ADVERTISEMENT

SCSP, TSP ಅನುದಾನ ಬೇರೆಡೆ ತಿರುಗಿಸಿದ್ದರೆ BJP ದಾಖಲೆ ನೀಡಲಿ: ಪ್ರಿಯಾಂಕ್

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 9:14 IST
Last Updated 28 ಜುಲೈ 2025, 9:14 IST
<div class="paragraphs"><p>ಪ್ರಿಯಾಂಕ್‌ ಖರ್ಗೆ</p></div>

ಪ್ರಿಯಾಂಕ್‌ ಖರ್ಗೆ

   

ಕಲಬುರಗಿ: ‘ಎಸ್‌ಸಿಎಸ್ಪಿ, ಟಿಎಸ್ಪಿ ಅನುದಾನವನ್ನು ನಮ್ಮ ಸರ್ಕಾರ ನಿಯಮ ಬದ್ಧವಾಗಿಯೇ ಖರ್ಚು ಮಾಡುತ್ತಿದೆ. ಆ ಬೇರೆಡೆ ತಿರುಗಿಸಿದ್ದರೆ (ಡೈವರ್ಟ್‌) ಬಿಜೆಪಿ ದಾಖಲೆ ನೀಡಲಿ. ಆಗ ಅದರ ಬಗೆಗೆ ಕ್ರಮ ಜರುಗಿಸಲಾಗುವುದು’ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಸಿಎಸ್ಪಿ, ಟಿಎಸ್ಪಿ ಅನುದಾನ ಗ್ಯಾರಂಟಿ ಯೋಜನೆಗಳಿಗೆ ವೆಚ್ಚ ಮಾಡಲಾದ ಕುರಿತ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

ADVERTISEMENT

‘ಬಿಜೆಪಿಯವರು ಸುಮ್ಮನೆ ಆರೋಪ ಮಾಡುತ್ತಾರೆ. ಆರೋಪ ಬಿಟ್ಟು ಸರ್ಕಾರಕ್ಕೆ ದಾಖಲೆ ನೀಡಿದರೆ, ಕ್ರಮಕೈಗೊಳ್ಳಬಹುದು. ಬಿಜೆಪಿ ಆಡಳಿತಾವಧಿಯಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಎಸ್‌ಸಿಎಸ್ಪಿ, ಟಿಎಸ್ಪಿ ಅನುದಾನ ಡೈವರ್ಟ್ ಆಗಿತ್ತು. ಅದನ್ನು ಬೊಮ್ಮಾಯಿ‌ ಅವರೇ ಸದನದಲ್ಲೇ ಒಪ್ಪಿಕೊಂಡಿದ್ದಾರೆ. ನಾವು ಅಧಿಕಾರಕ್ಕೆ ಬಂದ ಬಳಿಕ ಈ ಕಾಯ್ದೆಯ ‘7ಡಿ’ ಉಪವಿಧಿ ರದ್ದುಗೊಳಿಸಿದ್ದೇವೆ. ಈಗ 7ಎ, 7ಬಿ,7ಸಿ ನಿಯಮದಡಿಯೇ ಆ ಅನುದಾನವನ್ನು ನಿಯಮಬದ್ಧವಾಗಿ ವಿನಿಯೋಗಿಸುತ್ತಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

‘ರಾಜ್ಯ ಬಿಜೆಪಿ ನಾಯಕರು ದಲಿತರು, ಆದಿವಾಸಿಗಳ ಬಗೆಗೆ ಹುಸಿ ಪ್ರೀತಿ, ಕಾಳಜಿ ತೋರುವುದನ್ನು ಬಿಟ್ಟು, ಅವರಿಗೆ ಧೈರ್ಯ, ಸಾಮರ್ಥ್ಯ, ಕಾಳಜಿ ಇದ್ದರೆ ಎಸ್‌ಸಿಎಸ್ಪಿ, ಟಿಎಸ್ಪಿ ಕಾಯ್ದೆಯನ್ನು ಉತ್ತರ ಪ್ರದೇಶ, ಮಹಾರಾಷ್ಟ್ರ, ಗುಜರಾತ್‌ ಸೇರಿದಂತೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಜಾರಿಗೊಳಿಸಲು ಪ್ರಧಾನಿ ಮೋದಿ ಕೈ–ಕಾಲು ಹಿಡಿದು ಪ್ರಯತ್ನಿಸಲಿ. ಅದನ್ನು ಬಿಟ್ಟು ಆರೋಪಗಳನ್ನು ಮಾಡಿ ಜನರ ದಿಕ್ಕು ತಪ್ಪಿಸುವುದು ಬೇಡ’ ಎಂದರು.

