
ಬೆಂಗಳೂರು: ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ನೋಂದಣಿ ಆಗುವುದಿಲ್ಲ, ದೇಣಿಗೆ ಲೆಕ್ಕ ಕೊಡುವುದಿಲ್ಲ ಎಂದರೆ ಅವರು ದೇವರಿಗಿಂತ ದೊಡ್ಡವರೇ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಆರ್‌ಎಸ್‌ಎಸ್ ಕಾನೂನು ಪ್ರಕಾರ ನಡೆದುಕೊಳ್ಳಬೇಕು. ಆರ್‌ಎಸ್‌ಎಸ್‌ಗೆ ದೇಣಿಗೆ ಕೊಡುವವರು ಯಾರು ಎಂಬುದು ತಿಳಿಯಬೇಕು. ದೇವಾಲಯದ ಹುಂಡಿ ಹಣವೂ ಲೆಕ್ಕ ನೀಡಿ, ದೇವಾಲಯದ ಜೀರ್ಣೋದ್ಧಾರಕ್ಕೆ ಬಳಸುತ್ತಾರೆ. ಇವರು ದೇವರಿಗಿಂತ ದೊಡ್ಡವರೆಂದರೆ ಕೇಳಬೇಕೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಚಿತ್ತಾಪುರದಲ್ಲಿ ಕಾರ್ಯಕ್ರಮ ಮಾಡಲು 11 ಸಂಘಟನೆಗಳು ಅನುಮತಿ ಕೋರಿವೆ. ಅಧಿಕಾರಿಗಳು ಶಾಂತಿ ಸಭೆ ನಡೆಸುತ್ತಾರೆ. ಕಾರ್ಯಕ್ರಮದ ಬಗ್ಗೆ ಅಧಿಕಾರಿಗಳು ನ್ಯಾಯಾಲಯಕ್ಕೆ ವರದಿ ನೀಡಲಿದ್ದಾರೆ. ಅದರ ಪ್ರಕಾರ ನ್ಯಾಯಾಲಯ ತೀರ್ಮಾನಿಸಲಿದೆ. ಆ ತೀರ್ಮಾನವನ್ನು ನಾವು ಪಾಲಿಸುತ್ತೇವೆ’ ಎಂದು ಅವರು ಸ್ಪಷ್ಟಪಡಿಸಿದರು.
ಕಾನೂನು ಪಾಲಿಸಲೇಬೇಕು:
‘ನ. 2ರಂದು ಆರ್‌ಎಸ್‌ಎಸ್ ಪಥಸಂಚಲನ ಮಾಡುತ್ತೇವೆ’ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್, ‘ಕಲ್ಲಡ್ಕ ಪ್ರಭಾಕರ್ ಭಟ್ ಕಾನೂನು, ಸಂವಿಧಾನಕ್ಕಿಂತ ದೊಡ್ಡವರೇ? ಕಾನೂನು ಮೀರಿ ಮಾಡಿದರೆ ಸರ್ಕಾರ ಸುಮ್ಮನಿರುತ್ತದೆಯೇ? ಕಲ್ಲಡ್ಕ ಪ್ರಭಾಕರ್ ಭಟ್ ಅಲ್ಲ, ಅವರಪ್ಪನಾದರೂ ಅಷ್ಟೇ, ಕಾನೂನು ಪ್ರಕಾರವೇ ನಡೆದುಕೊಳ್ಳಬೇಕು’ ಎಂದರು.
‘ಆರ್‌ಎಸ್‌ಎಸ್ ದೇಣಿಗೆ ಬಗ್ಗೆ ನಿಮ್ಮ ಸರ್ಕಾರ ಈ ಹಿಂದೆ ಯಾಕೆ ತನಿಖೆ ಮಾಡಿಲ್ಲ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್, ‘ಅದೇ ನಮ್ಮಿಂದ ಆಗಿರುವ ತಪ್ಪು. ಸರ್ದಾರ್ ವಲ್ಲಭಬಾಯಿ ಪಟೇಲ್ ಅವರಿಂದ ಹಿಡಿದು ಇಂದಿರಾಗಾಂಧಿ ವರೆಗೆ ದೊಡ್ಡ ಮನಸ್ಸು ಮಾಡಿದ ಕಾರಣ ಆರ್‌ಎಸ್‌ಎಸ್‌ನವರು ಈ ಥರ ಬೆಳೆದಿದ್ದಾರೆ. ಹಿಂದುಳಿದವರು, ದಲಿತರನ್ನು ಕಾಲಾಳು ಮಾಡಿಕೊಂಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.