ಬೆಂಗಳೂರು: ಉಪನ್ಯಾಸಕರ ಸಾಮಾನ್ಯ ವರ್ಗಾವಣೆ ಸಂದರ್ಭದಲ್ಲಿ ತಪ್ಪು ಮಾಹಿತಿ ನೀಡಿರುವ ಕೆ.ಆರ್. ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಪ್ರತಿಭಾ ಪಾರ್ಶ್ವನಾಥ್ ಅವರನ್ನು ತಕ್ಷಣದಿಂದಲೇ ಹುದ್ದೆಯಿಂದ ಮುಕ್ತಗೊಳಿಸುವಂತೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಇಲಾಖೆಯ ಬೆಂಗಳೂರು ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.
'2024–25ನೇ ಸಾಲಿನ ಸಾಮಾನ್ಯ ವರ್ಗಾವಣೆ ಅವಧಿಯಲ್ಲಿ ಭೌತವಿಜ್ಞಾನ ವಿಷಯದಲ್ಲಿ ಉಪನ್ಯಾಸಕರ ಕಾರ್ಯಭಾರದ ಬಗ್ಗೆ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡಿ ಇಬ್ಬರು ಉಪನ್ಯಾಸಕರು ವರ್ಗಾವಣೆಯಿಂದ ಅವಕಾಶ ವಂಚಿತರಾಗಲು ಪ್ರತಿಭಾ ಪಾರ್ಶ್ವನಾಥ್ ಕಾರಣರಾಗಿದ್ದಾರೆ. ಹೀಗಾಗಿ, ಪ್ರತಿಭಾ ಅವರು ವಹಿಸಿರುವ ಹುದ್ದೆಯನ್ನು ಅವರ ನಂತರ ಸೇವಾ ಜ್ಯೇಷ್ಠತೆಯಲ್ಲಿ ಹಿರಿಯರಾದ ಪ್ರಾಧ್ಯಾಪಕರು, ಸಹ ಅಥವಾ ಸಹಾಯಕ ಪ್ರಾಧ್ಯಾಪಕರೊಬ್ಬರಿಗೆ ಕೂಡಲೇ ವಹಿಸಿ ವರದಿ ನೀಡಬೇಕು’ ಎಂದೂ ನಿರ್ದೇಶನ ನೀಡಿದ್ದಾರೆ.
‘2024–25ನೇ ಸಾಲಿನಲ್ಲಿ ವರ್ಗಾವಣೆ ಪ್ರಕ್ರಿಯೆ ಆರಂಭಕ್ಕೂ ಮೊದಲು ಕೆ. ಆರ್. ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭೌತವಿಜ್ಞಾನ ವಿಷಯದಲ್ಲಿ ಹೆಚ್ಚಿನ ಕಾರ್ಯಭಾರದ ಕಾರಣಕ್ಕೆ ಹುದ್ದೆಗಳು ಖಾಲಿ ಇವೆ ಎಂದು ತೋರಿಸಲಾಗಿತ್ತು. ಆದರೆ, ವರ್ಗಾವಣೆಯ ಕೌನ್ಸೆಲಿಂಗ್ ನಡೆಯುವ ಸಂದರ್ಭದಲ್ಲಿ ಕಾರ್ಯಭಾರ ಅವಧಿಯನ್ನು ಕಡಿಮೆ ತೋರಿಸಿ, ಹುದ್ದೆಗಳು ಖಾಲಿ ಇಲ್ಲ ಎಂದು ತೋರಿಸಲಾಗಿತ್ತು. ಇದರಿಂದಾಗಿ ಈ ಕಾಲೇಜಿಗೆ ವರ್ಗಾವಣೆ ಪಡೆಯುವ ಅವಕಾಶದಿಂದ ಇಬ್ಬರು ಉಪನ್ಯಾಸಕರು ವಂಚಿತರಾಗಿದ್ದರು’ ಎಂದು ಉಪನ್ಯಾಸಕರೊಬ್ಬರು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.