ADVERTISEMENT

ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲರಿಗೆ ಜಿಲ್ಲಾ ಅಧಿಕಾರಿ ಹುದ್ದೆ! ಆಕ್ಷೇಪ

ಶಾಲೆಗಳ ಪ್ರಾಂಶುಪಾಲರನ್ನು ಆಡಳಿತಾತ್ಮಕ ಹುದ್ದೆಗಳಿಗೆ ನೇಮಿಸುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ರಾಜೇಶ್ ರೈ ಚಟ್ಲ
Published 9 ಡಿಸೆಂಬರ್ 2024, 1:06 IST
Last Updated 9 ಡಿಸೆಂಬರ್ 2024, 1:06 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೆಂಗಳೂರು: ಅಲ್ಪಸಂಖ್ಯಾತರ ನಿರ್ದೇಶನಾಲಯ ತನ್ನ ಅಧೀನದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರಾಂಶುಪಾಲರನ್ನು ಆಡಳಿತಾತ್ಮಕ ಹುದ್ದೆಗಳಿಗೆ ನೇಮಿಸುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಪ್ರಸ್ತುತ 31 ಜಿಲ್ಲೆಗಳ ಪೈಕಿ ಎಂಟು ಜಿಲ್ಲೆಗಳಲ್ಲಿ ಪ್ರಾಂಶುಪಾಲರನ್ನು ನಿರ್ದೇಶನಾಲಯವು ಜಿಲ್ಲಾ ಅಧಿಕಾರಿಗಳಾಗಿ ನೇಮಿಸಿದೆ. ಒಬ್ಬ ಪ್ರಾಂಶುಪಾಲರನ್ನು ಮತ್ತು ಒಬ್ಬ ಉಪನ್ಯಾಸಕರನ್ನು ನಿರ್ದೇಶನಾಲಯದಲ್ಲಿ ಸಹಾಯಕ ನಿರ್ದೇಶಕರ ಹುದ್ದೆಗೆ ನಿಯೋಜಿಸಿದೆ.

ADVERTISEMENT

‘ಜಿಲ್ಲಾ ಅಧಿಕಾರಿ ಹುದ್ದೆಗೆ ನೇರವಾಗಿ ಆಯ್ಕೆಗೊಂಡವರಿಗೆ, ಹುದ್ದೆ ಖಾಲಿ ಇದ್ದರೂ ‘ಸ್ಥಳ ನಿರೀಕ್ಷಣೆಯಲ್ಲಿ’ ಇಟ್ಟು, ಆ ಹುದ್ದೆಗೆ ಪ್ರಾಂಶುಪಾಲರ ನೇಮಿಸಲಾಗುತ್ತಿದೆ. ಆಡಳಿತಾತ್ಮಕ ಹುದ್ದೆಗಳಿಗೆ ಶಿಕ್ಷಕರು, ಉಪನ್ಯಾಸಕರು, ಪ್ರಾಂಶುಪಾಲರ ನೇಮಕ ಕಾನೂನುಬಾಹಿರ. ಈ ಬಗ್ಗೆ ನಿರ್ದೇಶನಾಲಯ 2020ರ ಜುಲೈನಲ್ಲಿ ಸುತ್ತೋಲೆ ಹೊರಡಿಸಿದ್ದರು’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಕೆಲವು ಜಿಲ್ಲೆಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಪ್ರಾಂಶುಪಾಲರೇ ಇಲ್ಲ. ಅಲ್ಲಿ ಶಿಕ್ಷಕರಿಗೆ ಪ್ರಾಂಶುಪಾಲ ಹುದ್ದೆಯನ್ನು ಪ್ರಭಾರ ಹೊಣೆ ನೀಡಲಾಗಿದೆ. ಇದು ಶಾಲೆಯ ಶೈಕ್ಷಣಿಕ ಹಿನ್ನಡೆಗೂ ಕಾರಣವಾಗಿದೆ. ಎಸ್ಸೆಸ್ಸೆಲ್ಸಿಯಲ್ಲಿ ಕಳಪೆ ಫಲಿತಾಂಶಕ್ಕೆ ಪ್ರಾಂಶುಪಾಲರನ್ನೇ ಹೊಣೆ ಮಾಡಿ ನಿರ್ದೇಶನಾಲಯ ಇತ್ತೀಚೆಗೆ ನೋಟಿಸ್‌ ನೀಡಿದೆ. ಹೀಗಿರುವಾಗ ಪ್ರಾಂಶುಪಾಲರನ್ನು ಜಿಲ್ಲಾ ಅಧಿಕಾರಿ ಹುದ್ದೆಗೆ ನೇಮಿಸುವುದು ಎಷ್ಟು ಸರಿ’ ಎಂದೂ ಅವರು ಪ್ರಶ್ನಿಸಿದರು.

