ADVERTISEMENT

ರಾಯಚೂರು: ಉತ್ಪಾದನೆ ತಗ್ಗಿದರೂ ಲಾಭದಲ್ಲಿ ಹಟ್ಟಿ ಚಿನ್ನದ ಕಂಪೆನಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 16:00 IST
Last Updated 31 ಜುಲೈ 2020, 16:00 IST
ಹಟ್ಟಿ ಚಿನ್ನದ ಗಣಿ
ಹಟ್ಟಿ ಚಿನ್ನದ ಗಣಿ   

ರಾಯಚೂರು: ಪ್ರತಿಷ್ಠಿತ ಹಟ್ಟಿ ಚಿನ್ನದ ಗಣಿ ಕಂಪೆನಿಯಲ್ಲಿ ಕೋವಿಡ್‌ ಸೋಂಕು ಮುನ್ನಚ್ಚರಿಕೆ ಕ್ರಮಗಳ ಜಾರಿಯಿಂದ ಚಿನ್ನದ ಉತ್ಪಾದನೆ ಕಡಿಮೆ ಆಗುತ್ತಿದ್ದರೂ, ಚಿನ್ನದ ದರ ಏರಿಕೆಯಿಂದ ಲಾಭ ಬರುತ್ತಿದೆ.

ಮಾಸಿಕ ಸರಾಸರಿ 180 ಕೆಜಿ ಚಿನ್ನ ಉತ್ಪಾದನೆ ಗುರಿ ಇದ್ದು, ಏಪ್ರಿಲ್‌ನಿಂದ ಜುಲೈ ನಾಲ್ಕು ತಿಂಗಳಲ್ಲಿ 720 ಕೆಜಿ ಚಿನ್ನ ಉತ್ಪಾದನೆ ಗುರಿಯಲ್ಲಿ ಶೇ 50 ರಷ್ಟು ಮಾತ್ರ ಸಾಧನೆ ಆಗಿದೆ. ಮಾರ್ಚ್‌ನಲ್ಲಿಪ್ರತಿ 10 ಗ್ರಾಂ ಚಿನ್ನದ ದರ ₹33 ಸಾವಿರದಿಂದ ಸದ್ಯ ₹53 ಸಾವಿರ ಶೇ 60 ರಷ್ಟು ಏರಿಕೆ ಆಗಿದ್ದರಿಂದ ಕಂಪೆನಿ ನಷ್ಟದಿಂದ ಲಾಭದ ಕಡೆಗೆ ವಾಲಿದೆ.

‘ಲಾಕ್‌ಡೌನ್‌ನಿಂದ ಏಪ್ರಿಲ್‌ನಲ್ಲಿ ಸಂಪೂರ್ಣ ಸ್ಥಗಿತವಾಗಿತ್ತು. ಭಾಗಶಃ ಕಾರ್ಮಿಕರನ್ನು ಬಳಸಲು ಅವಕಾಶ ನೀಡಿದ್ದರಿಂದ ಮೇ ತಿಂಗಳು 75 ಕೆಜಿ, ಜೂನ್‌ನಲ್ಲಿ 140 ಕೆಜಿ ಹಾಗೂ ಜುಲೈ ಸುಮಾರು 145 ಕೆಜಿ ಚಿನ್ನದ ಉತ್ಪಾದಿಸಲು ಸಾಧ್ಯವಾಗಿದೆ’ ಎಂದು ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ್‌ ಬಿ. ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

2019–20ನೇ ಸಾಲಿನಲ್ಲಿ ಒಟ್ಟು 1,740 ಕೆಜಿ ಚಿನ್ನ ಉತ್ಪಾದನೆ ಆಗಿತ್ತು. 2020–21ನೇ ಸಾಲಿನಲ್ಲಿ 1,800 ಕೆಜಿ ಚಿನ್ನ ಉತ್ಪಾದಿಸುವ ಗುರಿ ಇದೆ. ಕಂಪೆನಿಗೆ ಲಾಭ ಬರುತ್ತಿರುವುದರಿಂದ ವೇತನ, ಬೋನಸ್‌ ಸಮರ್ಪಕವಾಗಿ ಕೈಸೇರುತ್ತವೆ ಎಂದು ಕಾರ್ಮಿಕ ವರ್ಗ ಕೂಡಾ ಹರ್ಷ ಚಿತ್ತವಾಗಿದೆ. ಸದ್ಯಕ್ಕೆ ಕಂಪೆನಿಯಲ್ಲಿ ಗಣಿಯೊಳಗೆ ಕಾರ್ಮಿಕರನ್ನು ಪಾಳಿಗಳಲ್ಲಿ ಕಳುಸಲಾಗುತ್ತಿದೆ. ಮೊದಲಿದ್ದ ಸಾಮಾನ್ಯ ವ್ಯವಸ್ಥೆಯನ್ನು ಅನುಸರಿಸುತ್ತಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.