
ಬೆಂಗಳೂರು: ‘ಆ್ಯನಿಮೇಷನ್, ವಿಷುಯಲ್ ಎಫೆಕ್ಟ್, ಗೇಮಿಂಗ್ ಕ್ಷೇತ್ರಗಳು ಈಗ ಮನರಂಜನೆಯ ಉದ್ಯಮವಾಗಿ ಉಳಿಯದೆ, ಡಿಜಿಟಲ್, ಸೃಜನಶೀಲತೆ ಹಾಗೂ ಕೃತಕ ಬುದ್ಧಿಮತ್ತೆಯ ಆರ್ಥಿಕತೆಯನ್ನು ಮರು ರೂಪಿಸುತ್ತಿವೆ’ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಬಣ್ಣಿಸಿದರು.
ಮೂರು ದಿನಗಳಿಂದ ಇಲ್ಲಿ ನಡೆದ ಬೆಂಗಳೂರು ಜಿಎಎಫ್‌ಎಕ್ಸ್ 7ನೇ ಆವೃತ್ತಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮೂಲ ಬೌದ್ಧಿಕ ಆಸ್ತಿ (ಐಪಿ) ಅಭಿವೃದ್ಧಿಪಡಿಸುವವರಿಗೆ ರಾಜ್ಯ ಸರ್ಕಾರ ₹50 ಲಕ್ಷ ಅನುದಾನ ನೀಡುತ್ತಿದೆ. ರಾಜ್ಯದಾದ್ಯಂತ ಕ್ರಿಯೇಟಿವ್ ಕ್ಲಸ್ಟರ್ ನಿರ್ಮಿಸಲು ಉದ್ದೇಶಿಸಿದೆ. ಇದು ಒಟ್ಟಾರೆ ಸೃಜನಶೀಲತೆಗೆ ಉತ್ತೇಜನ ನೀಡಲಿದೆ’ ಎಂದರು.
‘ಸೃಜನಶೀಲತೆಯ ವಲಯಗಳು ಬೌದ್ಧಿಕ ಆಸ್ತಿ, ನಾವೀನ್ಯತೆಯ ಹೊಸ ‘ಆರೇಂಜ್ ಇಕಾನಮಿʼಯು (ಕಿತ್ತಳೆ ಆರ್ಥಿಕತೆ) ಬೆಳವಣಿಗೆ ಸಾಧಿಸಲು ಮಹತ್ವದ ಕೊಡುಗೆ ನೀಡುತ್ತಿವೆ. ಈ ಆರ್ಥಿಕತೆಯು ಭಾರಿ ಬದಲಾವಣೆ ತರುತ್ತಿದೆ. ಹೊಸ ಉದ್ಯೋಗ ಅವಕಾಶ ಸೃಷ್ಟಿಸುವ, ಸೃಜನಶೀಲತೆಯ ಹೊಸ ಸಂಸ್ಕೃತಿ ಬೆಳೆಯಲು ನೆರವಾಗುತ್ತಿದೆ’ ಎಂದರು.
‘ಇಡೀ ದೇಶದಲ್ಲಿ ಮೊದಲ ಬಾರಿಗೆ ಎವಿಜಿಸಿ ನೀತಿ ರೂಪಿಸಿದ ಹೆಗ್ಗಳಿಗೆ ಕರ್ನಾಟಕದ್ದಾಗಿದೆ. ಸದ್ಯಕ್ಕೆ ಕೃತಕ ಬುದ್ಧಿಮತ್ತೆಯನ್ನು (ಎಐ) ಪ್ರತಿಯೊಬ್ಬರೂ ಅತ್ಯಂತ ಸುಲಭವಾಗಿ ಅಳವಡಿಸಿಕೊಳ್ಳಬಹುದಾಗಿದೆ. ಮಾಹಿತಿ, ವಿಷಯ ಸೃಷ್ಟಿಸಲು ‘ಎಐ’ಯನ್ನು ಬೆಂಗಳೂರಿನ ಆಚೆಗೂ ಹಿಂದುಳಿದ ಪ್ರದೇಶಗಳಲ್ಲಿಯೂ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಇದರಿಂದ ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತಿವೆ’ ಎಂದರು.
ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಪ್ರಶಸ್ತಿ ವಿತರಿಸಿದರು. ಏಳು ಸ್ಟುಡಿಯೊಗಳ 10 ಬೌದ್ಧಿಕ ಆಸ್ತಿ (ಐಪಿ) ಗಳನ್ನು ಅನಾವರಣ ಮಾಡಲಾಯಿತು.
ಕರ್ನಾಟಕ ಇನ್ನೋವೇಶನ್ ಮತ್ತು ಟೆಕ್ನಾಲಜಿ ಸೊಸೈಟಿ (ಕೆಐಟಿಎಸ್) ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಶರಣಪ್ಪ ಸಂಕನೂರ ಭಾಗವಹಿಸಿದ್ದರು.
ತಂತ್ರಜ್ಞಾನದ ಸಂಗಮದ ಫಲವಾಗಿ ಸ್ಥಳೀಯ ಕತೆ ಹೊಂದಿದ್ದ ‘ಕಾಂತಾರ-ಚಾಪ್ಟರ್ 1’ ಸಿನಿಮಾ ಜಾಗತಿಕ ಮನ್ನಣೆಗೆ ಪಾತ್ರವಾಗಿದೆಪ್ರಿಯಾಂಕ್ ಖರ್ಗೆ ಐಟಿ ಬಿಟಿ ಸಚಿವ
‘ಆ್ಯನಿಮೇಷನ್: ಮಹಿಳೆಯರಿಗೆ ವಿಪುಲ ಅವಕಾಶ’
ಸಮಾವೇಶದಲ್ಲಿ ಸಂಘಟಿಸಿದ್ದ ‘ಆಕೆಯ ನೋಟ ಆಕೆಯ ಮುನ್ನೋಟ’ (ಹರ್ ಫ್ರೇಮ್. ಹರ್ ಫ್ಯೂಚರ್) ಗೋಷ್ಠಿಯು ಆ್ಯನಿಮೇಷನ್ ವಿಎಫ್‌ಎಕ್ಸ್ ಗೇಮಿಂಗ್ ಮತ್ತು ಕಾಮಿಕ್ಸ್ (ಎವಿಜಿಸಿ-ಎಕ್ಸ್ಆರ್) ಜಗತ್ತಿನಲ್ಲಿ ಭವಿಷ್ಯದಲ್ಲಿ ಮಹಿಳೆಯರು ವಹಿಸಬಹುದಾದ ನಾಯಕತ್ವದ ಬಗ್ಗೆ ಸಮಾಲೋಚಿಸುವ ಮೂಲಕ ಹೊಸ ಆಯಾಮ ನೀಡಿತು. ‘ಆ್ಯನಿಮೇಷನ್ ಕ್ಷೇತ್ರದಲ್ಲಿ ಪ್ರಸ್ತುತ ಶೇ 25ರಷ್ಟು ಮಹಿಳೆಯರಿದ್ದು ಇದು ಬೇರೆ ಕ್ಷೇತ್ರಗಳಲ್ಲಿ ಇರುವ ಮಹಿಳೆಯರ ಪ್ರಮಾಣಕ್ಕೆ ಹೋಲಿಸಿದರೆ ಬಹಳ ಕಡಿಮೆ. ಆದರೂ ಮಹಿಳೆಯರಲ್ಲಿ ಇರುವ ಕ್ಷಮತೆ ಮತ್ತು ದಕ್ಷತೆಯಿಂದಾಗಿ ಅವರು ಕೂಡ ಈ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬಲ್ಲರು ಎಂಬ ನಂಬಿಕೆ ನನಗಿದೆ’ ಎಂದು ಎಲೆಕ್ಟ್ರಾನಿಕ್ಸ್ ಐಟಿ ಮತ್ತು ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಎನ್. ಮಂಜುಳಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.