ADVERTISEMENT

ಪ್ರಿಯಾಂಕ್‌ ಖರ್ಗೆ ಕಾನ್ವೆಂಟ್‌ ರಾಜಕಾರಣಿ: ಸುನಿಲ್ ಕುಮಾರ್ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 16:07 IST
Last Updated 4 ಜೂನ್ 2022, 16:07 IST
ವಿ. ಸುನೀಲ್ ಕುಮಾರ್
ವಿ. ಸುನೀಲ್ ಕುಮಾರ್   

ಬೆಂಗಳೂರು: ‘ಬೆಂಗಳೂರಿನಲ್ಲಿ ಹುಟ್ಟಿ, ಬೆಳೆದಿರುವ ಪ್ರಿಯಾಂಕ್‌ ಖರ್ಗೆ ‘ಕಾನ್ವೆಂಟ್‌ ರಾಜಕಾರಣಿ’. ‘ದಲಿತ’ ಎನ್ನುವ ಪದ ಅವರ ಕುಟುಂಬಕ್ಕೆ ರಾಜಕೀಯ ಅಧಿಕಾರ ಕಾಪಾಡಿಕೊಳ್ಳಲು ಬೇಕಾದ ಅಸ್ತ್ರವಷ್ಟೆ. ನಿಜವಾದ ದಲಿತರ ನೋವು– ನಲಿವು ಅವರಿಗೆ ಗೊತ್ತಿಲ್ಲ’ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್‌ ಖರ್ಗೆ ಮೀಸಲು ಕ್ಷೇತ್ರಗಳನ್ನು ತಮ್ಮ ಜಹಗೀರಿನಂತೆ ಬಳಸಿಕೊಂಡಿದ್ದಾರೆ. ಸಂವಿಧಾನದ ಆಶಯಗಳ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಅವರು ಬದ್ಧತೆ ಇದ್ದಿದ್ದರೆ ತಮ್ಮ ಕ್ಷೇತ್ರಗಳನ್ನು ಸಾಮಾನ್ಯ ದಲಿತರಿಗೆ ಬಿಟ್ಟುಕೊಟ್ಟು, ಗೆಲ್ಲಿಸಬೇಕಿತ್ತು. ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಪ್ರತಿಪಾದಿಸಿದ ಸಮಾನತೆಯ ಸಿದ್ಧಾಂತದಲ್ಲಿ ನಿಜವಾಗಿಯೂ ನಂಬಿಕೆ ಇದ್ದರೆ ಮುಂದಿನ ಚುನಾವಣೆಗಳಲ್ಲಿ ಇಬ್ಬರೂ ಕ್ಷೇತ್ರ ಬಿಟ್ಟುಕೊಡಲಿ’ ಎಂದು ಸವಾಲು ಹಾಕಿದ್ದಾರೆ.

‘ಆರ್‌ಎಸ್‌ಎಸ್ ಕುರಿತು ಪ್ರಶ್ನೆ ಮಾಡುವ ಮುನ್ನ ಇತಿಹಾಸ ಓದಿ ಸತ್ಯ ತಿಳಿದುಕೊಳ್ಳಬೇಕು. ಅಂಬೇಡ್ಕರ್‌ ಅವರನ್ನು ಕಾಂಗ್ರೆಸ್‌ ಹೇಗೆ ನಡೆಸಿಕೊಂಡಿತ್ತು ಎಂಬುದನ್ನು ಓದಿ ತಿಳಿಯಿರಿ. ಆ ಬಳಿಕ ಸಂಘ ಪರಿವಾರದ ಬಗ್ಗೆ ಪ್ರಶ್ನೆ ಮಾಡಿ’ ಎಂದು ಸುನಿಲ್ ಕುಮಾರ್‌ ಹೇಳಿದ್ದಾರೆ.

ADVERTISEMENT

‘ರಾಜ್ಯದಾದ್ಯಂತ ಚಡ್ಡಿ ಸುಡುವ ಅಭಿಯಾನ ನಡೆಸುವಂತೆ ಕಾಂಗ್ರೆಸ್‌ ನಾಯಕರು ಕರೆ ನೀಡಿದ್ದಾರೆ. ದೇಶದೆಲ್ಲೆಡೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಈಗ ಮಾಡಲು ಯಾವುದೇ ಕೆಲಸವಿಲ್ಲ. ಚಡ್ಡಿ ಸುಟ್ಟು ಬೆತ್ತಲಾಗಲು ಹೊರಟಿದ್ದಾರೆ’ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.