ADVERTISEMENT

ಪತ್ರಿಕಾ ಸ್ವಾತಂತ್ರ್ಯಸೂಚ್ಯಂಕ: ದೇಶದ ಸ್ಥಿತಿ ಕಳವಳಕಾರಿ: ಪಿ.ಸಾಯಿನಾಥ್ ಕಳವಳ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2024, 20:19 IST
Last Updated 1 ಏಪ್ರಿಲ್ 2024, 20:19 IST
<div class="paragraphs"><p>ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಚಿತ್ರದುರ್ಗದಲ್ಲಿ ಸೋಮವಾರ ಏರ್ಪಡಿಸಿದ್ದ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪತ್ರಕರ್ತರಾದ ಮಲ್ಲಿಗೆ ಮಾಚಮ್ಮ, ವಿ.ವೆಂಕಟೇಶ್‌, ಬಿ.ಎಂ.ಬಶೀರ್‌, ಕುಂತಿನಾಥ ಕಲಮನಿ, ಸಿ.ಜಿ.ಮಂಜುಳಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. </p></div>

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಚಿತ್ರದುರ್ಗದಲ್ಲಿ ಸೋಮವಾರ ಏರ್ಪಡಿಸಿದ್ದ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪತ್ರಕರ್ತರಾದ ಮಲ್ಲಿಗೆ ಮಾಚಮ್ಮ, ವಿ.ವೆಂಕಟೇಶ್‌, ಬಿ.ಎಂ.ಬಶೀರ್‌, ಕುಂತಿನಾಥ ಕಲಮನಿ, ಸಿ.ಜಿ.ಮಂಜುಳಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

   

ಚಿತ್ರದುರ್ಗ: ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ ಪ್ರತಿ ವರ್ಷವೂ ಕುಸಿತದ ಹಂತದಲ್ಲಿದೆ. ಯಾವುದೇ ಪಕ್ಷದ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಲೂ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಸುಧಾರಣೆ ಕಾಣುತ್ತಿಲ್ಲ ಎಂದು ಪತ್ರಕರ್ತ ಪಿ.ಸಾಯಿನಾಥ್‌ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ADVERTISEMENT

ಪ್ಯಾರಿಸ್‌ನ ‘ರಿಪೋಟರ್ಸ್‌ ವಿದೌಟ್‌ ಬಾರ್ಡರ್ಸ್‌’ ಸಂಸ್ಥೆ ಈ ಸೂಚ್ಯಂಕವನ್ನು ಪ್ರತಿ ವರ್ಷ ಬಿಡುಗಡೆ ಮಾಡುತ್ತಿದೆ. 1990 ದಶಕಲ್ಲಿದ್ದ ಸೂಚ್ಯಂಕ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಇನ್ನಷ್ಟು ಕುಸಿಯಿತು. ಸೂಚ್ಯಂಕದಲ್ಲಿ ಸುಧಾರಣೆ ತರಬೇಕಾದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಮತ್ತಷ್ಟು ಪಾತಾಳಕ್ಕೆ ಇಳಿಯಿತು. ಪ್ರತಿ ವರ್ಷವೂ ಪತ್ರಿಕಾ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಿದ್ದೇವೆ’ ಎಂದು ಆತಂಕ ಹೊರಹಾಕಿದರು.

‘2021ರ ಸೂಚ್ಯಂಕದಲ್ಲಿ ವಿಶ್ವದ 180 ದೇಶಗಳ ಪೈಕಿ ಭಾರತ 142ನೇ ಸ್ಥಾನದಲ್ಲಿತ್ತು. ಈ ಬಗ್ಗೆ ಆತಂಕಗೊಂಡ ವಿಶ್ವಗುರು, ‘ಪ್ಯಾರಿಸ್‌ನಲ್ಲಿ ಕುಳಿತವರು ಮಾಡುತ್ತಿರುವ ದೇಶದ್ರೋಹ’ ಎಂದು ಟೀಕಿಸಿದರು. ಇದನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿತ್ತು. ಅದರಲ್ಲಿ ಪತ್ರಕರ್ತರಿಗಿಂತ ಅಧಿಕಾರಿಗಳೇ ಹೆಚ್ಚಾಗಿದ್ದರು. ಕಾಶ್ಮೀರದಲ್ಲಿ ಅಂತರ್ಜಾಲ ಸ್ಥಗಿತಗೊಳಿಸಿದ್ದು, ಅಲ್ಲಿನ ಪತ್ರಕರ್ತರ ಸ್ಥಿತಿಯ ಬಗ್ಗೆ ಸಮಿತಿ ಗಮನ ಹರಿಸಲೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರ ದೊಡ್ಡ ಉದ್ಯಮವಾಗಿ ಪರಿವರ್ತನೆ ಹೊಂದಿದೆ. ಅತಿ ಹೆಚ್ಚು ಮಾಧ್ಯಮಗಳನ್ನು ಹೊಂದಿದ ಅಂಬಾನಿ, ಬಿರ್ಲಾ ತರಹದ ಬಂಡವಾಳಶಾಹಿಗಳು ಸರ್ಕಾರಕ್ಕೆ ಹತ್ತಿರದಲ್ಲಿದ್ದಾರೆ. ದೇಶದ ಪ್ರಧಾನಿ 10 ವರ್ಷಗಳಿಂದ ಪತ್ರಿಕಾಗೋಷ್ಠಿ ನಡೆಸದಿದ್ದರೂ ಮಾಧ್ಯಮ ಪ್ರಶ್ನಿಸುತ್ತಿಲ್ಲ. ಭಾರತದಲ್ಲಿ ಮಾಧ್ಯಮಕ್ಕೆ ಸರ್ಕಾರಕ್ಕಿಂತ ಹೆಚ್ಚಾಗಿ ಮಾಲೀಕರು ಅಡ್ಡಿಯಾಗಿದ್ದಾರೆ’ ಎಂದು ಹೇಳಿದರು.