‘ಪ್ರಾಂಶುಪಾಲರ ಹುದ್ದೆಗಳು ಖಾಲಿ ಇದ್ದರೂ ನೇಮಕ ಮಾಡಲು ನಿರ್ದೇಶನಾಲಯವಾಗಲಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಾಗಲಿ ಮುತುವರ್ಜಿ ವಹಿಸುತ್ತಿಲ್ಲ. ಬದಲಾಗಿ, ಇರುವ ಪ್ರಾಂಶುಪಾಲರನ್ನು ಜಿಲ್ಲಾ ಅಧಿಕಾರಿ ಅಥವಾ ತಾಲ್ಲೂಕು ಅಧಿಕಾರಿ ಹುದ್ದೆಗೆ ನೇಮಕ ಮಾಡುತ್ತಿದೆ. 2024-25 ಸಾಲಿನಲ್ಲಿ ಹೊಸದಾಗಿ 50 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಹಾಗೂ 100 ಮೌಲಾನಾ ಅಜಾದ್ ಮಾದರಿ ಶಾಲೆಗಳನ್ನು ಸರ್ಕಾರ ಆರಂಭಿಸಿದೆ. ಲಭ್ಯವಿರುವ ಪ್ರಾಂಶುಪಾಲರನ್ನು ಈ ಶಾಲೆಗಳಿಗೆ ನಿರ್ದೇಶನಾಲಯ ನೇಮಿಸಿ, ಜವಾಬ್ದಾರಿ ನೀಡಬೇಕಿದೆ’ ಎಂದೂ ಅವರು ಹೇಳಿದರು.

‘ಕಳೆದ ಸಾಲಿನಲ್ಲಿ ಕೆಲವು ವಸತಿ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ತೀರಾ ಕಳಪೆ ದಾಖಲಾಗಿದೆ. ಪ್ರಾಂಶುಪಾಲರನ್ನು ಆಡಳಿತಾತ್ಮಕ ಹುದ್ದೆಗಳಿಗೆ ನಿಯೋಜಿಸುವ ಪ್ರಕ್ರಿಯೆ ಮುಂದುವರೆದರೆ ಫಲಿತಾಂಶದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ. ಅಲ್ಲದೆ, ಹುದ್ದೆಯ ಶ್ರೇಣಿಯನ್ನು ಅನುಸರಿಸಿದೆ ಕೆಳ ಹಂತದ ಸಿಬ್ಬಂದಿಯನ್ನು ಜಿಲ್ಲಾ ಮಟ್ಟದ ಅಧಿಕಾರಿಯಾಗಿ ನೇಮಿಸುವುದರಿಂದ ಆಡಳಿತಾತ್ಮಕ ದುಷ್ಪರಿಣಾಮಗಳೂ ಉಂಟಾಗಲಿದೆ’ ಎಂದೂ ಅವರು ಆತಂಕ ವ್ಯಕ್ತಪಡಿಸಿದರು.

