ADVERTISEMENT

ರೊಹಟಗಿ ವಿರುದ್ಧ ‘ಅಹಿಂಸಾ’ಕಿಡಿ

ಬಡ್ತಿ ಮೀಸಲಾತಿ ಕಾಯ್ದೆ ಜಾರಿಗೊಳಿಸದಂತೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಜನವರಿ 2019, 19:26 IST
Last Updated 11 ಜನವರಿ 2019, 19:26 IST
ಅಲ್ಪಸಂಖ್ಯಾತ, ಹಿಂದುಳಿದ ಮತ್ತು ಸಾಮಾನ್ಯ ವರ್ಗಗಳ ನೌಕರರ ಒಕ್ಕೂಟದ (ಅಹಿಂಸಾ) ವತಿಯಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಧರಣಿಯಲ್ಲಿ ಪಾಲ್ಗೊಂಡಿದ್ದ ನೌಕರರು – ಪ್ರಜಾವಾಣಿ ಚಿತ್ರ
ಅಲ್ಪಸಂಖ್ಯಾತ, ಹಿಂದುಳಿದ ಮತ್ತು ಸಾಮಾನ್ಯ ವರ್ಗಗಳ ನೌಕರರ ಒಕ್ಕೂಟದ (ಅಹಿಂಸಾ) ವತಿಯಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಧರಣಿಯಲ್ಲಿ ಪಾಲ್ಗೊಂಡಿದ್ದ ನೌಕರರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜಕೀಯ ಒತ್ತಡಕ್ಕೆ ಮಣಿದು ನಿವೃತ್ತ ಅಟಾರ್ನಿ ಜನರಲ್‌ ಮುಕುಲ್‌ ರೊಹಟಗಿ ಅವರು ಬಡ್ತಿ ಮೀಸಲಾತಿ ಕಾಯ್ದೆ ಜಾರಿಗೊಳಿಸಬಹುದು ಎಂಬ ಸಲಹೆ ನೀಡಿದ್ದಾರೆ ಎಂದು ಅಲ್ಪಸಂಖ್ಯಾತ, ಹಿಂದುಳಿದ ಮತ್ತು ಸಾಮಾನ್ಯ ವರ್ಗಗಳ ನೌಕರರ ಒಕ್ಕೂಟವು(ಅಹಿಂಸಾ) ಕಿಡಿಕಾರಿದೆ.

ಬಡ್ತಿ ಮೀಸಲಾತಿ ಕಾಯ್ದೆ ಜಾರಿಗೊಳಿಸಬಾರದು ಎಂದು ಒತ್ತಾಯಿಸಿ ನಗರದಲ್ಲಿ ಶುಕ್ರವಾರ ಧರಣಿ ನಡೆಸಿದ ಒಕ್ಕೂಟದ ಪದಾಧಿಕಾರಿಗಳು ಬಳಿಕ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

‘ರೊಹಟಗಿ ಅವರ ಸಲಹೆ ಪೂರ್ವಗ್ರಹಪೀಡಿತ. ಕಾಯ್ದೆ ಜಾರಿಗೊಳಿಸಿ ನ್ಯಾಯಾಂಗ ನಿಂದನೆಯಾದರೆ ಅವರು ಹೊಣೆಯಾಗುವುದಿಲ್ಲ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅವರು ಹೊಣೆ ಹೊರಬೇಕಾಗುತ್ತದೆ’ ಎಂದು ಒಕ್ಕೂಟ ಎಚ್ಚರಿಸಿದೆ.

ADVERTISEMENT

‘ಈ ಕಾಯ್ದೆ ಜಾರಿ ಮಾಡಬಾರದು ಎಂದು ಕಾನೂನು ಇಲಾಖೆ ಸಲಹೆ ನೀಡಿದೆ. ಅಡ್ವೊಕೇಟ್‌ ಜನರಲ್‌ ಅವರು ಯಾವುದೇ ಸಲಹೆ ನೀಡಿಲ್ಲ. ರೊಹಟಗಿ ಅವರಿಗೆ ದೊಡ್ಡ ಮೊತ್ತದ ಶುಲ್ಕ ನೀಡಿ ಕಾನೂನು ಸಲಹೆ ಪಡೆಯುವ ಅವಶ್ಯಕತೆ ಏನಿತ್ತು’ ಎಂದು ಒಕ್ಕೂಟ ಪ್ರಶ್ನಿಸಿದೆ.

ಸ್ವಾತಂತ್ರ್ಯ ಉದ್ಯಾನದಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಸೇರಿದ್ದ ಒಕ್ಕೂಟದ ಸದಸ್ಯರು, ಬಹಿರಂಗ ಸಭೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಯಾರದ್ದೋ ಒತ್ತಡಕ್ಕೆ ಮಣಿದು ಶೇ82 ರಷ್ಟು ನೌಕರರಿಗೆ ಅನ್ಯಾಯ ಮಾಡದಿರಿ’ ಎಂಬ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು.

