ADVERTISEMENT

ಕಬ್ಬಿಣದ ಅದಿರು ರಫ್ತು ಮೇಲಿನ ನಿಷೇಧ: ಒಂದು ವಾರದಲ್ಲಿ ಸೂಕ್ತ ನಿರ್ಧಾರ -ನಿರಾಣಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2021, 12:21 IST
Last Updated 12 ಮಾರ್ಚ್ 2021, 12:21 IST
ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ
ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ   

ಧಾರವಾಡ: ‘ಕಬ್ಬಿಣದ ಅದಿರು ರಫ್ತು ಮತ್ತು ಸ್ಟೀಲ್‌ ಆಮದು ಮೇಲಿನ ನಿಷೇಧ ಸಡಿಲಗೊಳಿಸುವ ನಿಟ್ಟಿನಲ್ಲಿ ಒಂದು ವಾರದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಗಣಿ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ನಡಸಿದ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ‘ಸ್ಟೀಲ್ ಬೆಲೆ ದುಬಾರಿಯಾಗಿದೆ. ಆದರೆ ಇಲ್ಲಿ ಲಭ್ಯವಿರುವ ಕಚ್ಚಾ ಸಾಮಗ್ರಿಯ ಬೆಲೆ ತಗ್ಗಿದೆ. ಆದರೆ ಅದಿರು ಅಗ್ಗದ ಲಾಭ ಗ್ರಾಹಕರಿಗೆ ಸಿಗುತ್ತಿಲ್ಲ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಈಗಾಗಲೇ ಒಂದು ಬಾರಿ ಗಣಿ ಮಾಲೀಕರ ಸಭೆ ನಡೆಸಲಾಗಿದೆ. ಮುಂದಿನ ವಾರ ಮತ್ತೊಂದು ಸಭೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದರು.

‘ಹುಣಸವಾಡಿ ಮತ್ತು ಚಿಕ್ಕಬಳ್ಳಾಪುರ ಗಣಿ ಸ್ಫೋಟದ ನಂತರ ಗಣಿಕಗಾರಿಕೆಯನ್ನು ವೈಜ್ಞಾನಿಕವಾಗಿ ಹಾಗೂ ಸುರಕ್ಷಿತವಾಗಿ ನಡೆಸುವ ನಿಟ್ಟಿನಲ್ಲಿ ಸ್ಕೂಲ್ ಆಫ್‌ ಮೈನಿಂಗ್ ಎಂಬ ಗಣಿಗಾರಿಕೆ ಕುರಿತ ವಿಶ್ವವಿದ್ಯಾಲಯವನ್ನೇ ಸ್ಥಾಪಿಸುವ ಚಿಂತನೆ ನಡೆದಿದೆ. ಈಗಾಗಲೇ ಇಲಾಖೆಯ ಅಧಿಕಾರಿಗಳು ಮತ್ತು ಗಣಿ ನಡೆಸುವವರಿಗೆ ತರಬೇತಿ ನೀಡಲಾಗುತ್ತಿದೆ’ ಎಂದರು.

ADVERTISEMENT

‘ಗಣಿಗಾರಿಕೆ ಮತ್ತು ಮರಳು, ಜಲ್ಲಿ ಮಾರಾಟದಲ್ಲಿ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ನೂತನ ಮರಳು ನೀತಿಯ ಕರಡು ಸಿದ್ಧಗೊಂಡಿದೆ. ಅದನ್ನು ಕೂಲಂಕಶವಾಗಿ ಅಧ್ಯಯನ ನಡೆಸಿದ ನಂತರ ಅಂತಿಮಗೊಳಿಸಲಾಗುವುದು. ಇದರಿಂದ ಕಡಿಮೆ ಖರ್ಚಿನಲ್ಲಿ ಮನೆ ಕಟ್ಟಿಸುವವರಿಗೆ ಕಡಿಮೆ ದರದಲ್ಲಿ ಮರಳು, ಜೆಲ್ಲಿ ಸಿಗಲಿದೆ. ಹಾಗೆಯೇ ಸರ್ಕಾರದ ಆದಾಯಕ್ಕೂ ಯಾವುದೇ ನಷ್ಟವಾಗದು. 2026ರವರೆಗೆ ಅನ್ವಯವಾಗುವಂತೆ ನೀತಿ ರೂಪಿಸಲಾಗುತ್ತಿದೆ’ ಎಂದು ನಿರಾಣಿ ಹೇಳಿದರು.