ತಾನು ಹೊರಡಿಸಿದ್ದ ಸುತ್ತೋಲೆಯನ್ನೇ ಪಾಲಿಸದ ನಿರ್ದೇಶನಾಲಯ

ಶಾಲಾ ಶಿಕ್ಷಕರು, ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಮತ್ತು ಪ್ರಾಂಶುಪಾಲರನ್ನು ಬೋಧಕೇತರ ಕಾರ್ಯಗಳಿಗೆ ನಿಯೋಜನೆ ಮಾಡಬಾರದೆಂದು ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಹಲವು ತೀರ್ಪುಗಳಲ್ಲಿ ಹೇಳಿವೆ.

ರಾಜ್ಯ ಹೈಕೋರ್ಟ್‌ 2011ರ ಜುಲೈ 22ರ ಆದೇಶದಲ್ಲಿ, ಈ ರೀತಿ ನಿಯೋಜನೆ ಹಿಂಪಡೆಯುವಂತೆ ತಿಳಿಸಿದೆ. ಈ ಆದೇಶವನ್ನು ಉಲ್ಲೇಖಿಸಿ 2011ರ ನ. 8ರಂದು ಸುತ್ತೋಲೆ ಹೊರಡಿಸಿದ್ದ ಶಿಕ್ಷಣ ಇಲಾಖೆ, ಯಾವುದೇ ಕಾರಣಕ್ಕೂ ಬೋಧಕೇತರ ಹುದ್ದೆಗಳಿಗೆ ನಿಯೋಜನೆ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. 

ಹೈಕೋರ್ಟ್‌ ಆದೇಶ ಉಲ್ಲೇಖಿಸಿ 2020 ಜುಲೈ 30ರಂದು ಸುತ್ತೋಲೆ ಹೊರಡಿಸಿರುವ  ಅಲ್ಪಸಂಖ್ಯಾತರ ನಿರ್ದೇಶನಾಲಯ, ತನ್ನ ಅಧೀನದಲ್ಲಿರುವ ಶಾಲೆಗಳ ಶಿಕ್ಷಕರು, ಉಪನ್ಯಾಸಕರು, ಪ್ರಾಂಶುಪಾಲರನ್ನು ಬೋಧನೆ ಹೊರತುಪಡಿಸಿ ಬೇರೆ ಉದ್ದೇಶಗಳಿಗೆ ನಿಯೋಜಿಸಬಾರದು ಎಂದು ಎಲ್ಲ ಜಿಲ್ಲೆಗಳ ಜಿಲ್ಲಾ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆಯನ್ನೇ ನಿರ್ದೇಶನಾಲಯ ಉಲ್ಲಂಘಿಸಿದೆ!

***

ಈ ಬಗ್ಗೆ ನಿರ್ದೇಶಕರನ್ನು ಕೇಳಿ. ಅವರಿಗೆ ಈ ವಿಷಯ ಗೊತ್ತಿದೆ. ಸದ್ಯಕ್ಕೆ ನನ್ನಲ್ಲಿ ಮಾಹಿತಿ ಇಲ್ಲ. ಮಾಹಿತಿ ತೆಗೆದುಕೊಂಡು ಮಾತನಾಡುತ್ತೇನೆ.
– ಮನೋಜ್ ಜೈನ್, ಕಾರ್ಯದರ್ಶಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ
ಈ ರೀತಿಯ ವರ್ಗಾವಣೆ, ನಿಯೋಜನೆ ನನ್ನಿಂದ ಆಗಿಲ್ಲ. ನನ್ನ ಹಂತದಲ್ಲಿಯೂ ಆಗಿಲ್ಲ. ಸರ್ಕಾರದ ಹಂತದಲ್ಲಿ ನಡೆಯುತ್ತಿದೆ
ಜೀಲಾನಿ ಎಚ್‌. ಮೊಕಾಶಿ, ನಿರ್ದೇಶಕ, ಅಲ್ಪಸಂಖ್ಯಾತರ ನಿರ್ದೇಶನಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.