ADVERTISEMENT

ಪಾಕ್‌ ಪರ ಘೋಷಣೆ: ಆರೋಪಿಗಳು ಹಿಂಡಲಗಾ ಜೈಲಿಗೆ

ಕಾಶ್ಮೀರದಿಂದ ಹುಬ್ಬಳ್ಳಿಗೆ ಬಂದಿಳಿದ ಪೋಷಕರು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 19:54 IST
Last Updated 18 ಫೆಬ್ರುವರಿ 2020, 19:54 IST
ದೇಶದ್ರೋಹ ಕಾಯ್ದೆಯಡಿ ಬಂಧಿತರಾಗಿದ್ದ ವಿದ್ಯಾರ್ಥಿಗಳು
ದೇಶದ್ರೋಹ ಕಾಯ್ದೆಯಡಿ ಬಂಧಿತರಾಗಿದ್ದ ವಿದ್ಯಾರ್ಥಿಗಳು   

ಹುಬ್ಬಳ್ಳಿ: ಪಾಕ್ ಪರ ಘೋಷಣೆ ಕೂಗಿದ ಆರೋಪದ ಮೇಲೆ ಬಂಧಿತರಾಗಿ, ನ್ಯಾಯಾಂಗ ವಶದಲ್ಲಿರುವ ಕಾಶ್ಮೀರ ಮೂಲದ ಆರೋಪಿ ವಿದ್ಯಾರ್ಥಿಗಳಾದ ಅಮೀರ್‌ ವಾನಿ, ತಾಲಿಬ್‌ ಮಜೀದ್‌ ಮತ್ತು ಬಾಸಿತ್‌ ಸೋಫಿ ಅವರನ್ನು ಹುಬ್ಬಳ್ಳಿಯ ಉಪ ಕಾರಾಗೃಹದಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರ ಮಾಡಲಾಗಿದೆ.

ಆರೋಪಿಗಳನ್ನು ವಿಶ್ವೇಶ್ವರ ನಗರದ ಉಪಕಾರಾಗೃಹದಲ್ಲಿ ಇರಿಸಲಾಗಿತ್ತು. ‘ಕಾರಾಗೃಹದಲ್ಲಿ ಪ್ರತ್ಯೇಕ ಸೆಲ್‌ ಇಲ್ಲ. ಕೈದಿಗಳು ಅವರ ಮೇಲೆ ಹಲ್ಲೆ ನಡೆಸಬಹುದು ಎಂದು ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ಹಿಂಡಲಗಾ ಜೈಲಿಗೆ ಕಳುಹಿಸಲಾಗಿದೆ’ ಎಂದು ಉಪಕಾರಾಗೃಹದ ಅಧೀಕ್ಷಕ ಅಶೋಕ ಭಜಂತ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮಕ್ಕಳ ಬಂಧನದ ಮಾಹಿತಿ ತಿಳಿದು ಕಾಶ್ಮೀರದಿಂದ ಅವರ ಪೋಷಕರು ನಗರಕ್ಕೆ ಬಂದಿದ್ದರು. ಅವರು ಬರುವ ವೇಳೆಗೆ ಆರೋಪಿಗಳನ್ನು ಬೆಳಗಾವಿಗೆ ಸ್ಥಳಾಂತರಿಸಿದ್ದರಿಂದ ಪೊಲೀಸ್‌ ಕಮಿಷನರ್‌ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.

ADVERTISEMENT

‘ಯಾಕೆ ದೇಶ ವಿರೋಧಿ ಮಾತುಗಳನ್ನು ಆಡಿದ್ದಾರೆ ಎಂದು ಗೊತ್ತಾಗುತ್ತಿಲ್ಲ. ಬಟ್ಟೆ ವ್ಯಾಪಾರ, ಮಟನ್‌ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದೇವೆ. ಹೆಚ್ಚಿನ ಶಿಕ್ಷಣ ಪಡೆದಿಲ್ಲ. ಕೇಂದ್ರ ಸರ್ಕಾರದ ಶಿಷ್ಯವೇತನದಡಿ ಓದುವ ಅವಕಾಶ ಸಿಕ್ಕಿದ್ದರಿಂದ ಚೆನ್ನಾಗಿ ಓದಲಿ ಎಂದು ಇಷ್ಟು ದೂರ ಕಳುಹಿಸಿದ್ದೆವು’ ಎಂದು ತಾಲೀಬ್ ಸಹೋದರ ಮುರ್ತಾಬ್ ಪೊಲೀಸ್‌ ಕಮಿಷನರ್‌ಗೆ ವಿವರಿಸಿದರು ಎಂದು ಮೂಲಗಳು ತಿಳಿಸಿವೆ. ಈ ವೇಳೆ ಅಮೀರ್ ಸಹೋದರ ಅಹ್ಮದ್, ಬಾಸಿತ್‌ ತಂದೆ ನಜೀರಖಾನ್ ಸಹ ಇದ್ದರು.

