ಪ್ರಿಯಾಂಕ್ ಖರ್ಗೆ
ಬೆಂಗಳೂರು: ಸರ್ಕಾರಿ ಶಾಲೆ–ಕಾಲೇಜುಗಳಲ್ಲಿ ಹಾಗೂ ಸಾರ್ವಜನಿಕ ಸಂಸ್ಥೆಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದ ಬಳಿಕ ಬೆದರಿಕೆ, ನಿಂದನೆ ಕರೆಗಳು ಬರುತ್ತಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ದೇಶವನ್ನು ಅಪಾಯಕಾರಿ ‘viRuSS’ ಗಳಿಂದ ಶುದ್ಧೀಕರಿಸುವ ಸಮಯ ಇದಾಗಿದೆ ಎಂದು ಅವರು ಸಾಮಾಜಿಕ ಜಾಲತಾಣ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಪತ್ರ ಬರೆದ ಬಳಿಕ ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಬೆದರಿಕೆಗಳು, ಅತ್ಯಂತ ಕೀಳು ಪದಗಳ ನಿಂದನೆಗಳಿಂದ ತುಂಬಿದ ಕರೆಗಳು ಬರುತ್ತಲೇ ಇವೆ. ಆದರೆ ನಾನು ಇದರಿಂದ ವಿಚಲಿತನಾಗುವುದಿಲ್ಲ ಎಂದು ಹೇಳಿದ್ದಾರೆ.
ಮಹಾತ್ಮ ಗಾಂಧಿ, ಬಾಬಾಸಾಹೇಬ್ ಅಂಬೇಡ್ಕರ್ ಅವರಂತಹ ಮಹಾನ್ ನಾಯಕರನ್ನೇ ಆರ್‌ಎಸ್‌ಎಸ್ ಬಿಟ್ಟಿಲ್ಲ, ಇನ್ನು ಅವರು ನನ್ನನ್ನು ಹೇಗೆ ಬಿಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಬೆದರಿಕೆಗಳು ಮತ್ತು ವೈಯಕ್ತಿಕ ನಿಂದನೆಗಳಿಂದ ನನ್ನ ಬಾಯಿ ಮುಚ್ಚಿಸಬಹುದು ಎಂದು ಅವರು ಭಾವಿಸಿದ್ದರೆ, ಅದು ಅವರ ಕಲ್ಪನೆ ಮಾತ್ರ. ಇದಿನ್ನೂ ಆರಂಭವಷ್ಟೇ. ಇದು ಬುದ್ಧ, ಬಸವಣ್ಣ ಮತ್ತು ಬಾಬಾಸಾಹೇಬ್ ಅವರ ತತ್ವಗಳ ಮೇಲೆ ಸಮಾಜವನ್ನು ನಿರ್ಮಿಸುವ ಕಾಲ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.