ADVERTISEMENT

ಮುಂಬಡ್ತಿಗೆ ಹಿಂದೇಟು: ಸಚಿವರ ಸಿಟ್ಟು

ಮುಖ್ಯಕಾರ್ಯದರ್ಶಿಗೆ ಪತ್ರ ಬರೆದ ಪರಮೇಶ್ವರ, ಪ್ರಿಯಾಂಕ್‌ ಖರ್ಗೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 19:21 IST
Last Updated 4 ಜೂನ್ 2019, 19:21 IST
   

ಬೆಂಗಳೂರು: ಹಿಂಬಡ್ತಿಗೆ ಒಳಗಾಗಿದ್ದ ಪರಿಶಿಷ್ಟ ಜಾತಿಯ ನೌಕರರಿಗೆ ಮರು ಬಡ್ತಿ ನೀಡುವ ವಿಷಯದಲ್ಲಿ ಇಲಾಖೆಗಳು ಕ್ರಮವಹಿಸದೇ ಇರುವುದಕ್ಕೆ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಹಾಗೂ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಮುಖ್ಯ ಕಾರ್ಯದರ್ಶಿಗೆ ಸುದೀರ್ಘ ಪತ್ರ ಬರೆದಿರುವ ಇಬ್ಬರು ಸಚಿವರು, ಹಿಂಬಡ್ತಿಗೆ ಒಳಗಾಗಿದ್ದ ಅಧಿಕಾರಿ, ನೌಕರರಿಗೆ ಹಿಂದಿನ ದಿನಾಂಕದಿಂದ ಪೂರ್ವಾನ್ವಯವಾಗುವಂತೆ ಮತ್ತೆ ಬಡ್ತಿ ನೀಡಬೇಕು ಎಂದು ಆದೇಶ ಹೊರಡಿಸಿ 15 ದಿನ ಕಳೆದರೂ ಇಲಾಖೆಗಳು ಕ್ರಮವಹಿಸದೇ ಇರುವುದು ದುರದೃಷ್ಟಕರ. ಕೂಡಲೇ ಈ ಬಗ್ಗೆ ಕ್ರಮವಹಿಸಬೇಕು ಎಂದು ಪ್ರತಿಪಾದಿಸಿದ್ದಾರೆ.

ರಾಜ್ಯ ಸರ್ಕಾರ 2000ನೇ ಸಾಲಿನಲ್ಲಿ ತಂದಿದ್ದ ಬಡ್ತಿ ಮೀಸಲಾತಿ ಕಾಯ್ದೆಯನ್ನು ಸುಪ್ರೀಂಕೋರ್ಟ್‌ ರದ್ದುಪಡಿಸಿದ ಬಳಿಕ ಈ ಕಾಯ್ದೆ ಆಧರಿಸಿ ಬಡ್ತಿ ಪಡೆದಿದ್ದ ಪರಿಶಿಷ್ಟ ಜಾತಿಯ ನೌಕರರಿಗೆ ಹಿಂಬಡ್ತಿ ನೀಡಲಾಗಿತ್ತು. ಸಾಮಾಜಿಕ ನ್ಯಾಯ ಪಾಲನೆಯ ಆಧಾರದ ಮೇಲೆ ಹಿಂಬಡ್ತಿಗೆ ಒಳಗಾಗಿದ್ದ ನೌಕರರಿಗೆ ಸೂಪರ್‌ ನ್ಯೂಮರರಿ ಹುದ್ದೆ ಸೃಷ್ಟಿಸಲು ಮುಂದಾಗಿದ್ದ ಹಿಂದಿನ ಕಾಂಗ್ರೆಸ್ ಸರ್ಕಾರ, ಇದಕ್ಕಾಗಿ ತತ್ಪರಿಣಾಮ ಜ್ಯೇಷ್ಠತೆ ವಿಸ್ತರಿಸುವ ಮಸೂದೆ ಮಂಡಿಸಿತ್ತು. ಇದಕ್ಕೆ ರಾಷ್ಟ್ರಪತಿ ಅಂಗೀಕಾರ ಹಾಕಿದ್ದರು. ಬಳಿಕ, ರಾಜ್ಯ ಸರ್ಕಾರ ಕಾಯ್ದೆಯನ್ನು ಜಾರಿಗೆ ತರಬೇಕಾಗಿತ್ತು.

