಿದೆ. ಕೇರಳದ ವಯನಾಡಿನ ಬಾಣಾಸುರ್‌ ಸಾಗರ ಜಲಾಶಯದಲ್ಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.