ADVERTISEMENT

ಕರ್ನಾಟಕ ವಿವಿ ನೂತನ ಕುಲಪತಿ ನೇಮಕ: ಶೋಧನ ಸಮಿತಿಗೆ ಪ್ರೊ. ಜೋಗನ್ ಶಂಕರ್

​ಪ್ರಜಾವಾಣಿ ವಾರ್ತೆ
Published 2 ಜುಲೈ 2019, 15:46 IST
Last Updated 2 ಜುಲೈ 2019, 15:46 IST
ಪ್ರೊ.ಜೋಗನ್ ಶಂಕರ್
ಪ್ರೊ.ಜೋಗನ್ ಶಂಕರ್   

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ನೂತನ ಕುಲಪತಿ ನೇಮಕದ ಶೋಧನ ಸಮಿತಿಗೆ ವಿಶ್ವವಿದ್ಯಾಲಯದ ಪ್ರತಿನಿಧಿಯಾಗಿ ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಜೋಗನ್ ಶಂಕರ್ ಅವರನ್ನು ಸಿಂಡಿಕೇಟ್ ಮಂಗಳವಾರ ನಾಮನಿರ್ದೇಶನ ಮಾಡಿದೆ.

ಸತತ ಮೂರು ಬಾರಿ ಸಭೆ ಸೇರಿದರೂ ಹೆಸರು ಅಂತಿಮಗೊಳ್ಳದೆ ಗೊಂದಲದ ಗೂಡಾಗಿದ್ದ ವಿಶ್ವವಿದ್ಯಾಲಯದ ಪ್ರತಿನಿಧಿ ಆಯ್ಕೆಗೆ ಮಂಗಳವಾರ ಸಿಂಡಿಕೇಟ್ ಸಭೆ ಸೇರಿತ್ತು. ಸಭೆಯಲ್ಲಿ ಈ ಹಿಂದೆ ಶಿಫಾರಸುಗೊಂಡಿದ್ದ ಪ್ರೊ. ಎಸ್.ಎಸ್.ಹೂಗಾರ ಮತ್ತು ಪ್ರೊ. ಜೋಗನ್ ಶಂಕರ್ ಅವರ ಹೆಸರನ್ನು ಮತ್ತೆ ಚರ್ಚೆಗೆ ಇಡಲಾಯಿತು.

ಕೆಲ ಸಿಂಡಿಕೇಟ್ ಸದಸ್ಯರು ಪ್ರೊ. ಹೂಗಾರ ಅವರ ಹೆಸರನ್ನೇ ಅಂತಿಮಗೊಳಿಸಬೇಕು ಎಂದು ಪಟ್ಟು ಹಿಡಿದರು. ವಿಶ್ವವಿದ್ಯಾಲಯದ ಕಾಯ್ದೆ 14.3ರಲ್ಲಿ ಹೇಳಿರುವಂತೆ, ನಾಮನಿರ್ದೇಶನಗೊಳ್ಳುವ ಯಾವುದೇ ವ್ಯಕ್ತಿ ಅದೇ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡಿರುವಂತಿಲ್ಲ ಎಂದಿದೆ. ಆದರೆ ಪ್ರೊ. ಹೂಗಾರ ಅವರು ಇದೇ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ, ಡೀನ್‌ ಹಾಗೂ ಪ್ರಭಾರ ಕುಲಪತಿಯಾಗಿಯೂ ಕೆಲಸ ಮಾಡಿದ್ದಾರೆ. ಸದ್ಯ ಅವರ ಪುತ್ರ ಇದೇ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ಹೀಗಾಗಿ ಇದು ಕಾಯ್ದೆಯ ಉಲ್ಲಂಘನೆಯಾಗಲಿದೆ ಎಂದು ಕುಲಸಚಿವ ಪ್ರೊ. ಸಿ.ಬಿ.ಹೊನ್ನುಸಿದ್ಧಾರ್ಥ ಸಭೆಗೆ ಮನವರಿಕೆ ಮಾಡಿಕೊಟ್ಟರು.

ADVERTISEMENT

ಸಭೆಯಲ್ಲಿದ್ದ ಹತ್ತು ಸದಸ್ಯರಲ್ಲಿ 6 ಮಂದಿ ಪ್ರೊ. ಜೋಗನ್ ಅವರ ಪರವಾಗಿ ಮತ್ತು 4 ಮಂದಿ ಪ್ರೊ. ಹೂಗಾರ ಅವರ ಪರವಾಗಿ ನಿಂತರು. ಹೀಗಾಗಿ ಬಹುಮತದ ಆಧಾರದ ಮೇಲೆ ಕಲಬುರ್ಗಿಯ ಅಳಂದ ತಾಲ್ಲೂಕಿನವರಾದ ಪ್ರೊ. ಜೋಗನ್ ಅವರ ಹೆಸರನ್ನೇ ಶಿಫಾರಸು ಮಾಡಲು ತೀರ್ಮಾನಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಇದೇ ವಿಷಯವಾಗಿ ವಿಶ್ವವಿದ್ಯಾಲಯ ಎರಡು ಬಾರಿ ಕಳುಹಿಸಿದ ಪ್ರಸ್ತಾವನೆ ತಿರಸ್ಕೃತಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಕುಲಪತಿ ಆಯ್ಕೆಯ ಶೋಧನ ಸಮಿತಿಯಲ್ಲಿ ಒಟ್ಟು ನಾಲ್ಕು ಸದಸ್ಯರು ಇರುತ್ತಾರೆ. ರಾಜ್ಯಪಾಲರ ಪ್ರತಿನಿಧಿಯಾಗಿ ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ. ಮಹದೇವಪ್ಪ, ಯುಜಿಸಿ ಪ್ರತಿನಿಧಿಯಾಗಿ ಪ್ರೊ. ಚೌಧರಿ ಆಯ್ಕೆಯಾಗಿದ್ದಾರೆ. ಸರ್ಕಾರದ ಪ್ರತಿನಿಧಿಯ ಆಯ್ಕೆ ಇನ್ನೂ ಬಾಕಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.