ADVERTISEMENT

ಬಡ್ತಿ ಮೀಸಲಾತಿ ಕಾಯ್ದೆ ರದ್ದತಿಯಿಂದಾಗಿ ಪರಿಶಿಷ್ಟರು ಹಿಂಬಡ್ತಿಗೆ ಒಳಗಾಗಿದ್ದರು. ಅವರ ಜಾಗದಲ್ಲಿ ಒಕ್ಕಲಿಗರು, ಲಿಂಗಾಯತರು, ಬ್ರಾಹ್ಮಣರು, ಕೆಲವು ಹಿಂದುಳಿದ ವಗರ್ದವರಿಗೆ ಬಡ್ತಿ ಸಿಕ್ಕಿತ್ತು. ಅವರು ಕಾಯ್ದೆ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದರು.‌

ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಾಗ ಪರಿಶಿಷ್ಟ ಸಮುದಾಯ ಪ್ರತಿನಿಧಿಸುವ ಸಚಿವರು ಕಾಯ್ದೆ ಜಾರಿಗೆ ಪಟ್ಟು ಹಿಡಿದಿದ್ದರೆ, ಇತರೆ ಸಮುದಾಯದ ಕೆಲವು ಸಚಿವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮನವೊಲಿಕೆ ಬಳಿಕ ಕಾಯ್ದೆ ಜಾರಿಗೆ ಸರ್ಕಾರ ಮುಂದಾಗಿತ್ತು. ಈ ಸಂಬಂಧ ಆದೇಶವೂ ಹೊರಬಿದ್ದಿತ್ತು.

ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಸೇರಿದಂತೆ ಕೆಲವರು ತತ್ಪರಿಣಾಮ ಜ್ಯೇಷ್ಠತೆ ವಿಸ್ತರಿಸುವ ಕಾಯ್ದೆ ಜಾರಿಗೆ ತಕರಾರು ತೆಗೆದಿದ್ದರು. ಹೀಗಾಗಿ, ಅವರ ‘ಹಿಡಿತ’ದಲ್ಲಿರುವ ಅನೇಕ ಇಲಾಖೆಗಳಲ್ಲಿ ಹಿಂಬಡ್ತಿಗೆ ಒಳಗಾಗಿದ್ದ ಪರಿಶಿಷ್ಟ ಜಾತಿಯ ಅಧಿಕಾರಿ, ನೌಕರರಿಗೆ ಸೂಪರ್ ನ್ಯೂಮರರಿ ಹುದ್ದೆ ಸೃಷ್ಟಿಸಿ ಮುಂಬಡ್ತಿ ನೀಡಿರಲಿಲ್ಲ.

ಈ ಬೆಳವಣಿಗೆ ಬೆನ್ನಲ್ಲೇ, ಕಾಂಗ್ರೆಸ್ ಪ್ರತಿನಿಧಿಸುವ ಇಬ್ಬರು ಸಚಿವರು ಪತ್ರ ಬರೆದಿರುವುದು ಸರ್ಕಾರದಲ್ಲಿ ಸಹಮತ ಇಲ್ಲದೇ ಇರುವುದರ ದ್ಯೋತಕ ಇದು ಎಂಬ ಚರ್ಚೆಗೆ ಕಾರಣವಾಗಿದೆ.

ಸಚಿವರ ಅಸಮಾಧಾನವೇಕೆ?

