ಬೆಂಗಳೂರು: ರಾಜ್ಯ ಪಠ್ಯಕ್ರಮದಲ್ಲಿ ತ್ರಿಭಾಷಾ ಸೂತ್ರಕ್ಕೇ ಆದ್ಯತೆ ನೀಡಬೇಕು. ದ್ವಿಭಾಷಾ ಸೂತ್ರ ಜಾರಿ ಮಾಡಬಾರದು ಎಂದು ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘ ಒತ್ತಾಯಿಸಿದೆ.
ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಸಂಚಾಲಕ ಡಿ. ಶಶಿಕುಮಾರ್, ರಾಜ್ಯ ಪಠ್ಯಕ್ರಮ ಅನುಸರಿಸುವ ಶಾಲೆಗಳು ಕನ್ನಡವನ್ನು ಪ್ರಥಮ ಭಾಷೆಯಾಗಿ, ಇಂಗ್ಲಿಷ್ ಮತ್ತು ಹಿಂದಿಯನ್ನು ದ್ವಿತೀಯ ಹಾಗೂ ತೃತೀಯ ಭಾಷೆಯಾಗಿ ಅನುಸರಿಸುತ್ತಿವೆ. ಬೇರೆ ರಾಜ್ಯಗಳಿಂದ ಬಂದ, ಬೇರೆ ಮಾತೃಭಾಷಿಕ ಕುಟುಂಬಗಳ ಮಕ್ಕಳು ಅವರ ಮಾತೃಭಾಷೆಯನ್ನು ಕಲಿಯುತ್ತಿದ್ದಾರೆ. ತ್ರಿಭಾಷಾ ಸೂತ್ರವಿದ್ದರೆ ಎಲ್ಲರಿಗೂ ಅನುಕೂಲವಾಗುತ್ತದೆ. ಕನ್ನಡ ಕಡ್ಡಾಯ ಇರುವಾಗ ತ್ರಿಭಾಷಾ ಸೂತ್ರದಿಂದ ಮಕ್ಕಳಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಸಾಕಷ್ಟು ಭಾಷೆಗಳನ್ನು ಕಲಿಸಬಹುದು ಎಂದರು.
ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳು, ನವೋದಯ, ಕೇಂದ್ರೀಯ ವಿದ್ಯಾಲಯ, ಸೇನಾ ಶಾಲೆಗಳ ಮಕ್ಕಳು ಮೂರೂ ಭಾಷೆಗಳಲ್ಲೂ ಪ್ರಭುತ್ವ ಸಾಧಿಸುತ್ತಾರೆ. ರಾಷ್ಟ್ರಮಟ್ಟ, ಪ್ರಾದೇಶಿಕಮಟ್ಟದಲ್ಲಿ ಅವರಿಗೆ ಹೆಜ್ಜೆ ಗುರುತು ಮೂಡಿಸಲು ವಿಪುಲ ಅವಕಾಶಗಳು ಸಿಗುತ್ತವೆ. ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಗೆ ತಂದರೆ ರಾಜ್ಯ ಪಠ್ಯ ಕ್ರಮದ ಶಾಲೆಗಳ ಮಕ್ಕಳಲ್ಲಿ ಅಸಮಾನತೆ ಸೃಷ್ಟಿಯಾಗುತ್ತದೆ. ಶೈಕ್ಷಣಿಕ ಶಕ್ತಿ ಕುಂದುತ್ತದೆ ಎಂದು ಹೇಳಿದರು.
ಹಿಂದಿಯನ್ನು ಕಡ್ಡಾಯಗೊಳಿಸುವ ಅಗತ್ಯವಿಲ್ಲ. ಮೂರನೇ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿದರೆ ಸಾಕು. ದೇಶದಲ್ಲಿ ಶೈಕ್ಷಣಿಕ ಸಮಾನತೆ ಇದ್ದರೆ ಮಕ್ಕಳಲ್ಲಿ ರಾಷ್ಟ್ರ ಹಾಗೂ ಜಾಗತಿಕ ಸ್ಪರ್ಧಾ ಸಾಮರ್ಥ್ಯವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಹಾಗೆ ಮಾಡದಿದ್ದರೆ ಮಕ್ಕಳು ಹಾಗೂ ಪೋಷಕರ ಮೂಲಭೂತ ಹಕ್ಕನ್ನು ಕಸಿದುಕೊಂಡಂತೆ ಆಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.