ADVERTISEMENT

ಜ. 6ರಂದು ಖಾಸಗಿ ಅನುದಾನರಹಿತ ಶಾಲೆಗಳ ಒಕ್ಕೂಟ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 11:57 IST
Last Updated 4 ಜನವರಿ 2021, 11:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬುಧವಾರ (ಜ. 6) ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ‘ಮಾನ್ಯತೆ ಪಡೆದ ಖಾಸಗಿ ಅನುದಾನರಹಿತ ಶಾಲೆಗಳ ಒಕ್ಕೂಟ’ (ರುಪ್ಸಾ) ನಿರ್ಧರಿಸಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ, ‘ರಾಜ್ಯದ 30 ಜಿಲ್ಲೆಗಳಿಂದ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಹಾಗೂ ಸಿಬ್ಬಂದಿಗಳು ಸೇರಿ 8 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಅಂದು ಬೆಳಿಗ್ಗೆ 10 ಗಂಟೆಗೆ ಮೌರ್ಯ ವೃತ್ತದಿಂದ ರ‍್ಯಾಲಿ ಹೊರಡಲಿದೆ’ ಎಂದರು.

‘ಪ್ರತಿಭಟನೆ ನಡೆಯುವ ದಿನ ಆಫ್‌ಲೈನ್ - ಆನ್‌ಲೈನ್ ಕ್ಲಾಸ್‌ಗಳು ಎಂದಿನಂತೆ ನಡೆಯಲಿವೆ. ತರಗತಿಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಪ್ರತಿ ಶಾಲೆಯಿಂದ ಒಬ್ಬರು‌ ಅಥವಾ ಇಬ್ಬರು ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ’ ಎಂದೂ ಹೇಳಿದರು.

ADVERTISEMENT

‘ಮೂರು ತಿಂಗಳಿಂದ ಸರ್ಕಾರಕ್ಕೆ ನಮ್ಮ ಬೇಡಿಕೆ ಈಡೇರಿಸುವಂತೆ ಮನವಿ ಕೊಟ್ಟಿದ್ದೆವು. ಆದರೆ ಸರ್ಕಾರ ಸ್ಪಂದಿಸುತ್ತಿಲ್ಲ. 15 ಬೇಡಿಕೆಗಳಲ್ಲಿ ಎರಡು ಬೇಡಿಕೆಗಳನ್ನು ಮಾತ್ರ ಸರ್ಕಾರ ಈಡೇರಿಸಿದೆ. ಉಳಿದ 13 ಬೇಡಿಕೆಗಳು ಹಾಗೇ ಉಳಿದಿವೆ’ ಎಂದು ಸರ್ಕಾರದ ನಡೆಗೆ ಅವರು ಬೇಸರ ವ್ಯಕ್ತಪಡಿಸಿದರು.

‘ರುಪ್ಸಾ ಅಡಿಯಲ್ಲಿ ನೋಂದಣಿಗೊಂಡಿರುವ ಶಾಲೆಗಳ ಮಾಹಿತಿಯನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು 12,998 ಶಾಲೆಗಳು ಅಧಿಕೃತವಾಗಿ ರುಪ್ಸಾ ಶಾಲಾ ಒಕ್ಕೂಟದಲ್ಲಿ ನೊಂದಣಿ ಆಗಿವೆ. ಒಕ್ಕೂಟದ ವೆಬ್‌ಸೈಟ್‌ನಲ್ಲಿ ನೊಂದಾಯಿತ ಶಾಲೆಗಳ ಬಗ್ಗೆ ಮಾಹಿತಿ ಲಭ್ಯವಿದೆ’ ಎಂದರು.

‘ಇದು ಸಾಂಕೇತಿಕ ಪ್ರತಿಭಟನೆಯಾಗಿದ್ದು, ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಉಗ್ರ ಹೋರಾಟ ಮಾಡಲಾಗುವುದು. 'ಶಿಕ್ಷಣ ಮಂತ್ರಿಗಳೇ ತೊಲಗಿ' ಎಂದೂ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವುದು. ಶಿಕ್ಷಣ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು ಅಥವಾ ಸರ್ಕಾರ ಅವರನ್ನು ಇಲಾಖೆಯಿಂದ ಬದಲಾಯಿಸಬೇಕು’ ಎಂದೂ ಆಗ್ರಹಿಸಿದರು.

‘6 ರಂದು ನಡೆಯುವ ಪ್ರತಿಭಟನೆಗೆ ಅನೇಕ ಸಂಘಟನೆಗಳು ಬೆಂಬಲ ನೀಡಿವೆ. ಶಿಕ್ಷಕರು ಮತ್ತು ಆಡಳಿತ ವರ್ಗ, ಅಲ್ಪಸಂಖ್ಯಾತರ ಅಸೋಸಿಯೇಷನ್, ಟೀಚರ್ಸ್ ಅಂಡ್ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಮುಂತಾದ ಸಂಘಟನೆಗಳು ಬೆಂಬಲ ನೀಡಿವೆ’ ಎಂದೂ ಹೇಳಿದರು.

‘ರುಪ್ಸಾ’ದ ಬೇಡಿಕೆಗಳು: ಸಂಕಷ್ಟದಲ್ಲಿರುವ ಖಾಸಗಿ ಶಾಲೆಗಳ ಶಿಕ್ಷಕರಿಗೆ ಪರಿಹಾರ ನೀಡಲು ಕನಿಷ್ಠ ಒಂದು ಸಾವಿರ ಕೋಟಿಯ ಪ್ಯಾಕೇಜ್ ಘೋಷಿಸಬೇಕು, ಸಂಬಳ ಇಲ್ಲದ ಶಿಕ್ಷಕರಿಗೆ ಪ್ರತಿ ತಿಂಗಳ ₹ 10 ಸಾವಿರ ನೀಡಬೇಕು, 1985ರಿಂದ ಅನುದಾನರಹಿತ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು, 2020ರ ನ. 11ರಂದು ಹೊರಡಿಸಿರುವ ಸುತ್ತೋಲೆ‌ಯನ್ನು ಸರ್ಕಾರ ಮರು ಪರಿಶೀಲಿಸಬೇಕು, ಶಾಲೆಗಳ ಮಾನ್ಯತೆ ನವೀಕರಣವನ್ನು ಅದಾಲತ್ ರೂಪದಲ್ಲಿ ವಿಲೇವಾರಿ ಮಾಡಬೇಕು, ಗಡಿಭಾಗದ ಶಾಲೆಗಳ ಮುಚ್ಚುವ ನಿರ್ಧಾರ ಹಿಂಪಡೆಯಬೇಕು, 2020-21 ನೇ ಸಾಲಿನ ಆರ್‌ಟಿಇ ಹಣ ಒಂದೇ ಕಂತಿನಲ್ಲಿ ಮರು ಪಾವತಿ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.