ಬೆಂಗಳೂರು: ‘ಹೈಕಮಾಂಡ್‌ಗೆ ₹1,800 ಕೋಟಿ ಕಪ್ಪ ನೀಡಿದ್ದನ್ನು ಯಡಿಯೂರಪ್ಪನವರು ಹಾಗೂ ಅನಂತ್ ಕುಮಾರ್ ಅವರ ಸಂಭಾಷಣೆಯಲ್ಲಿ ಬಹಿರಂಗವಾಗಿದ್ದನ್ನು ರಾಜ್ಯ ಬಿಜೆಪಿ ನಾಯಕರು ಮರೆತಿದ್ದಾರೆಯೇ?’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
‘ಬಿಹಾರ ಚುನಾವಣೆಗೆ ಕರ್ನಾಟಕದಿಂದ ಹಣ ಹೋಗುತ್ತಿದೆ’ ಎಂಬ ಸಂಸದ ಬಿ.ವೈ.ರಾಘವೇಂದ್ರ ಅವರ ಆರೋಪಕ್ಕೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಪ್ರಿಯಾಂಕ್, ‘ಕರ್ನಾಟಕದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾಡಿದ ಕೀರ್ತಿ ಬಿಜೆಪಿಯದ್ದೇ ಹೊರತು ಕಾಂಗ್ರೆಸ್ಸಿನದ್ದಲ್ಲ’ ಎಂದು ಹೇಳಿದ್ದಾರೆ.
‘ಬಿಜೆಪಿ ಹೈಕಮಾಂಡ್‌ಗೆ ಕಪ್ಪ ನೀಡಿರುವ ವಿಚಾರವನ್ನು ರಾಜ್ಯ ಬಿಜೆಪಿ ನಾಯಕರು ಮರೆತಿದ್ದರೆ ಅದನ್ನು ನಾವು ಮತ್ತೊಮ್ಮೆ ನೆನಪಿಸುತ್ತೇವೆ. ಸಂಸದ ಬಿ.ವೈ ರಾಘವೇಂದ್ರರವರು ತಮ್ಮ ಪೂಜ್ಯ ತಂದೆಯವರ ಮಾತುಗಳನ್ನು ಒಮ್ಮೆ ಕಿವಿಗೊಟ್ಟು ಕೇಳಿಸಿಕೊಂಡು ನಂತರ ಮಾತನಾಡಿದರೆ ಉತ್ತಮ’ ಎಂದಿದ್ದಾರೆ.
‘ಬಿಜೆಪಿಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ₹2,500 ಕೋಟಿ ಕೊಡಬೇಕು ಎಂದಿದ್ದವರೂ ಬಿಜೆಪಿಯವರೇ, ಮಂತ್ರಿಗಿರಿಗೆ ₹60– ₹70 ಕೋಟಿ ಕೊಡಬೇಕು ಎಂದಿದ್ದವರೂ ಬಿಜೆಪಿಯವರೇ. ಬಿಜೆಪಿ ಹೈಕಮಾಂಡ್ ಹುದ್ದೆಗಳನ್ನು ಮಾರಾಟಕ್ಕಿಟ್ಟು ವ್ಯಾಪಾರಕ್ಕೆ ಕುಳಿತಿತ್ತು ಎನ್ನುವುದನ್ನು ಬಿಜೆಪಿಯವರೇ ಬಹಿರಂಗಪಡಿಸಿದ್ದರು’ ಎಂದು ಹೇಳಿದ್ದಾರೆ.
ಏನತ್ಮಧ್ಯೆ, ರಾಘವೇಂದ್ರ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿಹಾರ ಚುನಾವಣೆಗೆ ರಾಜ್ಯದಿಂದ ಹಣ ನೀಡಿರುವ ಬಗ್ಗೆ ದಾಖಲೆ ಇದ್ದರೆ ಅವರು ಬಿಡುಗಡೆ ಮಾಡಲಿ. ಸುಳ್ಳಿಗೆ ಮತ್ತೊಂದು ಹೆಸರು ರಾಘವೇಂದ್ರ ಎಂದು ಆಗುವುದು ಬೇಡ’ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.