‘ಅವರನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ. ಹಲ್ಲೆಯೂ ನಡೆದಿದೆ. ಬಿಡುಗಡೆ ಮಾಡಿದರೆ ಕಾಶ್ಮೀರಕ್ಕೆ ಕರೆದುಕೊಂಡು ಹೋಗುತ್ತೇವೆ. ಇಲ್ಲಿಗೆ ಮತ್ತೆ ಕಳುಹಿಸುವುದಿಲ್ಲ’ ಎಂದೂ ತಿಳಿಸಿದರು ಎನ್ನಲಾಗಿದೆ.

ಆರೋಪಿಗಳ ಪೋಷಕರನ್ನು ಕೊಠಡಿಯೊಂದರಲ್ಲಿ ಕುಳ್ಳಿರಿಸಲಾಗಿತ್ತು. ಅವರೊಂದಿಗೆ ಮಾತನಾಡಲು ಮಾಧ್ಯವದವರಿಗೆ ಅವಕಾಶ ನೀಡಲಿಲ್ಲ. ಪೊಲೀಸ್‌ ವಾಹನದಲ್ಲಿ ಅವರನ್ನು ಕರೆದೊಯ್ಯಲಾಯಿತು.

ಗೊಂದಲ ಸೃಷ್ಟಿಯಾಗಿಲ್ಲ: ‘ಪಾಕ್ ಪರ ಘೋಷಣೆ ಕೂಗಿದ ಆರೋಪಿಗಳ ಪ್ರಕರಣದಲ್ಲಿ ಪೊಲೀಸ್ ಇಲಾಖೆಯಿಂದ ಯಾವುದೇ ಗೊಂದಲ ಸೃಷ್ಟಿಯಾಗಿಲ್ಲ’ ಎಂದು ಪೊಲೀಸ್ ಕಮಿಷನರ್ ಆರ್. ದಿಲೀಪ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಲಾಖೆಯಿಂದ ಯಾವುದೇ ಲೋಪಗಳಾಗಿಲ್ಲ’ ಎಂದು ಸಮರ್ಥಿಸಿಕೊಂಡರು. ‘ಕೊಟಗುಣಸಿ ಗ್ರಾಮದಲ್ಲಿರುವ ಕೆಎಲ್‌ಇ ಕಾಲೇಜಿನ ಪ್ರೇರಣಾ ವಸತಿ ನಿಲಯದಲ್ಲಿ ಆರೋಪಿಗಳು ವಿಡಿಯೊ ಮಾಡಿದ್ದಾರೆ. ಹಾಗಾಗಿ, ಪ್ರಕರಣವನ್ನು ಗ್ರಾಮೀಣ ಪೊಲೀಸ್‌ ಠಾಣೆಗೆ ವರ್ಗಾವಣೆ ಮಾಡಲಾಗಿದೆ’ ಎಂದರು.

ಆರೋಪಿಗಳನ್ನು ಮೊದಲಿಗೆ ಬಿಡುಗಡೆ ಮಾಡಿದ್ದ ಕುರಿತು ಕೇಳಿದ ಪ್ರಶ್ನೆಗೆ ‘ಕಾನೂನಿನ ಚೌಕಟ್ಟಿನಲ್ಲಿಯೇ ಎಲ್ಲವನ್ನು ಮಾಡಿದ್ದೇವೆ. ತನಿಖೆ ದೃಷ್ಟಿಯಿಂದ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಪಾಕಿಸ್ತಾನ ಪರ ಘೋಷಣೆ ಕೂಗಿದ ಮೂವರನ್ನು. ಇತರ ಕೈದಿಗಳ ಸಂಪರ್ಕ ಸಾಧ್ಯವಾಗದಂತೆ ಪ್ರತ್ಯೇಕವಾಗಿ ಇರಿಸಲಾಗಿದೆ. ಹೆಚ್ಚಿನ ನಿಗಾ ವಹಿಸಲಾಗಿದೆ.
–ಕೃಷ್ಣಕುಮಾರ್‌, ಸೂಪರಿಂಟೆಂಡೆಂಟ್‌, ಹಿಂಡಲಗಾ ಕಾರಾಗೃಹ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.