‘ಕೊಡುಗೆ ನೀಡಿ ಮಾತನಾಡಲಿ’

‘ಪ್ರಧಾನಿ ಮೋದಿ ಅವರ ಮನದ ಮಾತು ಕೇಳಿ–ಕೇಳಿ ಸಾಕಾಗಿದೆ. ಏನಾದರೂ ಮಾತನಾಡಬೇಕಾದರೆ ನಿಮ್ಮ ಶ್ರಮ, ಅನುದಾನ, ಕೊಡುಗೆ ಇರಬೇಕು. ಹಿಂದೆ ಕಲಬುರಗಿ ರೊಟ್ಟಿ ಬಗ್ಗೆ ಮಾತನಾಡಿದಾಗ ಅವರ ಕೊಡುಗೆ ಏನು? ಶೂನ್ಯ. ಈಗ ಕಲಬುರಗಿ ಕೋಟೆ ಬಗ್ಗೆ ಮಾತನಾಡಿದ್ದಾರೆ. ಅವರ ಕೊಡುಗೆ ಏನು? ಶೂನ್ಯ. ಬೇರೆಯವರು ಪಟ್ಟ ಶ್ರಮಕ್ಕೆ ಇವರು ಕ್ರೆಡಿಟ್‌ ತೆಗೆದುಕೊಳ್ಳುವುದರಲ್ಲಿ ಇವರು ನಿಸ್ಸಿಮರು’ ಎಂದು ವ್ಯಂಗ್ಯವಾಡಿದರು.

‘ಕೇಂದ್ರೀಯ ವಿ.ವಿಗಳು ಆರ್‌ಎಸ್‌ಎಸ್‌ ಶಾಖೆ’

‘ಶೈಕ್ಷಣಿಕ ಪ್ರಗತಿಯ ದೃಷ್ಟಿಯಿಂದ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿಗೆ ಕೇಂದ್ರೀಯ ವಿವಿ ತಂದರು. ಆದರೆ, ಕೇಂದ್ರೀಯ ವಿಶ್ವವಿದ್ಯಾಲಯಗಳು ಆರ್‌ಎಸ್‌ಎಸ್ ಶಾಖೆಗಳಾಂತಾಗಿವೆ. ಗ್ರಾಮೀಣಾಭಿವೃದ್ಧಿ ಹಾಗೂ‌ ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮ ನಡೆಸಲು ನಮಗೆ ಅನುಮತಿ ನಿರಾಕರಿಸಲಾಗಿದೆ’ ಎಂದು ಸಚಿವ ಪ್ರಿಯಾಂಕ್‌ ಟೀಕಿಸಿದರು.

‘ಅರ್ಧ ಕೆಲಸ ಮಾಡಿ ತೋರಿಸಲಿ’

‘ನರೇಂದ್ರ ಮೋದಿ ಹೆಚ್ಚಿನ‌ ಅವಧಿಗೆ ಪ್ರಧಾನಿಯಾಗುವ ಮೂಲಕ ಇಂದಿರಾ ಗಾಂಧಿ ದಾಖಲೆ‌ ಮುರಿದಿದ್ದಾರಲ್ಲ’ ಎಂಬ ಪ್ರಶ್ನೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್‌, ‘ದಾಖಲೆಗಳನ್ನು ಮುರಿದಿರಬಹುದು, ಆದರೆ ಸಾಧನೆ ಏನಿದೆ? ಇಂದಿರಾ ಗಾಂಧಿ ಅವರು ಮಾಡಿದ ಅರ್ಧದಷ್ಟಾದರೂ ಕೆಲಸ ಮಾಡಿ ತೋರಿಸಲಿ’ ಎಂದು ಸವಾಲು ಹಾಕಿದರು.

‘ಇಂದಿರಾ ಗಾಂಧಿ ಅವರು ಪಾಕಿಸ್ತಾನವನ್ನು ಇಬ್ಭಾಗ ಮಾಡಿದ್ದರು. ಇವರು ಭಾರತ –ಪಾಕ್‌ ನಡುವಣ ಕದನ ವಿರಾಮ ಯಾರು ನಿರ್ಧರಿಸಿದರು ಎಂದು ಹೇಳಲು ಸಿದ್ಧರಿಲ್ಲ. ಇಂದಿರಾ 44 ಪತ್ರಿಕಾಗೋಷ್ಠಿ ನಡೆಸಿದ್ದರು, ಇವರೇನು ಮಾಡಿದ್ದಾರೆ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.