‘ಲೋಕೋಪಯೋಗಿ ಇಲಾಖೆಯಲ್ಲಿ 441 ಜನರನ್ನು ಹಿಂಬಡ್ತಿ ಮಾಡಲಾಗಿತ್ತು. ಆ ಪೈಕಿ 373 ಜನರ ಹಿಂಬಡ್ತಿ ವಾಪಸ್‌ ಪಡೆಯಲಾಗಿದೆ. ಕೆಲವರನ್ನು ಉದ್ದೇಶಪೂರ್ವಕ ಕೈಬಿಡಲಾಗಿದೆ. ಈ ದಿನದವರೆಗೂ ಯಾರಿಗೂ ಮರು ನಿಯುಕ್ತಿ ಆದೇಶ ನೀಡಿರುವುದಿಲ್ಲ’ ಎಂದು ಪರಮೇಶ್ವರ ಹಾಗೂ ಪ್ರಿಯಾಂಕ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜ್ಯೇಷ್ಠತಾ ಪಟ್ಟಿಯನ್ನು ಸಿದ್ಧಪಡಿಸಲು ಮಾರ್ಗಸೂಚಿಯನ್ನು ಸಿದ್ಧಪಡಿಸಿ, ತರಬೇತಿಯನ್ನೂ ನೀಡಲಾಗಿದೆ. ಆದರೆ, ಕೆಲವು ಇಲಾಖೆಯ ಅಧಿಕಾರಿಗಳು ಉದ್ದೇಶಪೂರ್ವಕವಾಗಿ 2017 ಬಡ್ತಿ ಮೀಸಲಾತಿ ಕಾಯ್ದೆ ಪ್ರಕಾರ ನಿಗದಿಪಡಿಸದೇ ಸಂಬಂಧ ಪಡದ ಆದೇಶಗಳನ್ನು ಉಲ್ಲೇಖಿಸುತ್ತಿದ್ದಾರೆ. ಪರಿಶಿಷ್ಟ ಜಾತಿಯವರಿಗೆ ಜ್ಯೇಷ್ಠತೆ ನಿಗದಿಪಡಿಸಲು ಗೊಂದಲ ಉಂಟು ಮಾಡುತ್ತಿದ್ದಾರೆ. ಕೆಲವು ನಿಯಮಗಳನ್ನು ದುರುಪಯೋಗ ಪಡಿಸಿಕೊಂಡು ಕೆಲವು ಇಲಾಖೆಗಳು ಬಿ.ಕೆ. ಪವಿತ್ರ ಪ್ರಕರಣದಲ್ಲಿ ಸಿದ್ಧಪಡಿಸಿದ್ದ ಜ್ಯೇಷ್ಠತೆಗಳನ್ನು ಉಳಿಸಿಕೊಳ್ಳುತ್ತಿದ್ದಾರೆ.‍ಪವಿತ್ರ‍ಪ್ರಕರಣದ ಪೂರ್ವದಲ್ಲಿದ್ದ ಅಂದರೆ 2017ರ ಫೆಬ್ರುವರಿ 8ರಂದು ಅಸ್ತಿತ್ವದಲ್ಲಿ ಜ್ಯೇಷ್ಠತೆಯನ್ನು ಉಳಿಸಿಕೊಳ್ಳಲು ಸೂಚಿಸಬೇಕು.

ಲೋಕೋಪಯೋಗಿ, ತಾಂತ್ರಿಕ ಶಿಕ್ಷಣ, ಅಗ್ನಿಶಾಮಕ ಸೇವೆ, ಔಷಧ ನಿಯಂತ್ರಣ ಇಲಾಖೆಗಳಲ್ಲಿ ಮುಂಬಡ್ತಿ ನೀಡುವ ಕೆಲಸವನ್ನು ಕೂಡಲೇ ಪೂರ್ಣಗೊಳಿಸುವಂತೆ ಸೂಚಿಸಬೇಕು.

ಲೋಕೋಪಯೋಗಿ ಇಲಾಖೆಯಲ್ಲಿ ಜ್ಯೇಷ್ಠತೆಯನ್ನು ಅಂತಿಮಗೊಳಿಸಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಬೇಕು.

ಕಾಯ್ದೆ ಉಲ್ಲಂಘಿಸಿ ಜ್ಯೇಷ್ಠತೆ ಸಿದ್ಧಪಡಿಸಿದಲ್ಲಿ ಕರ್ತವ್ಯ ಲೋಪ ಎಂದು ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಸ್ಪಷ್ಟ ನಿರ್ದೇಶನ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.