‘ಕೋವಿಡ್‌ನಿಂದ ಭಾರತದಲ್ಲಿ ಎಷ್ಟು ಜನರು ಮೃತಪಟ್ಟರು ಎಂಬುದನ್ನು ಯಾವ ಮಾಧ್ಯಮವೂ ಸರಿಯಾಗಿ ವರದಿ ಮಾಡಿಲ್ಲ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಬಿಡುಗಡೆ ಮಾಡಿದ ವರದಿಯ ಪ್ರಕಾರ ದೇಶದಲ್ಲಿ ಕೋವಿಡ್‌ಗೆ 47 ಲಕ್ಷ ಜನರು ಬಲಿಯಾಗಿದ್ದಾರೆ. ಕೇಂದ್ರ ಸರ್ಕಾರದ ವರದಿಯ ಪ್ರಕಾರ ಮೃತಪಟ್ಟವರ ಸಂಖ್ಯೆ 4.80 ಲಕ್ಷ ಮಾತ್ರ. ಸರ್ಕಾರದ ಈ ಬೋಗಸ್‌ ಅಂಕಿ–ಅಂಶವನ್ನು ಮಾಧ್ಯಮಗಳು ಪ್ರಶ್ನಿಸಲಿಲ್ಲ’ ಎಂದರು.

ಎಸ್‌ಆರ್‌ಎಸ್‌ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್‌, ಉಪಾಧ್ಯಕ್ಷರಾದ ಅಜ್ಜಮಾಡ ರಮೇಶ್‌ ಕುಟ್ಟಪ್ಪ, ಭವಾನಿಸಿಂಗ್‌ ಠಾಕೂರ್‌, ಕಾರ್ಯದರ್ಶಿ ನಿಂಗಪ್ಪ ಚಾವಡಿ, ಖಜಾಂಚಿ ವಾಸುದೇವ ಹೊಳ್ಳ, ಬಿ.ವಿ.ಮಲ್ಲಿಕಾರ್ಜುನಯ್ಯ, ಜಿಲ್ಲಾ ಘಟಕದ ಅಧ್ಯಕ್ಷ ದಿನೇಶ್‌ ಗೌಡಗೆರೆ ಇದ್ದರು.

‘ಮರೆಯಾದ ಹೊಣೆಗಾರಿಕೆ’

ಮಾಧ್ಯಮ ಕ್ಷೇತ್ರ ವಾಣಿಜ್ಯೀಕರಣದ ಭರಾಟೆಯಲ್ಲಿ ಸಾಮಾಜಿಕ ಹೊಣೆಗಾರಿಕೆಯನ್ನು ಮರೆಯುತ್ತಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ ಬೇಸರ ವ್ಯಕ್ತಪಡಿಸಿದರು. ‘ಖಾಸಗೀಕರಣ ಮತ್ತು ರಾಜಕಾರಣಿಗಳ ಮಾಲೀಕತ್ವ ಮಾಧ್ಯಮ ಕ್ಷೇತ್ರಕ್ಕೆ ಸವಾಲಾಗಿವೆ. ರಾಜಕೀಯ ಸಿನಿಮಾ ಕ್ರಿಕೆಟ್‌ ಮತ್ತು ಅಪರಾಧ ಮಾತ್ರವೇ ವರದಿಯಾಗುತ್ತಿದೆ. ಅಭಿವೃದ್ಧಿ ಮತ್ತು ಸಾಮಾಜಿಕ ಬದಲಾವಣೆ ಮಾಧ್ಯಮದಿಂದ ಮಾತ್ರ ಸಾಧ್ಯ. ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಹಣಗಳಿಕೆಯ ಜತೆಗೆ ಹೊಣೆಗಾರಿಕೆಯೂ ಮುಖ್ಯ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.