ADVERTISEMENT

ಸಾಹಿತ್ಯ ಸಮ್ಮೇಳನದಲ್ಲಿ ಬೇಳೆ ಜೊತೆ ಮೂಳೆಯೂ ಇರಲಿ: ಪ್ರಗತಿಪರ ಸಂಘಟನೆಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2024, 12:35 IST
Last Updated 9 ಡಿಸೆಂಬರ್ 2024, 12:35 IST
<div class="paragraphs"><p>87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರದ ಜೊತೆಗೆ ಮಾಂಸಾಹಾರವನ್ನೂ ನೀಡಬೇಕು ಎಂದು ಆಗ್ರಹಿಸಿ, ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಮೊಟ್ಟೆ ತಿನ್ನುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು</p></div>

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರದ ಜೊತೆಗೆ ಮಾಂಸಾಹಾರವನ್ನೂ ನೀಡಬೇಕು ಎಂದು ಆಗ್ರಹಿಸಿ, ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಮೊಟ್ಟೆ ತಿನ್ನುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು

   

ಪ್ರಜಾವಾಣಿ ಚಿತ್ರ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರದ ಜೊತೆಗೆ ಮಾಂಸಾಹಾರವನ್ನೂ ನೀಡಬೇಕು ಎಂದು ಆಗ್ರಹಿಸಿ, ಜಿಲ್ಲಾಧಿಕಾರಿ ಕಚೇರಿ ಎದುರು ಮೊಟ್ಟೆ ತಿನ್ನುವ ಮೂಲಕ ವಿನೂತನವಾಗಿ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ADVERTISEMENT

‘ಬೇಳೆಯ ಜೊತೆ ಮೂಳೆಯೂ ಇರಲಿ, ಹಪ್ಪಳದ ಜೊತೆ ಕಬಾಬ್ ಇರಲಿ, ಕೋಸಂಬರಿ ಜೊತೆ ಎಗ್‌ಬುರ್ಜಿ ಇರಲಿ, ಮುದ್ದೆ ಜೊತೆ ಬೋಟಿ ಇರಲಿ’ ಎಂಬ ಘೋಷಣೆಗಳನ್ನು ಕೂಗಿ ಮಾಂಸಾಹಾರ ಕೊಡಬೇಕೆಂದು ಆಗ್ರಹಿಸಿದರು.

‘ಆಡಂಬರದ ಕೆಲವು ಸಸ್ಯಾಹಾರದ ತಿನಿಸುಗಳನ್ನು ಕೈಬಿಟ್ಟು, ಕೋಳಿ ಮಾಂಸದ ತುಂಡು ಮತ್ತು ಮೊಟ್ಟೆಯನ್ನು ಕಡ್ಡಾಯವಾಗಿ ಒದಗಿಸಬೇಕು. ಇಲ್ಲದೇ ಹೋದರೆ, ನಾವು ಸಾರ್ವಜನಿಕರಿಂದ ಕೋಳಿ, ಮೊಟ್ಟೆ ಮತ್ತು ಪಡಿತರವನ್ನು ಸಂಗ್ರಹಿಸಿ ಜನರಿಗೆ ಮಾಂಸಾಹಾರ ವಿತರಿಸುವ ದೊಡ್ಡ ಪ್ರತಿಭಟನೆಯನ್ನು ಸಾಹಿತ್ಯ ಸಮ್ಮೇಳನದಲ್ಲಿ ಹಮ್ಮಿಕೊಳ್ಳುತ್ತೇವೆ. ಈ ವಿಚಾರದಲ್ಲಿ ರಾಜಿಯಾಗಲು ಸಾಧ್ಯವೇ ಇಲ್ಲ. ಇದು ನಾಗರಿಕರ ಆಹಾರ ಮತ್ತು ಆಯ್ಕೆ ಹಕ್ಕು’ ಎಂದು ಪ್ರತಿಪಾದಿಸಿದರು. 

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ. ಕುಮಾರಿ ಮಾತನಾಡಿ, ‘ಸಾಹಿತ್ಯ ಸಮ್ಮೇಳನದ ವಾಣಿಜ್ಯ ಮಳಿಗೆಗಳಲ್ಲಿ ಮಾಂಸಾಹಾರಕ್ಕೆ ನಿಷೇಧ ವಿಧಿಸಿ ಸಮ್ಮೇಳನಕ್ಕೆ ಆಗಮಿಸುವ ಲಕ್ಷಾಂತರ ಜನತೆಗೆ ಸಸ್ಯಾಹಾರ ನೀಡಲು ಮುಂದಾಗುವ ಮೂಲಕ ಜನರ ಆಹಾರದ ಹಕ್ಕನ್ನು ಉಲ್ಲಂಘಿಸಲಾಗುತ್ತಿದೆ. ಜನರ ಭಾವನೆಗಳ ಜೊತೆ ಮಹೇಶ ಜೋಶಿ ಆಟ ಆಡುತ್ತಿದ್ದಾರೆ’ ಎಂದು ದೂರಿದರು.

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್‌. ಕೃಷ್ಣೇಗೌಡ ಮಾತನಾಡಿ, ‘ಮಂಡ್ಯ ಜಿಲ್ಲೆಯ ಹಬ್ಬ, ಸಂಭ್ರಮ, ಸಮ್ಮೇಳನಗಳು ಮಾಂಸಾಹಾರಿ ಊಟೋಪಚಾರಕ್ಕೆ ಹೆಸರುವಾಸಿಯಾಗಿವೆ. ಅಲ್ಲದೇ ಸಮ್ಮೇಳನದಲ್ಲಿ ಭಾಗವಹಿಸುವ ಬಹುಸಂಖ್ಯಾತರು ಮಾಂಸಾಹಾರಿಗಳೇ ಆಗಿರುವಾಗ ನಿಷೇಧ ಏತಕ್ಕಾಗಿ ಎಂಬುದನ್ನು ತಿಳಿಸಬೇಕು’ ಎಂದು ಒತ್ತಾಯಿಸಿದರು.

ವಿವಿಧ ಸಂಘಟನೆಯ ಮುಖಂಡರಾದ ಎಂ.ಬಿ. ನಾಗಣ್ಣಗೌಡ, ಎಚ್‍.ಡಿ. ಜಯರಾಮ್, ಎಂ.ವಿ. ಕೃಷ್ಣ,  ಬಿ.ಟಿ. ವಿಶ್ವನಾಥ್, ಗಂಗರಾಜು ಹನಕೆರೆ, ನಿರಂಜನ್, ಟಿ.ಡಿ. ನಾಗರಾಜ್, ನರಸಿಂಹಮೂರ್ತಿ, ಲಂಕೇಶ್ ಮಂಗಲ, ಲಕ್ಷ್ಮಣ್ ಚೀರನಹಳ್ಳಿ, ಅರವಿಂದ ಪ್ರಭು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.