ಒಕ್ಕೂಟದ ಅಧ್ಯಕ್ಷ ಎಂ.ನಾಗರಾಜು, ‘ಕಾಯ್ದೆ ರದ್ದುಗೊಳಿಸಿ ಸುಪ್ರೀಂಕೋರ್ಟ್ ನೀಡಿದ ತೀರ್ಪು ಪಾಲನೆಯಿಂದ ಹಿಂಬಡ್ತಿ ಪಡೆಯುವ ನೌಕರರ ಹಿತರಕ್ಷಣೆಗೆ ರಾಜ್ಯ ಸರ್ಕಾರ ಹೊಸ ಕಾಯ್ದೆ ರೂಪಿಸಿತ್ತು. ಹೊಸ ಕಾಯ್ದೆ ವಿಷಯದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಸುಪ್ರೀಂ ಕೋರ್ಟ್‌ ಅ. 10ರಂದು ಮೌಖಿಕ
ವಾಗಿ ಹೇಳಿದೆ. ಆದರೂ ಪರಿಶಿಷ್ಟ ಸಮುದಾಯದ ನೌಕರರರು ಕಾಯ್ದೆ ಜಾರಿಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ’ ಎಂದು ಹೇಳಿದರು.

‘ಕಾಯ್ದೆ ಜಾರಿಗೆ ಅವಕಾಶ ಕೋರಿ ಪರಿಶಿಷ್ಟ ಸಮುದಾಯದ ನೌಕರರ ಸಂಘಟನೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಯಾವುದೇ ಆದೇಶ ನೀಡದೆ ಬಿ.ಕೆ. ಪವಿತ್ರ ಪ್ರಕರಣ ವಿಚಾರಣೆ ನಡೆಸುತ್ತಿರುವ ಪೀಠಕ್ಕೆ ವರ್ಗಾವಣೆ ಮಾಡಿದೆ. ಈ ಪೀಠ ಸದ್ಯಕ್ಕೆ ಯಾವುದೇ ಆದೇಶ ನೀಡಿಲ್ಲ. ಪರಿಶಿಷ್ಟ ಸಮುದಾಯದ ನೌಕರರ ಸಂಘದ ಒತ್ತಾಯಕ್ಕೆ ಮಣಿದು ಕಾಯ್ದೆ ಅನುಷ್ಠಾನಗೊಳಿಸಿದರೆ ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗುತ್ತದೆ’ ಎಂದರು.

‘ಪರಿಶಿಷ್ಟ ಜಾತಿ ಮತ್ತು ವರ್ಗದ ಕೆಲವು ಸಚಿವರು ಕೂಡ ಕಾಯ್ದೆ ಜಾರಿಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದು, ಆ ವಿಷಯ ಮಾಧ್ಯಮಗ
ಳಿಂದ ಗೊತ್ತಾಗಿದೆ. ಅದೇ ಕಾರಣಕ್ಕೆ ಒಂದು ದಿನದ ಧರಣಿ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ’ ಎಂದು ಅವರು ಹೇಳಿದರು.

ಕಾನೂನು ಪರಿಮಿತಿಯಲ್ಲಿ ನಿರ್ಧಾರ: ಸಿ.ಎಂ

ಎಲ್ಲ ವರ್ಗದ ಜನರ ಹಿತರಕ್ಷಣೆ ಮೈತ್ರಿ ಸರ್ಕಾರದ ಗುರಿ. ಕಾನೂನು ಪರಿಮಿತಿಯಲ್ಲಿ ಬಡ್ತಿ ಮೀಸಲಾತಿ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಈ ಬಗ್ಗೆ ಸಚಿವ ಸಂಪುಟ ಸಭೆಗಳಲ್ಲಿ ಹಲವು ಸಲ ಚರ್ಚೆ ನಡೆಸಲಾಗಿದೆ. ಯಾರೂ ಅಸಮಾಧಾನಕ್ಕೆ ಒಳಗಾಗದಂತೆ ಎರಡು ಗುಂಪುಗಳಿಗೂ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ. ಈ ಸಮಸ್ಯೆಯನ್ನು ಸುಗಮವಾಗಿ ಬಗೆಹರಿಸುತ್ತೇವೆ’ ಎಂದರು.

‘ಬಡ್ತಿ ಮೀಸಲಾತಿ ಗೊಂದಲ ಬಗೆಹರಿಸಲು ಹಿಂದಿನ ಕಾಂಗ್ರೆಸ್‌ ಸರ್ಕಾರ ಕಾಯ್ದೆ ಜಾರಿಗೆ ತಂದಿದೆ. ಕಾನೂನು ತಜ್ಞರ ಜತೆಗೆ ಸಮಾಲೋಚಿಸಿ ಅದನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.