‘ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ನಡೆಸಿದ ಗಣಿಗಾರಿಕೆಯಿಂದ ₹ 12ಸಾವಿರ ಕೋಟಿ ರಾಜಸ್ವ ಧನ ಸಂಗ್ರಹಿಸಲಾಗಿದೆ. ಇದಕ್ಕೆ ಬಡ್ಡಿ ಸೇರಿ ₹ 18ಸಾವಿರ ಕೋಟಿಯಾಗಿದೆ. ಇದನ್ನು ಪಡೆಯಲು ಕೇಂದ್ರ ಸರ್ಕಾರದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಅದು ಸಿಕ್ಕರೆ, ಅದಕ್ಕೆ ಮತ್ತು ₹ 7ಸಾವಿರ ಕೋಟಿ ಸೇರಿಸಿ ₹ 25ಸಾವಿರ ಕೋಟಿ ಮೊತ್ತದ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುವುದು’ ಎಂದು ತಿಳಿಸಿದರು.

‘ಗಣಿಗಾರಿಕೆ ನಡೆಸುವವರಿಗೆ ಕಂದಾಯ, ಗಣಿ ಇಲಾಖೆ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆಯ ಅನುಮತಿ ಕಡ್ಡಾಯ. ಇದನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಏಕಗವಾಕ್ಷಿ ಪದ್ಧತಿಯನ್ನು ಜಾರಿಗೆ ತರಲಾಗುತ್ತಿದೆ. ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಮಳೆಗಾಲ ಆರಂಭವಾಗುವವರೆಗೂ ಪರವಾನಗಿ ಹೊಂದಿರುವವರ ಸಹಕಾರದೊಂದಿಗೆ ಇತರ ಗಣಿಯವರು ಬ್ಲಾಸ್ಟಿಂಗ್ ನಡೆಸಿ ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿದೆ’ ಎಂದರು.

2ಎ ಮೀಸಲಾತಿ ಹೋರಾಟ ಕುರಿತು ಕೇಳಿದ ಪ್ರಶ್ನೆಗೆ, ‘ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗಬೇಕು ಎಂಬುದು ನನ್ನ ಅಭಿಪ್ರಾಯವೂ ಹೌದು. ಮಲ್ಲಿಕಾರ್ಜುನ ಖರ್ಗೆ ಅವರಂತೆ ಹೆಲಿಕಾಪ್ಟರ್‌ನಲ್ಲಿ ಓಡಾಡುವವರು ನಮ್ಮಲ್ಲಿ ಇಲ್ಲ. ಆರ್ಥಿಕವಾಗಿ ಹಿಂದುಳಿದ ಪಂಚಮಸಾಲಿ ಸಮುದಾಯ ಕುರಿತು ಹಿಂದುಳಿದ ಆಯೋಗ ಅಧ್ಯಯನ ನಡೆಸಿ ವರದಿ ನೀಡಲು ಈಗಾಗಲೇ ಸರ್ಕಾರ ಸೂಚನೆ ನೀಡಿದೆ. ಆದಷ್ಟು ಬೇಗ ಆಗಲಿದೆ’ ಎಂದರು.

ರಮೇಶ ಜಾರಕಿಹೊಳಿ ರಾಸಲೀಲೆ ವಿಡಿಯೊ ಕುರಿತು ಮಾತನಾಡಿದ ನಿರಾಣಿ, ‘ಅದೊಂದು ನಕಲಿ ಸಿಡಿ ಎಂದು ಅವರೇ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ತನಿಖೆಗೂ ಸರ್ಕಾರ ಸೂಚಿಸಿದೆ. ಆದಷ್ಟು ಬೇಗ ಅವರು ಆರೋಪ ಮುಕ್ತರಾಗಿ ಹೊರಬರುತ್ತಾರೆ’ ಎಂದು ನಿರಾಣಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.